ಜಗಳೂರು ತಾಲೂಕನ್ನು ಮೂಲ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ‘ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆ ಮರು ಸೇರ್ಪಡೆ ಹೋರಾಟ ಸಮಿತಿ’ ಕಾರ್ಯಕರ್ತರು ಮಂಗಳವಾರ ಜಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಹಸೀಲ್ದಾರ್ ಸೈಯದ್ ಖಲಿಂವುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಜಗಳೂರು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು. ನೂರಾರು ವರ್ಷಗಳ ಇತಿಹಾಸದಲ್ಲಿ 75 ವರ್ಷಗಳ ಕಾಲ ಬರಗಾಲ ಕಂಡ ಪ್ರದೇಶವಾಗಿದೆ. ತಾಲೂಕಿನಲ್ಲಿ ಯಾವುದೇ ನದಿ, ನೀರಿನ ಮೂಲಗಳಿಲ್ಲ. ರೈಲು ಸಂಚಾರವಿಲ್ಲ. ಉದ್ಯೋಗ ಒದಗಿಸುವ ಕಂಪನಿಗಳಿಲ್ಲ. ಕೇವಲ ಮಳೆಯನ್ನೆ ನೆಚ್ಚಿಕೊಂಡು ಕೃಷಿ ಚಟುವಟಿಕೆ ಮಾಡುವ ರೈತರು ಸಂಕಷ್ಟದಲ್ಲಿ ಬದುಕುವಂತಾಗಿದೆ. ಹಾಗಾಗಿ, ಜಗಳೂರುನ್ನು ಮೂಲ ಜಿಲ್ಲೆಯಾಗಿದ್ದ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
“ದಾವಣಗೆರೆ ಜಿಲ್ಲೆಗೆ ಜಗಳೂರು ಸೇರಿದ ಬಳಿಕ ಬಡವಾಗಿದೆ. ಚುನಾಯಿತರು, ಅಧಿಕಾರಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರ ತಾಲೂಕುಗಳು ನೀರಾವರಿ ಹೊಂದಿರುವ ಸಮೃದ್ದ ತಾಲೂಕುಗಳಾಗಿವೆ. ಇವರ ನಡುವೆ ಜಗಳೂರು ತಾಲೂಕು ಹೋರಾಟ ಮಾಡುವುದು ತುಂಬ ಕಷ್ಟವಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ದಾವಣಗೆರೆಯಲ್ಲಿ ದಿನವಿಡಿ ಕಾಯಬೇಕು. ಆದರೆ ಚಿತ್ರದುರ್ಗ ಹತ್ತಿರವಿದ್ದು ಅಲೆದಾಡುವುದು ತುಂಬ ಕಡಿಮೆಯಾಗುತ್ತದೆ. ಆದ್ದರಿಂದ ಚಿತ್ರದುರ್ಗ ಸೇರ್ಪಡೆಯಾಗುವವರೆಗೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ತಿಮ್ಮಾರೆಡ್ಡಿ, ಉಪಾಧ್ಯಕ್ಷ ಪುಟ್ಟಣ್ಣ, ಸಿ. ತಿಪ್ಪೇಸ್ವಾಮಿ, ಪಾಲನಾಯಕನಗೋಟೆ ಓಬಣ್ಣ, ಸೂರಲಿಂಗಪ್ಪ, ಹನುಮಂತಪ್ಪ, ಖಾದರ್ ಸಾಬ್, ಬಂಗಾರಪ್ಪ, ಜಿ.ಎಚ್ ಶಂಬುಲಿಂಗಪ್ಪ, ವಕೀಲ ಸಣ್ಣ ಓಬಯ್ಯ, ದಸಂಸ ಸಂಚಾಲಕ ಸತೀಶ್ ಮಾಚಿಕೆರೆ, ಸೇರಿದಂತೆ ಮತ್ತಿತರಿದ್ದರು.