ಗಂಡನ ಮನೆಯ ಹಣಕಾಸಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಶ್ಮಿ, ಅಕ್ಷಯ್ ಹಾಗೂ ಪುರುಷೋತ್ತಮ್ ಬಂಧಿತರು. ಲಕ್ಷ್ಮಮ್ಮ (50) ಕೊಲೆಯಾದ ದುರ್ದೈವಿ.
ಮೂವರು ಆರೋಪಿಗಳು ಸೇರಿ, ಅಕ್ಟೋಬರ್ 5ರಂದು ಲಕ್ಷ್ಮಮ್ಮ (50) ಎಂಬವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ, ಹೃದಯಾಘಾತವಾಗಿದೆ ಎಂದು ಎಲ್ಲರನ್ನು ನಂಬಿಸಿದ್ದರು. ಆರೋಪಿಗಳ ವಾಟ್ಸ್‌ಆಪ್ ಚಾಟಿಂಗ್‌ನಿಂದ ಸತ್ಯ ಬಯಲಾಗಿದೆ.
ಏನಿದು ಪ್ರಕರಣ?
ಆರೋಪಿ ರಶ್ಮಿಗೆ ಮಂಜುನಾಥ್ ಎಂಬಾತನೊಂದಿಗೆ ಮದುವೆ ಆಗಿತ್ತು. ಇವರ ಮನೆಯ ಮೇಲೆ ಬಾಡಿಗೆಗೆ ಇದ್ದ ಆರೋಪಿ ಅಕ್ಷಯ್ ಜತೆಗೆ ರಶ್ಮಿ ಸಂಬಂಧ ಹೊಂದಿದ್ದಳು.
ಮನೆಯ ಸಂಪೂರ್ಣ ವ್ಯವಹಾರವನ್ನು ಮಂಜುನಾಥ್ ಅವರ ತಾಯಿ ಲಕ್ಷ್ಮಮ್ಮ ನೋಡಿಕ್ಕೊಳ್ಳುತ್ತಿದ್ದರು. ಈ ವಿಚಾರವಾಗಿ ಪದೇಪದೇ ಅತ್ತೆ-ಸೊಸೆಯ ನಡುವೆ ಕಿತ್ತಾಟ ಉಂಟಾಗುತ್ತಿತ್ತು. ಮನೆಯ ಸಂಪೂರ್ಣ ಜವಾಬ್ದಾರಿ ತಾನೇ ತೆಗೆದುಕೊಳ್ಳಬೇಕು ಎಂಬ ಆಸೆಯಿಂದ ರಶ್ಮಿ ತನ್ನ ಅತ್ತೆಯನ್ನು ಸಾಯಿಸಲು ಉಪಾಯ ಹೂಡಿದ್ದಾಳೆ.
ತನ್ನ ಪ್ರಿಯಕರ ಅಕ್ಷಯ್ ಜತೆಗೆ ಸೇರಿ ರಶ್ಮಿ ತನ್ನ ಅತ್ತೆಯನ್ನು ಸಾಯಿಸಲು ಮುಂದಾಗುತ್ತಾಳೆ. ಅದರಂತೆಯೇ, ಅ.5 ರಂದು ರಶ್ನಿ ತನ್ನ ಗಂಡ ಮಂಜುನಾಥ್ ಮನೆಯಲ್ಲಿ ಇಲ್ಲದಾಗ ತನ್ನ ಅತ್ತೆಗೆ ಮತ್ತು ಬರುವ ಮಾತ್ರೆ ನೀಡಿದ್ದಾಳೆ.
ಬಳಿಕ, ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಎಂಬುವವರ ಜತೆಗೆ ಸೇರಿ ತನ್ನ ಅತ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತನ್ನ ಅತ್ತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಎಲ್ಲರನ್ನೂ ನಂಬಿಸಿದ್ದಳು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಳ್ಳರ ಜತೆಗೆ ಸೇರಿ ಕಳ್ಳತನಕ್ಕಿಳಿದ ಪೊಲೀಸ್ ಪೇದೆ
ಬಯಲಾದ ಸತ್ಯ
ಅದೇ ಕಟ್ಟಡದ ಒಂದನೇ ಮಹಡಿಯಲ್ಲಿ ಬಾಡಿಗೆಗೆ ಇದ್ದ ರಾಘವೇಂದ್ರ ಎಂಬಾತ ಇವರ ವರ್ತನೆ ಬಗ್ಗೆ ಅನುಮಾನಗೊಂಡು ಆರೋಪಿ ಅಕ್ಷಯ್ ಮೊಬೈಲ್ ಪರಿಶೀಲನೆ ಮಾಡಿದ್ದಾನೆ. ಈ ವೇಳೆ, ವಾಟ್ಸ್‌ಆಪ್‌ನಲ್ಲಿ ಅಕ್ಷಯ್ ಮತ್ತು ರಶ್ಮಿ ಚಾಟಿಂಗ್ ಮಾಡಿರುವುದು ಕಂಡು ಬಂದಿದೆ. ಇಲ್ಲಿ ಇಬ್ಬರು ಆರೋಪಿಗಳು ಹತ್ಯೆ ಮಾಡುವುದರ ಬಗ್ಗೆ ಸಂಚು ರೂಪಿಸಿದ್ದರು.
ಇದನ್ನು ಕಂಡ ರಾಘವೇಂದ್ರ ರಶ್ಮಿ ಪತಿ ಮಂಜುನಾಥ್ ಅವರಿಗೆ ಸಾಕ್ಷಿ ಸಮೇತ ಚಾಟಿಂಗ್ ಮಾಡಿರುವುದನ್ನು ತೋರಿಸಿದ್ದಾನೆ.
ಮಂಜುನಾಥ್ ಅವರು ಸಾಕ್ಷಿ ಸಮೇತ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.