ಹೊಸದಾಗಿ ಬಂದ ಅಧಿಕಾರಿಗಳಿಗೆ ತಳ ಸಮುದಾಯಗಳ ಸಮಸ್ಯೆಗಳನ್ನು ಅರಿಯಲು ಆಗುತ್ತಿಲ್ಲ. ಎಸ್‌ಸಿ/ಎಸ್‌ಟಿ ಸಮುದಾಯಕ್ಕಿರುವ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪದೆ, ಕೇವಲ ಆರ್ಥಿಕವಾಗಿ ಸಬಲರಾದ ದಲಿತ ಸಮುದಾಯದ ಕೆಲವರಷ್ಟೇ ಪಡೆಯುತ್ತಿದ್ದಾರೆ ಎಂದು ಡಿಎಸ್ಎಸ್ ಹಿರಿಯ ಮುಖಂಡ ಎಚ್ ಡಿ ಪೂಚಾರ ಅಸಮಾಧಾನ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಮುಂಡರಗಿ ಪೋಲಿಸ್ ಠಾಣೆ ಆವರಣದಲ್ಲಿ ತಾಲೂಕು ದಂಡಾಧಿಕಾರಿಗಳು ಧನಂಜಯ ಹಾಗೂ ತಾಲೂಕು ಸಿಪಿಐ ಮಂಜುನಾಥ್ ಕುಸುಗಲ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕುಂದು ಕೊರತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೂಜಾರ ಮಾತನಾಡಿದರು.
“ಮೊದಲು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸಂವಿಧಾನ ಪೀಠಿಕೆಯನ್ನು ದೊಡ್ಡದಾದ ಪ್ರತಿಯೊಬ್ಬರಿಗೂ ಕಾಣುವ ಹಾಗೆ ಹಾಕಬೇಕು. ಅಧಿಕಾರಿಗಳು ದಲಿತ ಸಮುದಾಯಗಳಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಯಾವ ಯಾವ ಇಲಾಖೆಗಳಲ್ಲಿ ದಲಿತ ಸಮುದಾಯಗಳಿಗೆ ದೊರಕುವ ಸೌಲಭ್ಯಗಳ ಪ್ರತಿಯೊಂದು ಮಾಹಿತಿಯನ್ನು ತಿಳಿಸಬೇಕು” ಎಂದು ಹೇಳಿದರು.
“12ನೇ ಶತಮಾನದಿಂದ ಇಲ್ಲಿಯವರೆಗೂ ಜಾತಿ ವ್ಯವಸ್ಥೆ ವಿರುದ್ದ ಕ್ರಾಂತಿ ಮಾಡಿ, ಸಮಾನತೆಯನ್ನು ತರಲು ಪ್ರಯತ್ನಿಸಿದರು. ಆ ಪ್ರಯತ್ನ ಇನ್ನೂ ನಡೆಯುತ್ತಿದೆ. ಈಗಲೂ ಕೂಡ ಕೆಲವೊಂದು ಹಳ್ಳಿಗಳ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಪ್ರಾಣಿಗಳಿಗಿಂತ ಕೀಳಾಗಿ ನೋಡುವ ಪರಿಸ್ಥಿತಿ ಇದೆ. ಅಧಿಕಾರಿಗಳು ಇಂತವುಗಳ ಕಡೆ ಹೆಚ್ಚು ಗಮನ ಹರಿಸಿ ಸಮಾನತೆಯನ್ನು ತರುವ ಕೆಲಸ ಮಾಡಬೇಕು” ಎಂದರು.
“ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸಾರಾಯಿ ಮಾರಾಟಕ್ಕೆ ಸಿಗುತ್ತದೆ. ಇದರಿಂದ ಎಷ್ಟೊ ಜನರ ಜೀವನ ಹಾಳಾಗಿದೆ. ಇನ್ನೂ ಕೆಲವು ಹಳ್ಳಿಗಳಲ್ಲಿ ಎಸ್ಸಿ ಎಸ್ಟಿ ಸಮುದಾಯದಲ್ಲಿ ಯಾರಾದರು ಮೃತಪಟ್ಟರೆ, ಹೂಳಲು ರುದ್ರಭೂಮಿ ಇಲ್ಲ. ಜಿಲ್ಲಾ ಪಂಚಾಯತಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಬೇಕು. ಆದರೆ, ಯಾವುದೋ ಒಂದು ಜಾಗದಲ್ಲಿ ರಸ್ತೆ ಮಾಡಿ, ಕಾಲೋನಿಗೆ ಕಾಂಕ್ರಿಟ್ ರಸ್ತೆ ಮಾಡಿದ್ದೇವೆಂದು ಬಿಲ್ ಪಡೆದುಕೊಳ್ಳುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಆರು ತಿಂಗಳಾದರೂ ವೇತನ ನಿಡಿಲ್ಲ” ಎಂದು ಎಚ್.ಡಿ ಪೂಚಾರ ಅಕ್ರೋಶ ವ್ಯಕ್ತಪಡಿಸಿದರು.
ಡಿಎಸ್ಎಸ್ ತಾಲೂಕು ಸಂಚಾಲಕ ಸೋಮಪ್ಪ ಐತಾಪುರ ಮಾತನಾಡಿ, “ದಲಿತ ಕೇರಿಗಳಲ್ಲಿ ಸಾರಾಯಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಈ ಕುರಿತು ಅಬಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮೇವುಂಡಿ ಗ್ರಾಮದ ದಲಿತ ಕೇರಿಗೆ ಹೋಗಲು ದಾರಿಯೇ ಇಲ್ಲ. ತಾಲೂಕು ಆಸ್ಪತ್ರೆಯಲ್ಲಿ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಹಿರೆವಡ್ಡಟ್ಟಿಯ ಶಾಲೆಗೆ ಸರಿಯಾಗಿ ರಸ್ತೆಯೇ ಇಲ್ಲ. ಇವುಗಳ ಕುರಿತು ಯಾವ ಅಧಿಕಾರಿಗಳು ಸ್ಪಂದನೆ ಸಿಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂಡರಗಿ ಪುರಸಭೆ ಸದಸ್ಯ ಸಂತೋಷ ಹಿರೆಮನಿ ಮಾತನಾಡಿ, “ಅಧಿಕಾರಿಗಳಿಗೇ ಎಸ್‌ಸಿ/ಎಸ್‌ಟಿ ಸೌಲಭ್ಯಗಳ ಮಾಹಿತಿ ಕೊರತೆ ಇರುತ್ತದೆ. ಹೀಗಿರುವಾಗ, ಅವರೇಗೆ ಜನರಿಗೆ ಹೇಳೋಕೆ ಆಗುತ್ತದೆ. ಹಾಗಾಗಿ ಸೌಲಭ್ಯಗಳ ಕರಪತ್ರ ತಯಾರು ಮಾಡಿ ಮಾಹಿತಿ ನೀಡಿ, ಪ್ರತಿಯೊಬ್ಬರಿಗೂ ಈ ಕರಪತ್ರ ತಲುಪಿದರೆ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಪಟ್ಟಣದ ಕೇಂದ್ರ ಸ್ಥಾನ ಹರಿಜನ ಕೇರಿ ಜನರು ಮನೆಗಳನ್ನು ಕಟ್ಟಿಕೊಂಎಉ ಎಪ್ಪತ್ತು ಎಂಬತ್ತು ವರ್ಷಗಳಾಗಿವೆ ಇದುವರೆಗೂ ಅವರಿಗೂ ಹಕ್ಕುಪತ್ರ ಕೊಟ್ಟಿಲ್ಲ. ಈ ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.
ಮುಂಡರಗಿ ತಾಲೂಕು ದಂಡಾಧಿಕಾರಿ ಧನಂಜಯ ಮಾತನಾಡಿ, “ಕೆಲವು ಸಮಸ್ಯೆಗಳಿನ್ನು ಕೂಡಲೇ ಪರಿಹರಿಸುವಂತೆ ಸೂಚನೆ ನೀಡುತ್ತೇನೆ. ಮುಂದಿನ ಕುಂದು ಕೊರತೆ ಸಭೆಯ ಒಳಗಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ” ಎಂದು ಭರವಸೆ ನೀಡಿದರು.