ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರು ಮೈಸೂರಿನಲ್ಲಿ ನಡೆದ ಮಹಿಷ ದಸರಾ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಒಕ್ಕಲಿಗರು ಸಂಸ್ಕೃತಿ ಹೀನರೆಂದು ಕುವೆಂಪು ಹೇಳಿದ್ದರು” ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜ ವಿಧಾನಸಭಾ ಕ್ಷೇತ್ರದ ಒಕ್ಕಲಿಗರ ಸಂಘದ ಕೆಲವರು ಒಕ್ಕಲಿಗ ಸಮುದಾಯದವರೇ ಆದ ಭಗವಾನ್ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬೆನ್ನಲ್ಲೇ ಚರ್ಚೆ ಕಾವೇರಿದೆ.
ಕುವೆಂಪು ಅವರು ಬರೆದಿರುವ ಸಾಲುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕರು, ಭಗವಾನ್ ಅವರ ಹೇಳಿಕೆಗೆ ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಪ್ರತಿಕ್ರಿಯಿಸಿ, “ಭಗವಾನ್ ಅವರು— ನಮ್ಮೆಲ್ಲರ ಹಾಗೆ— ತನ್ನನ್ನು ತಾನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ (ಆರ್ಟಿಕಲ್ 19). ಅವರು ಹೇಳಿದ್ದ ಮಾತುಗಳು ಕುವೆಂಪು ಅವರ ಮಾತುಗಳೆಂದು ಹೇಳಲಾಗಿದೆ. ಯಾವುದೇ ಹಿಂಸೆಯನ್ನು ಅಥವಾ ನಿಂದನೆಯನ್ನು ಪ್ರತಿಭಟನಾಕಾರರು ಭಗವಾನ್ ಅವರಿಗೆ ತೋರಿಸದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಹಕ್ಕಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಎನ್.ರವೀಂದ್ರ ಅವರು ಪ್ರತಿಕ್ರಿಯಿಸಿ, “ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್‌ಗಳ ಪರ ವಿರೋಧದ ಚರ್ಚೆ ಆಯಿತು. ಈಗ ಕುವೆಂಪು ಸರದಿ. ಈಗಿನ ಸಂಘರ್ಷದ ದಿನಗಳಲ್ಲಿ, ಜಾತಿ ಜಾತಿಗಳ ದ್ವೇಷ ಇಮ್ಮಡಿಯಾಗುತ್ತಿರುವ ಕಾಲಘಟ್ಟದಲ್ಲಿ, ಒಕ್ಕಲಿಗರನ್ನ ಪಶುಗಳು ಎಂದು ಕುವೆಂಪು ಕರೆದಿದ್ದರು” ಎನ್ನುವುದು ಬೇಕಾಗಿರಲಿಲ್ಲ. ಒಕ್ಕಲುತನದ ಮೇಲೆ, ಶೂದ್ರ ಪರಿವಾರದ ಬಗೆಗೆ ಅಪಾರ ಪ್ರೀತಿಯನ್ನೂ, ಬ್ರಾಹ್ಮಣ್ಯದ ಬಗೆಗೆ ಅಪಾರ ಸಿಟ್ಟನ್ನೂ (ದ್ವೇಷವಲ್ಲ) ಹೊಂದಿದ್ದ ಕುವೆಂಪು ಅವರ ಹೆಸರನ್ನು ಭಗವಾನ್ ಹುಚ್ಚೆದ್ದು, ತನ್ನ ವಾದ ಸಮರ್ಥಿಸಿಕೊಳ್ಳಲು ಬಳಸಿಕೊಂಡಿರೋದು, ಶೂದ್ರ ಸಂಘಟನೆಯಲ್ಲಿ ನಂಬಿಕೆಯಿಟ್ಟಿರುವ ನನ್ನಂಥವರಿಗೆ ಆಘಾತವೇ ಸರಿ. ಅತಿರೇಕದ ಮಾತುಗಳಿಂದ , ವಿಘಟನೆಯೇ ಹೊರತು ಸಂಘಟನೆಯಲ್ಲ. ಇಂದಿನ ಕಾಲಘಟ್ಟಕ್ಕೆ, ಶೂದ್ರ ಸಂಘಟನೆಗೆ ಭಗವಾನ್ ಅಪಾಯಕಾರಿ. ಇಂಥವರಿಂದಾಗಿ, ಸರ್ದಾರ್ ಪಟೇಲರಂತೆ, ಸುಭಾಷ್ ಚಂದ್ರ ಬೋಸ್‌ರಂತೆ , ಭಗತ್ ಸಿಂಗ್‌ರಂತೆ ಕುವೆಂಪು ಕೂಡಾ ಬಿಜೆಪಿ ಪಾಲಾದರೆ ಅಚ್ಚರಿಯಿಲ್ಲ. ನಿಮಗಿದು ಇಂದು ಅರ್ಥವಾಗದಿದ್ದರೆ , ಮುಂದೊಂದು ದಿನ ಅರ್ಥ ಆಗ್ತದೆ” ಎಂದು ಎಚ್ಚರಿಸಿದ್ದಾರೆ.
ಹೋರಾಟಗಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಪೋಸ್ಟ್‌ನಲ್ಲಿ, “ದಾರ್ಶನಿಕ ಕವಿ ಕುವೆಂಪು ಅವರಂತೆಯೇ ಭಗವಾನ್ ಕೂಡಾ ಹುಟ್ಟಿನಿಂದ ಒಕ್ಕಲಿಗ ಸಮುದಾಯದ ಪ್ರಖ್ಯಾತ ವಿಚಾರವಾದಿ. ಕುವೆಂಪು ಮತ್ತು ಭಗವಾನ್ ಇಬ್ಬರೂ ಹಿಂದೂಧರ್ಮೀಯರು ತಾವಲ್ಲವೆಂದು ಘೋಷಿಸಿಕೊಂಡವರು. ಇಬ್ಬರೂ ಜಾತಿಯಾಚೆಗೆ ಜಿಗಿದವರು. ಕುವೆಂಪು ಅವರ ವಿಶ್ವಮಾನವತಾ ಆಶಯದ ವಿರುದ್ಧ ಕೆಲವರು ಕುವೆಂಪು ಹೆಸರಿಲ್ಲಿಯೇ ಒಕ್ಕಲಿಗ ಜಾತಿ ಸಂಘಟನೆಗಳನ್ನು ಕೂಡಾ ಕಟ್ಟಿಕೊಂಡಿದ್ದಾರೆ. ಕೆಲವು ಬಲಪಂಥೀಯ ಧೋರಣೆಯ ಒಕ್ಕಲಿಗರು ಭಗವಾನ್ ಅವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಕುವೆಂಪು ಅವರ ಹೆಸರಿನಿಂದ ಲಾಭವಿರುವಂತೆ ಪ್ರೊ.ಭಗವಾನ್ ಹೆಸರಿನಿಂದ ಒಕ್ಕಲಿಗರಿಗೆ ಯಾವುದೇ ರಾಜಕೀಯ ಲಾಭವಿರುವುದಿಲ್ಲ. ಒಕ್ಕಲಿಗರನ್ನು ಸಂಸ್ಕೃತಿಹೀನರೆಂದಿರುವ ಕುವೆಂಪು ಅವರನ್ನು ಸ್ವೀಕರಿಸಿರುವ ಒಕ್ಕಲಿಗರು, ಕುವೆಂಪು ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಭಗವಾನ್ ಅವರನ್ನು ದೂಷಣಾಕ್ರಮಣಕ್ಕೆ ಗುರಿಮಾಡಿಕೊಳ್ಳುವುದು ನಿಜಕ್ಕೂ ವಿಪರ್ಯಾಸಕರ” ಎಂದಿದ್ದಾರೆ.
ಲೇಖಕರಾದ ನಾಗೇಗೌಡ ಕೀಲಾರ ಅವರು ಪ್ರತಿಕ್ರಿಯಿಸಿ, “ಕುವೆಂಪು ಆಗಲಿ, ಭಗವಾನ್ ಆಗಲಿ ಒಕ್ಕಲಿಗರನ್ನು ಕೀಳಾಗಿ ನೋಡುತ್ತಾರೆ ಅಂತ ಹೇಳಿದರೆ ನಮ್ಮ ನಾಲಿಗೆಗೆ ಹುಳ ಬೀಳುತ್ತೆ. ಇವರಿಬ್ಬರೂ ಒಕ್ಕಲಿಗರು ಮಾತ್ರವಲ್ಲ, ಸಕಲ ಜೀವಿಗಳನ್ನು ಕೀಳಾಗಿ ಕಾಣುವವರಲ್ಲ ಅನ್ನುವುದನ್ನು ನಾವುಗಳು ಮೊದಲು ಅರ್ಥ ಮಾಡಿಕೊಂಡರೆ, ಮಿಕ್ಕ ವಿಚಾರ ಏನು ಅಂತ ನೋಡಬಹುದು. ಪ್ರತಿಯೊಂದು ಮಾತು ಒಂದು ಸಂದರ್ಭದ ಹಿನ್ನೆಲೆಯಲ್ಲಿ ಮಾತನಾಡಿರುತ್ತಾರೆ. ಕುವೆಂಪು ಒಕ್ಕಲಿಗರು ಮೂಢರು ಅಂತ ಮಾತ್ರ ಹೇಳಿಲ್ಲ, ಮಾತಿನ ಕೊನೆಗೆ ಇಡೀ ಶೂದ್ರ ಸಮುದಾಯವೇ ಮೂಢತ್ವದಿಂದ ಕೂಡಿದೆ ಅಂತ ಹೇಳುತ್ತಾರೆ. ಮೂಢತ್ವಕ್ಕೆ ಕಾರಣ ಏನು, ಅದನ್ನು ಹೇಗೆ ಹೊಗಲಾಡಿಸಿಕೊಳ್ಳಬೇಕು ಅನ್ನುವುದನ್ನು ಮಕ್ಕಳಿಗೆ ಹೇಳಿದಂತೆ ಪ್ರೀತಿಯಿಂದ ಹೇಳಿದ್ದಾರೆ. ನೆನಪಿರಲಿ ಕುವೆಂಪು ಅನ್ನುವುದು ಕಳೆದ ಶತಮಾನ ಕರ್ನಾಟಕ ಮತ್ತು ಇಂಡಿಯಾ ಕಂಡ ಒಂದು ದೊಡ್ಡ Cultural phenomenon. ಇಂತಹ ಒಂದು ಅಪೂರ್ವ Phenomenon ಮತ್ತೊಮ್ಮೆ ಘಟಿಸಲು ಕರ್ನಾಟಕದ ಮಣ್ಣಿಗೆ ಇನ್ನೆಷ್ಟು ಶತಮಾನ ಹಿಡಿಯುತ್ತದೆ ಅಂತ ಹೇಳೋದು ಬಹಳ ಕಷ್ಟ. ಕುವೆಂಪು ಅವರು ನಮಗೆ ನೀಡಿರುವ ಅರಿವನ್ನು ಭಗವಾನ್ ಅವರು ಒಂದು ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪ ಮಾಡಿದ್ದಾರೆ. ನಮ್ಮ ಅಪ್ಪ ಅವ್ವ ನಮಗೆ ಹೆಂಗೆ ಒಂಚೂರು ಖಾರವಾಗಿ ಬುದ್ಧಿ ಹೇಳುತ್ತಾರೆ ಅದೇ ರೀತಿಯಲ್ಲಿ ಭಗವಾನ್ ರವರು ಹಿರಿತನದ ಹಿನ್ನೆಲೆಯಲ್ಲಿ ಕುವೆಂಪು ರವರ ಮಾತನ್ನು ಮತ್ತೊಮ್ಮೆ ನಮಗೆಲ್ಲರಿಗೂ ನೆನಪಿಸಿ ಬುದ್ಧಿ ಹೇಳಿದ್ದಾರೆ ಅಷ್ಟೇ. ಕುವೆಂಪು ತಮ್ಮ ಜೀವಮಾನ ನಮ್ಮಂತಹ ಮೂಢರಿಗೆ ಬ್ರಾಹ್ಮಣ್ಯದ, ಹಾರುವರ ದಗಾಕೋರತನದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿ ಹೇಳಿದ ಹಾಗೆ ಬಿಡಿಸಿ ಬಿಡಿಸಿ ತಿಳಿ ಹೇಳಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬರಹಗಾರ ಶಿವಕುಮಾರ್ ಶರ್ಮಾ ಪ್ರತಿಕ್ರಿಯಿಸಿ, “ಕುವೆಂಪು ಅವರ ಈ ಕೆಳಗಿನ ಲೇಖನ ಓದಿ, ಆಮೇಲೆ ಕೆ ಎಸ್ ಭಗವಾನ್ ಅವರನ್ನು ವಿರೋಧಿಸಿರಿ. ಹಿಂದೂ ಧರ್ಮದ ಅಸಮಾನತೆ, ಹುಳುಕುಗಳನ್ನು ಎತ್ತಿ ತೋರಿಸುವ ಯಾರಾದರೂ ಸರಿಯೇ ಅವರೆಲ್ಲ ಹಿಂದೂ ವಿರೋಧಿಗಳು ಅಲ್ವೇ ? ಒಂದು ವಿಚಾರ ತಿಳ್ಕೊಳ್ಳಿ, ಮಹಾತ್ಮ ಬಸವೇಶ್ವರ ಬರುವ ಪೂರ್ವದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಎಲ್ಲರೂ ಶೂದ್ರರೇ ; ತೀರ ಇತ್ತೀಚಿಗೆ ಯಾರೆಲ್ಲ ತಮ್ಮ ರಾಜಕೀಯ ತೆವಲಿಗೆ ಹಿಂದೂ – ಹಿಂದುತ್ವದ ಹೆಸರಿನಲ್ಲಿ ಬಡ ಅಮಾಯಕರ ಮಕ್ಕಳನ್ನು ಬಲಿ ಪಶು ಮಾಡುತ್ತಿರುವುದು ಸೂರ್ಯ – ಚಂದ್ರರಷ್ಟೆ ಸತ್ಯ” ಎಂದು ತಿಳಿಸಿದ್ದಾರೆ.