- ತೆರಿಗೆ ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ: ಸಿಎಂ
- ಬಿಜೆಪಿಯವರ ಪ್ರತಿಭಟನೆಯನ್ನು ಜನ ನಂಬುವುದಿಲ್ಲ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ. ಎಲ್ಲೋ ಹಣ ಸಿಕ್ಕಿದೆ ಎಂದ ಮಾತ್ರಕ್ಕೆ ರಾಜಕೀಯವಾಗಿ ತಳಕು ಹಾಕುವುದು ಸರಿಯಲ್ಲ. ಬಿಜೆಪಿಯವರು ಆಧಾರ ರಹಿತವಾಗಿ ಸುಮ್ಮನೇ ಆರೋಪ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಜೆಪಿಯವರ ಪ್ರತಿಭಟನೆಯನ್ನು ಜನ ನಂಬುವುದಿಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದರು.
ಕಾಂಗ್ರೆಸ್ ಗುತ್ತಿಗೆದಾರರು ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಗುತ್ತಿಗೆದಾರರಲ್ಲಿ ಕಾಂಗ್ರೆಸ್ ಗುತ್ತಿಗೆದಾರರು, ಬಿಜೆಪಿ ಗುತ್ತಿಗೆದಾರರು ಇರುತ್ತಾರಾ? ಹಾಗಾದರೆ ನಾನು ಹಣ ಸಿಕ್ಕವರನ್ನು ಬಿಜೆಪಿ ಗುತ್ತಿಗೆದಾರ ಎನ್ನುತ್ತೇನೆ. ಯಾವುದಾದರೂ ಆಧಾರ ಇದೆಯಾ” ಎಂದು ಪ್ರಶ್ನಿಸಿದರು.
ತನಿಖೆ ಮಾಡಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, “ಯಾಕ್ರಿ ಬೇಕು ತನಿಖೆ? ತೆರಿಗೆ ಇಲಾಖೆ ದಾಳಿ ಮಾಡಿದೆ. ಅವರು ತನಿಖೆ ಮಾಡುತ್ತಾರೆ. ಸರ್ಕಾರ ಯಾಕೆ ಇದರಲ್ಲಿ ಮೂಗು ತೂರಿಸಬೇಕು? ಪಂಚರಾಜ್ಯಗಳ ಚುನಾವಣೆಗೂ ನಮಗೂ ಸಂಬಂಧವಿಲ್ಲ. ಸಿ ಟಿ ರವಿ ಬರೀ ಸುಳ್ಳು ಹೇಳುತ್ತಾನೆ. ಅವನಿಗೆ ಪ್ರತಿಕ್ರಿಯೆ ಕೊಡಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ರಾಜೀವ ತಾರಾನಾಥ್ ‘ಕಮಿಷನ್’ ಪ್ರಕರಣ; ಕನ್ನಡ-ಸಂಸ್ಕೃತಿ ಇಲಾಖೆ ಸರ್ಜರಿಗೆ ಸಕಾಲ
“ಐದು ವರ್ಷ ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ಈಗ ಮಳೆ ಇಲ್ಲ. ವಿದ್ಯುತ್ ಕೊರತೆಯಾಗಿದೆ. 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಖರ್ಚು ಆಗುತ್ತಿದೆ. ರೈತರಿಗೆ 5 ತಾಸು ವಿದ್ಯುತ್ ಕೊಡಬೇಕು ಎಂದು ಹೇಳಿದ್ದೇನೆ. ಹಾಗೆಯೇ ವಿದ್ಯುತ್ ಕೊಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.
“ನಾಲ್ಕು ತಾಸು ವಿದ್ಯುತ್ ಕೊಡಿ ರೈತರೇ ಆಗ್ರಹಿಸಿದ್ದಾರೆ. ನಾವು ಐದು ತಾಸು ಕೊಡುತ್ತೇವೆ. 2000 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ. ಮೇವಿನ ಕೊರತೆ ರಾಜ್ಯದಲ್ಲಿ ಇಲ್ಲ. ಮೇವು ಬೆಳೆಯಬೇಕು ಮತ್ತು ಮೇವು ಶೇಖರಣೆ ಮಾಡಲು ಸೂಚಿಸಿದ್ದೇವೆ. 30 ಸಾವಿರಕ್ಕೂ ಹೆಚ್ಚು ಕೋಟಿ ಹಾನಿಯಾಗಿದೆ. ಕೇಂದ್ರದ ಬಳಿ ಪರಿಹಾರಕ್ಕೆ ಮನವಿ ಮಾಡಿದ್ದೇನೆ” ಎಂದು ತಿಳಿಸಿದರು.