ಹೊಸ ಮೊಬೈಲ್ ಕೊಡಿಸುವಂತೆ ಹಠಕ್ಕೆ ಬಿದ್ದು, ಬ್ಲಾಕ್‌ಮೇಲ್ ಮಾಡಲು ವಿಷ ಸೇವಿಸಿದ್ದ ಯುವಕ ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದ ಯಶವಂತ್ (20) ಮೃತ ದುರ್ದೈವಿ. ಆತ ಅಕ್ಟೋಬರ್ 8ರಂದು ಗಣೇಶ ವಿಸರ್ಜನೆ ವೇಳೆ ಮೊಬೈಲ್ ಕಳೆದುಕೊಂಡಿದ್ದ. ಹೀಗಾಗಿ, ಮೊಬೈಲ್ ಇಲ್ಲದೆ ಬೇಸರಗೊಂಡಿದ್ದ. ಹೊಸ ಮೊಬೈಲ್ ಕೊಡಿಸುವಂತೆ ತನ್ನ ಅಜ್ಜನ ಬಳಿ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.
ಈರುಳ್ಳಿ ಬೆಳೆ ಬಂದ ಬಳಿಕ, ಈರುಳ್ಳಿ ಮಾರಿ ಮೊಬೈಲ್ ಕೊಡಿಸುವುದಾಗಿ ಅಜ್ಜ ಹೇಳಿದ್ದರು. ಆದರೆ, ಈಗಲೇ ಬೇಕೆಂದು ಹಠಕ್ಕೆ ಬಿದ್ದಿದ್ದ ಯಶವಂತ್, ಅಜ್ಜನನ್ನು ಬೆದರಿಸಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಲಾಗಿದೆ.
ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಮುಂದಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲೇ ಯಶವಂತ್ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.