ಬಿಜೆಪಿ-ಜೆಡಿಎಸ್ ಮೈತ್ರಿಯ ಬಳಿಕ ಜೆಡಿಎಸ್‌ನ ಹಲವಾರು ಮುಖಂಡರು ಪಕ್ಷ ತೊರೆದಿದ್ದಾರೆ. ತಮ್ಮ ನಿಲುವೇನು ಎಂಬುದರ ಕುರಿತು ಮಾತನಾಡದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ಸೋಮವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಆಗ್ರಹ ಕೇಳಿಬಂದಿದೆ ಎಂದು ಇಬ್ರಾಹಿಂ ಹೇಳಿದ್ದರು.
ಅವರ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, “ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ ದೇವೇಗೌಡರು ಯಾರನ್ನ ಉಚ್ಛಾಟನೆ ಮಾಡುತ್ತಾರೆ ನೋಡೋಣ. ಜೆಡಿಎಸ್ ಇಬ್ಬಾಗ ಆಗಲ್ಲ. 19 ಮಂದಿ ಶಾಸಕರು ಕುಮಾರಸ್ವಾಮಿ ಅವರೊಂದಿಗೆ ಇದ್ದಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಹೋಗಲಿ, ನಮ್ಮದೇನು ಅಭ್ಯಂತರವಿಲ್ಲ” ಎಂದು ಹೇಳಿದ್ದಾರೆ.
“ಇಬ್ರಾಹಿಂ ಮಾತಿಗೆಲ್ಲ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ?ಕುಮಾರಸ್ವಾಮಿ ಮಗನನ್ನು ಸೋಲಿಸಿದವರು ಯಾರು? ಅಂತಹ ಕಾಂಗ್ರೆಸ್‌ಗೆ ಹೋಗುತ್ತಾರೆ ಅಂದರೆ ಹೋಗಲಿ. ಕಾಂಗ್ರೆಸ್ ಅನ್ನು ಇಬ್ರಾಹಿಂ ಮುಗಿಸಿ ಆಗಿದೆ. ಈಗ ನಮ್ಮ ಹತ್ತಿರ ಬಂದಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.
ಇನ್ನು ಇಬ್ರಾಹಿಂ ಪರವಾಗಿ ಬ್ಯಾಟಿಂಗ್ ಮಾಡಿರುವ ಎಂಎಲ್‌ಸಿ ವಿಶ್ವನಾಥ್, “ಸಿ.ಎಂಇಬ್ರಾಹಿಂ ನಿಲುವು ಸರಿಯಾಗಿದೆ. ನಾನು ರಾಜ್ಯಾಧ್ಯಕ್ಷನಾಗಿದ್ದರೆ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡುತ್ತಿದ್ದೆ. ಕುಮಾರಸ್ವಾಮಿ ವೈಯಕ್ತಿಯವಾಗಿ ಮೈತ್ರಿ ಬಗ್ಗೆ ಮಾತಾಡಿಕೊಂಡಿದ್ದಾರೆ. ಜ್ಯಾತ್ಯಾತೀತ ಅನ್ನೋ ಅರ್ಥವನ್ನೇ ತೆಗೆದು ಹಾಕಿದ್ದಾರೆ” ಎಂದು ಕಿಡಿಕಾರಿದ್ದಾರೆ.