- ಐಟಿ ದಾಳಿಗೆ ಸಂಬಂಧಿಸಿದಂತೆ ಅನೌಪಚಾರಿಕ ಸಚಿವರ ನಡುವೆ ಚರ್ಚೆ ಸಾಧ್ಯತೆ
- ಸತೀಶ್ ಜಾರಕಿಹೊಳಿಯಿಂದ ಶಾಸಕರ ಟೂರ್ ವಿಚಾರ ಬಗ್ಗೆ ಚರ್ಚೆ ಸಾಧ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು (ಅ.19) 3 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಪ್ರಮುಖವಾಗಿ ಐಟಿ ದಾಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಗುತ್ತಿಗೆದಾರರ ಮನೆಯ ಮೇಲೆ ಐಟಿ ದಾಳಿಯಿಂದ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು, ಪಕ್ಷದಲ್ಲಿ ಕಾಣಿಸಿಕೊಂಡಿರುವ ಆಂತರಿಕ ಅಸಮಾಧಾನದ ಹೊಗೆ ಹಾಗೂ ಬರ ಪರಿಹಾರಕ್ಕೆ ಕೇಂದ್ರ ಮೊರೆ ಹೋಗುವ ವಿಚಾರ ಸೇರಿದಂತೆ ಹಲವು ಮಹತ್ವದ ಸಂಗತಿಗಳು ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆ ಆಗುವ ಸಾಧ್ಯತೆ ಹೆಚ್ಚಿದೆ.
ಐಟಿ ದಾಳಿ ವಿಚಾರವಾಗಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವಲ್ಲಿ ಸರ್ಕಾರ ವಿಫಲವಾದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಯಾವ ರೀತಿಯ ತಂತ್ರಗಾರಿಕೆ ಪ್ರಯೋಗ ಮಾಡಬೇಕು ಎಂಬ ವಿಚಾರ ಈಗ ಸರ್ಕಾರದ ಮುಂದಿದೆ. ಐಟಿ ದಾಳಿ ವಿಚಾರವನ್ನೇ ವಿಪಕ್ಷಗಳು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಇದೇ ವಿಚಾರವಾಗಿ ವಾಗ್ದಾಳಿ ನಡೆಸುತ್ತಿವೆ.
ಶಾಸಕರ ಟೂರ್ ವಿಚಾರ
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕರ ಟೂರ್ ವಿಚಾರ ಹಾಗೂ ಕೆಲವು ಶಾಸಕರು ಬಹಿರಂಗವಾಗಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕೂಡಾ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಈ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಅಧಿಕೃತ ವಿಚಾರಗಳ ಚರ್ಚೆ ಬಳಿಕ ಅನೌಪಚಾರಿಕವಾಗಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಹೆಚ್ಚಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ
ಚಳಿಗಾಲದ ವಿಧಾನ ಮಂಡಲ ಅಧಿವೇಶನ ದಿನಾಂಕ ನಿಗದಿ, ರಸಗೊಬ್ಬರ ಕಾಪು ದಾಸ್ತಾನು ಮಾಡಲು ಬೀಜ ನಿಗಮ ಮತ್ತು ಸಹಕಾರ ಮಾರಾಟ ಮಹಾಮಂಡಲ ಮಾಡುವ 200 ಕೋಟಿ ರೂ.ಸಾಲಕ್ಕೆ ಖಾತ್ರಿ ನೀಡುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಹಾಗೆಯೇ ಸಚಿವರ ಸಂಬಳ, ಭತ್ಯೆಗಳ ತಿದ್ದುಪಡಿ ಅಧಿನಿಯಮ 2022ಕ್ಕೆ ಘಟನೋತ್ತರ ಅನುಮೋದನೆ. 2022ರ ಮಾರ್ಚ್ 11 ರಂದೇ ಗೆಜೆಟ್ ಪ್ರಕಟವಾಗಿರುವುದಕ್ಕೆ ಈಗ ಸಂಪುಟ ಅನುಮೋದನೆ ಸಿಗುವ ಸಾಧ್ಯತೆ ಮಾತುಗಳು ಕೇಳಿಬಂದಿವೆ.
ಲೋಕಾಯುಕ್ತದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಸರ್ಕಾರಿ ಅಭಿಯೋಜಕರ ಸೇವ ಒಂದು ವರ್ಷ ಮುಂದುವರಿಸುವ ಬಗ್ಗೆ ಚರ್ಚೆ. ರಾಜ್ಯದಲ್ಲಿರುವ 11 ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆ ಕಾಮಗಾರಿ 20 ಕೋಟಿ ರೂ. ಅನುಮೋದನೆ ನೀಡುವ ಸಾಧ್ಯತೆ ಇದೆ.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು 23.48 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೇಗೇರಿಸುವುದು. ಹಾಗೆಯೇ ಧಾರವಾಡದಲ್ಲಿ 13.11 ಕೋಟಿ ರೂ.ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನಮೋದನೆ ಕೊಡುವ ಸಾಧ್ಯತೆ ಹೆಚ್ಚಿದೆ.
ಗೃಹಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಣೆ ಮಾಡಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಚೆರ್ಚೆ ಮತ್ತು ಅನುಮೋದನೆ ಸಾಧ್ಯತೆ ಇದೆ.
ನಗರ ಅನಿಲ ವಿತರಣಾ ಜಾಲ ಅಭಿವೃದ್ಧಿ ನೀತಿಗೆ ಒಪ್ಪಿಗೆ ನೀಡುವ ಬಗ್ಗೆ, ರಾಜ್ಯದಲ್ಲಿ 400 ಗ್ರಾಮ ನ್ಯಾಯಾಲಯಗಳನ್ನು ತೆರೆಯಲು 100 ಕೋಟಿ ರೂ. ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ 450 ಹಾಸಿಗೆಗಳ ಬೋಧನಾ ಆಸ್ಪತ್ರೆಗೆ 192 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.