- ‘ಶಾಸಕರ ಜೊತೆ ಪ್ರವಾಸದ ಬಗ್ಗೆ ಸತೀಶ್ ಜಾರಕಿಹೊಳಿ ಚರ್ಚಿಸಿದ್ದಾರೆ’
- ‘ದಿಢೀರ್ ಎಂದು ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ’
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನಲ್ಲಿ ಯಾರೂ ಬಂಡಾಯ ಎದ್ದಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಬಿಜೆಪಿ ನಾಯಕರು ಸುಮ್ಮನೇ ಕಥೆ ಕಟ್ಟುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಳಗಾವಿಗೆ ಆಗಮಿಸಿರುವ ಡಿಸಿಎಂ ಅನ್ನು ಸ್ವಾಗತಿಸಲು ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ಬರದಿರುವ ವಿಚಾರವಾಗಿ ಬಿಜೆಪಿ ಟೀಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿ, “ದಿಢೀರ್ ಆಗಿ ಬಂದಿದ್ದೇನೆ
ನೆನ್ನೆ, ಮೊನ್ನೆ ಸತೀಶ್ ಅವರು ಮತ್ತು ನಾನು ಜೊತೆಯಲ್ಲಿಯೇ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ” ಎಂದು ತಿಳಿಸಿದರು.
ಪ್ರವಾಸದ ಬಗ್ಗೆ ಸತೀಶ್ ಚರ್ಚಿಸಿದ್ದಾರೆ
“ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ. ಎಲ್ಲ ಶಾಸಕರು ನಮ್ಮವರೇ. ಬಿಜೆಪಿಯವರಿಗೆ ಒಂದು ಸುದ್ದಿ ಬೇಕು, ಅದಕ್ಕೆ ಹೀಗೆಲ್ಲಾ ಹೇಳುತ್ತಾರೆ. ಸತೀಶ್ ಜಾರಕಿಹೊಳಿ ಅವರು ಶಾಸಕರ ಜೊತೆ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ, ಹೌದು. ಈ ವಿಚಾರವಾಗಿ ನಾವಿಬ್ಬರೂ ಚರ್ಚಿಸಿದ್ದೇವೆ” ಎಂದು ಹೇಳಿದರು.
“ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿ ಇದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎರಡು ದೇಶಗಳ ಸ್ಥಾಪನೆ- ಇಸ್ರೇಲ್ ಪ್ಯಾಲೆಸ್ತೀನಿ ಕದನಕ್ಕೆ ಕಾಯಂ ಪರಿಹಾರ
ಬೆಳಗಾವಿಯಿಂದಲೇ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಕೇಳಿದಾಗ “ಜೆ.ಎಚ್. ಪಟೇಲರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ” ಎಂದು ತಿರುಗೇಟು ನೀಡಿದರು.
ಸತೀಶ್ ಜಾರಕಿಹೊಳಿ ಹಾಗೂ ನಿಮ್ಮ ನಡುವೆ ಬಿರುಕು ಮೂಡಿದೆಯೇ ಎಂದು ಕೇಳಿದಾಗ, “ನಮ್ಮ ನಡುವೆ ಯಾವುದೇ ಬಿರುಕಿಲ್ಲ. ನನ್ನನ್ನು ಸ್ವಾಗತಿಸಲು ಬರಲಿಲ್ಲ, ಅದು ಇದು, ಎಂದು ನೀವೇ ಏನೇನೋ ಹೇಳುತ್ತೀರಿ?. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ” ಎಂದರು.