ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಅಭಾವ ನೀಗಿಸಲು ಖರೀದಿಯೊಂದಿಗೆ ಲಭ್ಯವಿರುವ ವಿದ್ಯುತ್ ಘಟಕಗಳ ಉತ್ಪಾದನೆ ಹೆಚ್ಚಿಸಲು ಮುಂದಾಗಿರುವ ಇಂಧನ ಇಲಾಖೆಗೆ ರಾಜ್ಯದ ಶಾಖೋತ್ಪನ್ನ ಕೇಂದ್ರಗಳ ತಾಂತ್ರಿಕ ಸಮಸ್ಯೆ ಬಿಕ್ಕಟ್ಟಾಗಿ ಪರಿಣಮಿಸಿದೆ.
ರಾಯಚೂರು ಶಾಖೋತ್ಪನ್ನ ಕೇಂದ್ರದ ಎಂಟು ಘಟಕಗಳಲ್ಲಿ ಮೂರು ಘಟಕಗಳು ಸ್ಥಗಿತಗೊಂಡು ದುರಸ್ತಿ ಹಂತದಲ್ಲಿರುವುದರಿಂದ 630 ಮೆ.ವ್ಯಾ ವಿದ್ಯುತ್ ಕೊರತೆ ಎದುರಾಗಿದೆ. ಯರಮರಸ್ ಸೂಪರ್ ಕ್ರಿಟಿಕಲ್ ಕೇಂದ್ರದಿಂದ 1600 ಮೆ.ವ್ಯಾ ವಿದ್ಯುತ್ ಸಾಮರ್ಥ್ಯವಿದ್ದರೂ ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಂಡಿದೆ.
ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಮೂರು ಘಟಕಗಳಿಂದ 1700 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದು, ಮೂರನೇ ಘಟಕ ಪೂರ್ಣ ಸ್ಥಗಿತಗೊಂಡು ಎರಡು ಘಟಕಗಳಿಂದ 560 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಸಾಧ್ಯವಾಗಿದೆ.
ಕಲ್ಲಿದ್ದಲು ಕೊರತೆ ನೀಗಿಸಿಕೊಂಡು ತಾಂತ್ರಿಕ ಸಮಸ್ಯೆಗಳನ್ನು ನಿಗದಿತ ಅವಧಿಯಲ್ಲಿ ನಿವಾರಣೆ ಮಾಡಿಕೊಳ್ಳದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. ರಾಜ್ಯ ಸರ್ಕಾರದಿಂದ ಕಲ್ಲಿದ್ದಲು ಖರೀದಿಗೆ ₹638 ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿರುವುದೂ ಕೂಡ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ 12 ಸಾವಿರ ಮೆ.ವ್ಯಾ ವಿದ್ಯುತ್ ಬೇಡಿಕೆಯಿದ್ದು, ಉತ್ಪಾದನೆ ಕುಸಿತವಾಗುತ್ತಿದೆ. ಕೇಂದ್ರ ಗ್ರೀಡ್ ಸೇರಿದಂತೆ ಇತರೆ ಮೂಲಗಳಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಬೇರೆಡೆಯಿಂದ ವಿದ್ಯುತ್ ಖರೀದಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಈ ಹಿಂದೆಯೂ ವಿದ್ಯುತ್ ಖರೀದಿ ಮಾಡಿದ್ದರೂ ಕೂಡ ಕೊರತೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ರಾಜ್ಯದ ಶಾಖೋತ್ಪನ್ನ ಘಟಕಗಳಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದ ಪರಸ್ಥಿತಿ ನಿಯಂತ್ರಣ ತಪ್ಪಲು ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ದಸರಾ ವಿಶೇಷ; ಬೆಂಗಳೂರು, ಚಾಮರಾಜನಗರದಿಂದ ಮೈಸೂರಿಗೆ ಹೆಚ್ಚುವರಿ ರೈಲು
ಬಿಸಿಲಿನ ಪ್ರಖರತೆ ಹೆಚ್ಚಳವಾಗುತ್ತಿದ್ದು, ಬೇಡಿಕೆ ಹೆಚ್ಚಳವಾಗುತ್ತಲೇ ಇದೆ. ಕೃಷಿ ಪಂಪಸೆಟ್‌ಗಳು ಸೇರಿದಂತೆ ಹಲವು ವಲಯಗಳಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದರೂ ಸಮಸ್ಯೆ ನಿವಾರಣೆಯಾಗುತ್ತಿಲ್ಲ.
ಈಗಾಗಲೇ ಸ್ಥಗಿತಗೊಂಡಿರುವ ವಿದ್ಯುತ್ ಘಟಕಗಳ ಉತ್ಪಾದನೆಗೆ ಕರ್ನಾಟಕ ವಿದ್ಯುತ್ ನಿಗಮ ಅಣಿಗೊಳಿಸುವ ಪ್ರಯತ್ನ ಪ್ರಾರಂಭಿಸಿದೆ. ಆದರೂ ಅದು ಸಾಧ್ಯವಾಗದೇ ಹೋಗಿದೆ. ತಾಂತ್ರಿಕ ಸಮಸ್ಯೆಗಳಿಂದ ಹೊರಬರಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವದು ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ.
ವರದಿ: ಹಫೀಜುಲ್ಲ