ರಾಜ್ಯದಲ್ಲಿ ಕೃಷಿಗೆ ಮತ್ತು ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೆಸ್ಕಾಂನ ಅಧೀಕ್ಷಕ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕ ಬಿ.ಪಿ ಹರೀಶ್ ಮಾತನಾಡಿ, “ಸರ್ಕಾರ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳ್ಳಿದೆ. ರೈತರಿಗೆ ಅನ್ಯಾಯ ಅಗುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ವಿದ್ಯುತ್ ಇಲ್ಲದೆ ರಾಜ್ಯದ ರೈತರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಯಾವುದೇ ಗ್ಯಾರಂಟಿ ಸಮರ್ಪಕವಾಗಿ ರಾಜ್ಯದ ಮಹಿಳೆಯರಿಗೆ ತಲುಪಿಲ್ಲ. ಅನ್ಯಾಯ ಮಾಡಿದ ಸರ್ಕಾರವನ್ನು ಕಿತ್ತೊಗೆಯುವ ತನಕ ವಿಶ್ರಮಿಸಬಾರದು” ಎಂದರು.
ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತನಾಡಿ, “ಒಬ್ಬ ಕಳ್ಳ, ಒಬ್ಬ ಮಳ್ಳರ ಸರ್ಕಾರ ಕಮಿಷನ್ ದಂಧೆ ಮಾಡುತ್ತಿದೆ. ರಾಜ್ಯದ ಜನರಿಗೆ ನಿರಂತರ ವಿದ್ಯುತ್ ಕೊಡದೆ ಕತ್ತಲೆ ಭಾಗ್ಯ ತಂದಿದೆ.
ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸಚಿವರು, ಶಾಸಕರಿಗೆ ಮಾತ್ರ 24ತಾಸು ವಿದ್ಯುತ್ ಸಿಗುತ್ತದೆ” ಎಂದು ಹೇಳಿದರು.
“ರಾಜ್ಯದಿಂದ ಸಂಗ್ರಹ ಆದ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಪೆಂಡಿಂಗ್ ಮಾಡಲಾಗುತ್ತಿದೆ. ಇತ್ತ ರಾಜ್ಯದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಮೂಲಕ ರಾಜ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ಗ್ಯಾರಂಟಿ ಯೋಜನೆ 1.28ಕೋಟಿ ಮಹಿಳೆಯರಿಗೆ ಬರಬೇಕಾದ ಹಣ ಕೇವಲ 50 ಲಕ್ಷ ಮಂದಿ ಮಹಿಳೆಯರಿಗೆ ನೀಡಲಾಗುತ್ತಿದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯಲ್ಲಿಯೂ ಸರಿಯಾದ ರೀತಿಯಲ್ಲಿ ಅಕ್ಕಿ ಕೊಡುತ್ತಿಲ್ಲ. ಎಲ್ಲ ಗ್ಯಾರಂಟಿ ಯೋಜನೆಗಳೂ ವಿಫಲವಾಗಿವೆ. ಎಲ್ಲ ಹಣವನ್ನು ಲೂಟಿ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಬ್ಯಾಂಕ್ ದರೋಡೆಗೆ ಯತ್ನ; ಸೆಕ್ಯೂರಿಟಿ ಗಾರ್ಡ್‌ಗೆ ಇರಿದ ದುಷ್ಕರ್ಮಿಗಳು
“ಎಲ್ಲ ಯೋಜನೆಗಳ ಹಣವನ್ನು ಲೂಟಿ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರದ ದಂಧೆಯ ಹಣ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ, ಮಾಜಿ ಸಚಿವ ಎಸ್ ಎ ರವಿಂದ್ರನಾಥ, ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಡಾ. ಎ ಹೆಚ್ ಶಿವಯೋಗಿಸ್ವಾಮಿ, ಮುಖಂಡರುಗಳಾದ ಶ್ರೀನಿವಾಸ, ದಾಸಕರಿಯಪ್ಪ, ಬಿ ಜೆ ಅಜಯ್ ಕುಮಾರ್, ಎಸ್ ವೀರೇಶ್, ಲೋಕಿಕೆರೆ ನಾಗರಾಜ್, ಬಿ ಎಂ ಸತೀಶ್ ಸೇರಿದಂತೆ ಇತರರು ಇದ್ದರು.