”ಒಕ್ಕಲಿಗರ ಎಚ್ಚರಿಕೆಗೆ ಮಣಿದ ದಸರಾ ಸಮಿತಿ; ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ.ಭಗವಾನ್‌ಗೆ ಕೊಕ್” ಎಂಬ ಹೆಡ್‌ಲೈನ್ ನೀಡಿ ಕನ್ನಡದ ಮುಖ್ಯವಾಹಿನಿ ಮಾಧ್ಯಮವಾದ ’ಟಿವಿ9 ಕನ್ನಡ’ ಸುದ್ದಿ ಪ್ರಕಟಿಸಿದೆ. ಆದರೆ ಈ ಸುದ್ದಿ ತಿರುಚಿದ ಅಂಶಗಳನ್ನು ಒಳಗೊಂಡಿದೆ.
ಸುದ್ದಿಯ ಮೊದಲ ಪ್ಯಾರಾದಲ್ಲಿ “ಒಕ್ಕಲಿಗರು ಸಂಸ್ಕೃತಿಹೀನ ಪಶುಗಳು. ಪ್ರೊಫೆಸರ್ ಕೆ.ಎಸ್.ಭಗವಾನ್ ನೀಡಿದ ಈ ಹೇಳಿಕೆ ಇದೀಗ ರಾಜ್ಯದಲ್ಲಿ ಕಿಡಿ ಹೊತ್ತಿಸಿದೆ. ಈ ಹೇಳಿಕೆ ನೀಡಿ ಮಾತು ಮುಂದುವರಿಸಿದ ಭಗವಾನ್, ‘ನಂದಲ್ಲಪ್ಪ ಕುವೆಂಪು ಅವರು ಹೇಳಿದ್ದು’ ಅಂತಾನೂ ಹೇಳಿದ್ದಾರೆ. ಆದ್ರೆ, ಭಗವಾನ್ ಆಡಿದ ಈ ಮಾತಿಗೆ ಒಕ್ಕಲಿಗ ಸಮುದಾಯ ರೊಚ್ಚಿಗೆದ್ದಿದೆ. ಅಲ್ಲದೇ ರಾಜ್ಯ ಒಕ್ಕಲಿಗರ ಪಡೆಯ ಪ್ರತಿಭಟನೆ ಎಚ್ಚರಿಕೆಗೆ ದಸರಾ ಸಮಿತಿ ಮಣಿದಿದ್ದು, ದಸರಾ ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ.ಭಗವಾನ್‌ಗೆ ಕೊಕ್ ನೀಡಲಾಗಿದೆ’’ ಎಂದು ಬರೆಯಲಾಗಿದೆ. (ಅರ್ಕೈವ್ ಲಿಂಕ್ ನೋಡಲು ’ಇಲ್ಲಿ’ ಕ್ಲಿಕ್ ಮಾಡಿ)

ಮುಂದುವರಿದು, “ಭಗವಾನ್ ಬದಲು ಸಾಹಿತಿ ಡಿ.ಕೆ.ರಾಜೇಂದ್ರ ಅವರಿಂದ ಕವಿಗೋಷ್ಠಿ ಉದ್ಘಾಟಿಸಲಾಗುತ್ತಿದೆ” ಎಂದು ತಿಳಿಸಲಾಗಿದೆ.
ವಾಸ್ತವವೇನು?
’ಭಗವಾನ್ ಅವರಿಗೆ ಕೊಕ್ ನೀಡಿದ್ದು’ ನಿಜವೇ ಎಂದು ತಿಳಿಯಲು ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯದರ್ಶಿ ಎಂ.ಎಸ್.ಗಿರಿಧರ್ ಅವರನ್ನು ’ಈದಿನ.ಕಾಂ’ ಸಂಪರ್ಕಿಸಿತು. ಟಿವಿ9 ವರದಿಯನ್ನು ಸ್ಪಷ್ಟವಾಗಿ ಅಲ್ಲಗಳೆದ ಅವರು, “ಭಗವಾನ್ ಅವರು ಒಕ್ಕಲಿಗರಿಗೆ ಸಂಬಂಧಿಸಿದ ಹೇಳಿಕೆ ನೀಡಿರುವುದು ಮಹಿಷ ದಸರಾ ಕಾರ್ಯಕ್ರಮದಲ್ಲಿ. ಆದರೆ ಮಹಿಷ ದಸರಾ ನಡೆಯುವುದಕ್ಕಿಂತ ಒಂದು ವಾರ ಮೊದಲೇ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ. ದಸರಾ ಯುವ ಕವಿಗೋಷ್ಠಿಗಾಗಲೀ, ಮತ್ಯಾವುದೇ ದಸರಾ ಕವಿಗೋಷ್ಠಿಗಾಗಲೀ ಅವರನ್ನು ಆಹ್ವಾನಿಸಿಯೇ ಇರಲಿಲ್ಲ. ಹೀಗಿರುವಾಗ ಭಗವಾನ್ ಅವರಿಗೆ ಕೊಕ್ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ’ಒಕ್ಕಲಿಗರು ಸಂಸ್ಕೃತಿ ಹೀನರು’ ಹೇಳಿಕೆ; ಪ್ರೊ.ಭಗವಾನ್ ಸುತ್ತ ಕಾವೇರಿದ ಚರ್ಚೆ
ಗಿರಿಧರ್ ಅವರು ಹಂಚಿಕೊಂಡ ಆಮಂತ್ರಣ ಪತ್ರಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನೆಯನ್ನು ಸಾಹಿತಿ ಜಯಂತ ಕಾಯ್ಕಿಣಿ ಮಾಡಲಿದ್ದಾರೆ. ಜೊತೆಗೆ ಹಾಸ್ಯ-ಚುಟುಕು ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಯುವ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ- ಹೀಗೆ ವಿವಿಧ ಕವಿಗೋಷ್ಠಿಗಳನ್ನು ದಸರಾ ಕವಿಗೋಷ್ಠಿ ಉಪಸಮಿತಿ ಆಯೋಜಿಸಿದೆ. ಬೇರೆ ಬೇರೆ ಕವಿಗೋಷ್ಠಿಗಳಿಗೆ ಬೇರೆ ಬೇರೆ ಉದ್ಘಾಟಕರು, ಅಧ್ಯಕ್ಷತೆ ವಹಿಸುವವರು ಇದ್ದಾರೆ. ದಸರಾ ಯುವ ಕವಿಗೋಷ್ಠಿಗೆ ಯಾವುದೇ ಉದ್ಘಾಟಕರಿಲ್ಲ. ಆದರೆ ಕವಯತ್ರಿ ಡಾ.ವಿನಯಾ ಒಕ್ಕುಂದ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಉತ್ಪ್ರೇಕ್ಷಿತ ವರದಿಯ ಮೂಲವನ್ನು ತಿಳಿಯಲು ಟಿವಿ9 ಕನ್ನಡದ ಮೈಸೂರು ವರದಿಗಾರನನ್ನು ಸಂಪರ್ಕಿಸಿದಾಗ ಅವರು ಹೇಳಿದ್ದೇ ಬೇರೆ. “ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಯುವ ಕವಿಗೋಷ್ಠಿಗೆ ಉದ್ಘಾಟಕರಾಗಿ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಆಹ್ವಾನಿಸಲಾಗಿತ್ತು. ಆ ಕಾರ್ಯಕ್ರಮದಿಂದ ಕೈಬಿಡಲಾಗಿದೆ” ಎಂದರು. ಆದರೆ ಸುದ್ದಿಯಲ್ಲಿ ಎಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ ಹೆಸರಿನ ಉಲ್ಲೇಖವಿಲ್ಲ. ಹೀಗಾಗಿ ಓದುಗರು ಗೊಂದಲಗೊಳ್ಳುವಂತಾಗಿದೆ. ಸರ್ಕಾರ ಆಯೋಜಿಸಿರುವ ಮೈಸೂರು ದಸರಾ ಕವಿಗೋಷ್ಠಿಯಿಂದಲೇ ಭಗವಾನ್ ಅವರನ್ನು ಕೈಬಿಡಲಾಗಿದೆ ಎಂಬಂತೆ ಭಾಸವಾಗುತ್ತದೆ. ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳುವಂತೆ ವರದಿಯನ್ನು ಬರೆಯಲಾಗಿದೆ.


ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.