ಉತ್ತಮ ಇಳುವರಿ ಬರುವ ಬಿತ್ತನೆ ಬೀಜಗಳನ್ನು ನೀಡುತ್ತೇವೆಂದು ನಂಬಿಸಿ, ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ತಪ್ಪಿತಸ್ಥ ಮಿಲ್ ಮಾಲೀಕರ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಒತ್ತಾಯಿಸಿದೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಸುಮಾರು 25ಕ್ಕೂ ಅಧಿಕ ರೈತರಿಗೆ ‘ಫತಾಹ ಇಂಡಸ್ಟಿ’ ಎಂಬ ಶೇಂಗಾ ಮಿಲ್ ಮಾಲೀಕರು ಕಳಪೆ ಬಿತ್ತನೆ ಬೀಜ ವಿತರಿಸಿದ್ದಾರೆ. ಇದರಿಂದಾಗಿ, ಸರಿಯಾಗಿ ಬೆಳೆ ಬಾರದೆ, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತರಿಗೆ ಮೋಸ ಮಾಡಿರುವ ಮಿಲ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಬಿತ್ತನೆ ಮಾಡಿದ್ದ ಬೀಜಗಳ ಪೈಕಿ ಸುಮಾರು 40% ಬೀಜಗಳು ಮೊಳಕೆಯನ್ನೇ ಹೊಡೆದಿಲ್ಲ. ಬೆಳೆದ ಸಸಿಗಳು ರೋಗ ಬಾಧಿಸಿದೆ. ಮಿಲ್ ಮಾಲೀಕರು ಈ ಕಳಪೆ ಬೀಜಕ್ಕೆ ಪ್ರತಿ ಕ್ವಿಂಟಾಲ್‌ಗೆ 13,200 ರೂ. ಪಡೆದು ವಂಚಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಹೇಶ್ ಎಸ್.ಬಿ, ಬಿ. ಭಗವಾನ್ ರೆಡ್ಡಿ, ಗುಂಡಣ್ಣ ಕುಂಬಾರ್, ಅನೀಲಗೌಡ, ಶರಣು ಗಂಜಿ, ಮರೆಪ್ಪ ಗಂಜಿ, ಸಾಬಣ್ಣ, ಶಿವು, ನಾಗಪ್ಪ ನಾಯಕೋಡಿ, ಗೌಡಪ್ಪ, ಸಾಬಣ್ಣ ಗಂಜಿರ ಸೇರಿದಂತೆ ಹಲವರು ಇದ್ದರು.