ಬೆಂಗಳೂರಿನ ಮಾಜಿ ಕಾರ್ಪೋರೇಟರ್, ಕಾಂಗ್ರೆಸ್ ಮುಖಂಡೆ ಅಶ್ವಥಮ್ಮ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 42 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿದೆ. ಇದು ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಎತ್ತಿ ತೋರಿಸಿದೆ. ಐದು ರಾಜ್ಯಗಳ ಚುನಾವಣೆಗೆ ಹಣ ಹೊಂದಿಸಲು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಆರೋಪಿಸಿದ್ದಾರೆ.
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ರವಿಶಂಕರ್, “ಬಿಬಿಎಂಪಿಯ 650 ಕೋಟಿ ರೂ. ಮೊತ್ತದ ಕಾಮಗಾರಿಗೆ ಎನ್‌ಓಸಿ ನೀಡಿ. ಅದರಿಂದ ಸುಮಾರು 82 ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ. ಗ್ಯಾರಂಟಿಗಳ ಜಾರಿ ಬರದಲ್ಲಿ ರೈತರಿಗೆ ಅನುಕೂಲವಾಗಿದ್ದ ಕೃಷಿ ಸನ್ಮಾನ್, ಕೃಷಿ ವಿದ್ಯಾನಿಧಿ ಯೋಜನೆಗಳನ್ನು ಕೈಬಿಟ್ಟು ರೈತರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಇಂತಹ ಸರ್ಕಾರ ತೊಲಗಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು” ಎಂದರು.
ಪ್ರತಿಭಟನೆಯಲ್ಲಿ ಶಾಸಕ ಜಿ.ಬಿ ಜೋತಿಗಣೇಶ್ ಮಾತನಾಡಿ, “ಕಾಂಗ್ರೆಸ್ ಐದು ರಾಜ್ಯಗಳ ಚುನಾವಣೆಗೆ ಹಣ ಒದಗಿಸಲು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದಕ್ಕೆ ಐಟಿ ರೈಡ್ ನಡೆದ ಎರಡು ಸ್ಥಳಗಳಲ್ಲಿ ದೊರೆತಿರುವ ಕೋಟಿ-ಕೋಟಿ ಅಕ್ರಮ ಹಣವೇ ಸಾಕ್ಷಿಯಾಗಿದೆ. ಮಾಧ್ಯಮಗಳ ಮೂಲಕ ಇಡೀ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಹಗಲು ಧರೋಡೆ ಪರಿಚಯವಾಗಿದೆ” ಎಂದರು
“ಈಗಾಗಲೇ ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ನಂಬಿ ಮತ ನೀಡಿದ ಜನತೆಗೆ ಕತ್ತಲೇ ಭಾಗ್ಯವನ್ನು ಕರುಣಿಸಿದ್ದಾರೆ. ಅಭಿವೃದ್ದಿ ಎಂಬುದು ಶೂನ್ಯವಾಗಿದೆ. ಸರ್ಕಾರ ಬಂದು ಐದು ತಿಂಗಳು ಕಳೆದರೂ ಅಭಿವೃದ್ದಿಗೆ ನಯಾಪೈಸೆ ಹಣ ನೀಡಿಲ್ಲ. ಮತ ನೀಡಿದ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಿ ಹೋರಾಟ ನಡೆಸಲಿದೆ” ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್ ಹುಚ್ಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಭೈರಪ್ಪ, ಯುವಮೋರ್ಚಾ ಅಧ್ಯಕ್ಷ ಯಶಸ್. ಶಾಸಕ ಬಿ ಸುರೇಶಗೌಡ, ನಗರ ಮಂಡಲ ಅಧ್ಯಕ್ಷ ಹನುಮಂತರಾಜು,ಸತ್ಯಮAಗಲ ಜಗದೀಶ್, ಓಬಿಸಿ ಕಾರ್ಯಕಾರಿಣಿ ಸದಸ್ಯ ಎಸ್.ಪಿ.ಚಿದಾನಂದ್, ವಿನಯ್‌ಬಿದರೆ, ಗುರುಕುಲ ಮಲ್ಲಿಕಾರ್ಜುನಯ್ಯ, ಸಂದೀಪಗೌಡ,ರುದ್ರೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್, ಸದಸ್ಯರಾದ ರಮೇಶ್, ಮಲ್ಲಿಕಾರ್ಜುನಯ್ಯ,ಸಿದ್ದೇಗೌಡ, ಕುಮಾರ್, ವಿಜಯಕುಮಾರ್,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್,ಸರೋಜಗೌಡ ಮತ್ತಿತರರು ಇದ್ದರು.