ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯಿಸಿದ್ದು, ಗರ್ಭದಲ್ಲೇ ಮಗು ಮೃತಪಟ್ಟಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಸ್ಪತ್ರೆ ಎದುರು ಮಹಿಳೆಯ ಕುಟುಂಬಸ್ಥರು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆಸಿದೆ. ಮಗುವಿನ ಮೃತದೇಹವನ್ನು ಇಟ್ಟು ತಾಲೂಕಿನ ವಿರುಪಾಪುರದ ಗ್ರಾಮಸ್ಥರು ಮತ್ತು ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ವಿರುಪಾಪುರ ಗ್ರಾಮದ ಗರ್ಭಿಣಿ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಈ ಹಿಂದೆ ಸಹಜ ಹೆರಿಗೆಯಾಗಿದ್ದರಿಂದ, ಈ ಬಾರಿಯೂ ಸಹಜ ಹೆರಿಗೆ ಆಗಬಹುದು, ಕಾದುನೋಡೋಣ, ಶಸ್ತ್ರಚಿಕಿತ್ಸೆ ಬೇಡವೆಂದು ವೈದ್ಯರು ಹೇಳಿದ್ದಾರೆ. ಒಂದು ದಿನ ಕಳೆದರೂ ಹೆರಿಗೆಯಾಗಲಿಲ್ಲ. ಬುಧವಾರ ಪರೀಕ್ಷಿಸಿದಾಗ ಮಗು ಗರ್ಭದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಗರ್ಭದಲ್ಲಿಯೇ ಸಾವನ್ನಪ್ಪಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಗರ್ಭದಲ್ಲಿಯೇ ಮಗು ಮೃತಪಟ್ಟಿದ್ದರಿಂದ ಆ ನಂತರ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮೃತ ಶಿಶುವನ್ನು ಹೊರ ತೆಗೆದಿದ್ದಾರೆ.
“ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ಮಂಗಳವಾರವೇ ಸಿಜೇರಿಯನ್ ಮಾಡಿದ್ದರೆ ಮಗು ಬದುಕುಳಿಯುತ್ತಿತ್ತು. ವೈದ್ಯರನ್ನು ಅಮಾನತು ಮಾಡಬೇಕು” ಎಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮಹಿಳೆಯ ಕುಟುಂಬಸ್ಥರು ದೂರು ನೀಡಿದ್ದು, ತನಿಖೆ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ಡಾ. ಲಿಂಗರಾಜು ಟಿ ತಿಳಿಸಿದ್ದಾರೆ.