ಸೋಮವಾರ ಸಂಜೆ ಸುರಿದ ಮಳೆಯ ಪರಿಣಾಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದೆ. ನಿಲ್ದಾಣದಲ್ಲಿದ್ದ ಹೋಟೆಲ್, ಅಂಗಡಿಗಳಿಗೂ ನೀರು ತುಂಬಿಕೊಂಡು ಲಕ್ಷಾಂತರ ರೂ. ನಷ್ಟವಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆ.ಆರ್ ಪೇಟೆಯಲ್ಲಿ ನಿನ್ನೆ (ಸೋಮವಾರ) ಮಳೆ ಅಬ್ಬರಿಸಿದೆ. ಅಬ್ಬರಕ್ಕೆ ಪಟ್ಟಣದ ಬಸ್ ನಿಲ್ದಾಣ ತತ್ತರಿಸಿದೆ. ನಿಲ್ದಾಣದಲ್ಲಿ ಸರಾಗವಾಗಿ ನೀರು ಹರಿದುಹೋಗುವಂತೆ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಯದೇ ಇರುವುದೇ ನೀರು ತುಂಬಿಕೊಳ್ಳಲು ಕಾರಣವೆಂದು ಹೇಳಲಾಗಿದೆ. ಈ ಹಿಂದೆಯೂ ಬಸ್ ನಿಲ್ದಾಣ ಇದೇ ರೀತಿ ಜಲಾವೃತವಾಗಿತ್ತು ಎಂಬುದು ಗಮನಾರ್ಹ.
ಇದೀಗ, ಬಸ್ ನಿಲ್ದಾಣ ಮತ್ತೆ ಜಲಾವೃತವಾಗಿದೆ. ಬಸ್ ನಿಲ್ದಾಣದಲ್ಲಿದ್ದ ಬೈಕ್ ಸ್ಟಾಂಡ್ ಕೂಡ ಜಲಾವೃತವಾಗಿದ್ದು, ಅಲ್ಲಿದ್ದ ಬೈಕ್‌ಗಳು ನೀರಿನಲ್ಲಿ ಮುಳುಗಿವೆ. ಬೈಕ್‌ಗಳ ಎಂಜಿನ್‌ಗಳಿಗೆ ಹಾನಿಯಾಗಿದ್ದು, ರಿಪೇರಿಗಾಗಿ ಬೈಕ್ ಮಾಲೀಕರು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೈಕ್ ಸ್ಟಾಂಡ್‌ನಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೇ ಇದ್ದರೂ, ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಬೈಕುಗಳ ಸುರಕ್ಷತೆಗೆ ಯಾವುದೇ ನೆರಳಿನ ವ್ಯವಸ್ಥೆ ಮಾಡಿಲ್ಲ. ಬೈಕ್ ಕಳ್ಳತನವಾದರೆ ವಿಮಾ ಸೌಲಭ್ಯ ಒದಗಿಸಿಲ್ಲ ಎಂದು ಬೈಕ್ ಮಾಲೀಕರು ಕಿಡಿಕಾರಿದ್ದಾರೆ.
ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಳ್ಳುವುದಕ್ಕೆ ಮೂಲ ಕಾರಣ, ರಾಜಕಾಲುವೆ ಒತ್ತುವರಿಯಾಗಿರುವುದು. ಮಳೆಯ ನೀರು ಹೋರಹೋಗಲು ಸಾಧ್ಯವಾಗದೇ ಬಸ್ ನಿಲ್ದಾಣಕ್ಕೆ ನುಗ್ಗುತ್ತಿದೆ. ಈ ನೀರು ಬಸ್ ನಿಲ್ದಾಣದಿಂದ ಹೊರ ಹೋಗಲು ವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯನ್ನೂ ಮಾಡಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಹಾಗೇ ಉಳಿದಿದೆ ಎಂದು ಕಿಡಿಕಾರಿದ್ದಾರೆ.
ಮಳೆ ನೀರು ಬಸ್ ನಿಲ್ದಾಣದಲ್ಲಿ ತುಂಬಿಕೊಂಡ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿರುವ ಬೇಕರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ತಿಂಡಿ, ತಿನಿಸುಗಳು ನೀರಿನಲ್ಲಿ ತೋಯ್ದುಹೋಗಿವೆ. ದುಬಾರಿ ಬಾಡಿಗೆ ನಿಗದಿ ಮಾಡುವಲ್ಲಿ ನಿಸ್ಸೀಮರಾಗಿರುವ ಸಾರಿಗೆ ನಿಗಮ, ಬಾಡಿಗೆದಾರರ ಹಿತ ಕಾಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ನಷ್ಟಕ್ಕೆ ಒಳಗಾದ ತನ್ನ ಬಾಡಿಗೆದಾರರಿಗೆ ನಷ್ಟ ಪರಿಹಾರ ನೀಡಬೇಕು ಅಥವಾ ಕನಿಷ್ಠ ಬಾಡಿಗೆಯನ್ನಾದರೂ ಮನ್ನಾ ಮಾಡುವ ಬಗ್ಗೆ ಚಿಂತನೆ ಮಾಡಬೇಕು ಎಂದು ಬಸ್ ನಿಲ್ದಾಣದ ಅಂಗಡಿ ವರ್ತಕರು ಒತ್ತಾಯಿಸಿದ್ದಾರೆ.