ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಇತ್ತೀಚೆಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದಿದ್ದು, ಸೆಕ್ಷನ್ 144 ಜಾರಿಯಲ್ಲಿದೆ. ಹಾನಿಗೊಳಗಾದವರಿಗೆ ಸಾಂತ್ವನ ಹೇಳಲು ಮುತಾಲಿಕ್ ಅವರು ರಾಗಿಗುಡ್ಡ ಬಡಾವಣೆ ಭೇಟಿಗೆ ಮುಂದಾಗಿದ್ದರು.
ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗ ಪ್ರವೇಶ ಮಾಡದಂತೆ ನಿಷೇಧ ಹೇರಬೇಕು ಎಂದು ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಕೋರಿದ್ದರು. ಪೊಲೀಸ್ ಅಧೀಕ್ಷಕರ ಮನವಿ ಮೇರೆಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಆದೇಶ ಹೊರಡಿಸಿದ್ದು, ಅಕ್ಟೋಬರ್ 18ರಿಂದ ಮುಂದಿನ 30ದಿನಗಳವರೆಗೆ ಜಿಲ್ಲೆ ಪ್ರವೇಶ ಮಾಡದಂತೆ ಸೂಚಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಪ್ರಮೋದ್ ಮುತಾಲಿಕ್ ಅವರ ಮೇಲಿದೆ. ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿವೆ. ಸದ್ಯ ಶಿವಮೊಗ್ಗ ನಗರ ಸೇರಿದಂತೆ, ರಾಗಿಗುಡ್ಡದಲ್ಲಿ ಶಾಂತಿ ನೆಲೆಸಿದ್ದು, ಮುತಾಲಿಕ್ ಭಾಷಣದಿಂದ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ, ಶಿವಮೊಗ್ಗ ಜಿಲ್ಲೆಗೆ ಇಂದಿನಿಂದ ಅಂದರೆ, ಸೆ.18ರಿಂದ, ಮುಂದಿನ 30ದಿನ ಪ್ರವೇಶ ಮಾಡಬಾರದೆಂದು ರಾತ್ರೋರಾತ್ರಿ ನೋಟಿಸ್ ಜಾರಿ ಮಾಡಿದೆ.