ರಾಜ್ಯದಲ್ಲಿ ಯುವಜನರು ಘನತೆಯಿಂದ ಬದುಕಲು ಯುವಜನ ಹಕ್ಕುಗಳ ಅಗತ್ಯವಿದೆ. ಹೀಗಾಗಿ ಯುವಜನ ಆಯೋಗ ಜಾರಿಯಾಗಬೇಕೆಂದು ಕಲಬುರಗಿ ಯುವ ಮುನ್ನಡೆ ತಂಡವು ಜಿಲ್ಲಾದ್ಯಂತ ಯುವಜನ ಆಯೋಗ ರಚನೆಗಾಗಿ ಧ್ವನಿಯಾಗುವಂತೆ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಂಚುವ ಮೂಲಕ ಅಭಿಯಾನ ನಡೆಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಹಾಗೂ ಕೆಕೆಆರ್‌ಡಿಬಿ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳಿಗೂ ಮನವಿ ಪತ್ರ ಸಲ್ಲಿಸಿದರು.
ಯುವಜನ ಆಯೋಗ ರಚನೆಯಾಗಬೇಕೆಂದು ಮನವಿ ಮಾಡಿದ ಯುವಜನರು, “ಪ್ರಸ್ತುತ ಯುವಜನರು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹಲವಾರು ಸಮಸ್ಯೆಗಳ ಜೊತೆ ಹಲವಾರು ಒತ್ತಡಗಳನ್ನು ಅನುಭವಿಸುತ್ತಿದ್ದಾರೆ. ಇನ್ನೂ ಚಿಕ್ಕವರೆಂಬ ವಯಸ್ಸಿನ ಕಾರಣಕ್ಕೆ ಭಾರತದ ಸಂವಿಧಾನ ಬದ್ಧ ಹಕ್ಕುಗಳು ಯುವಜನರಿಗೆ ದಕ್ಕುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | 15ನೇ ಹಣಕಾಸು ಅನುದಾನದಲ್ಲಿ ಅಕ್ರಮ; ಪಿಡಿಒ ವಿರುದ್ಧ ತನಿಖೆಗೆ ಆಗ್ರಹ
“ಜಾತಿ, ಧರ್ಮ, ಲಿಂಗ ಮತ್ತು ವರ್ಗದ ಕಾರಣಕ್ಕಾಗಿ ಯುವಜನರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ನಿರುದ್ಯೋಗ ಅಭದ್ರತೆ, ಘನತೆ ಹಾಗೂ ಅನನ್ಯತೆಯ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಜನರು ಎದುರಿಸುತ್ತಿರುವಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಲು, ಅಧ್ಯಯನ ಮಾಡಲು, ಮಾರ್ಗದರ್ಶನ ನೀಡಲು ಮತ್ತು ಯುವ ಸಬಲೀಕರಣಕ್ಕೆ ಬೇಕಾದ ಅಗತ್ಯತೆಗಳನ್ನು ಸರ್ಕಾರಕ್ಕೆ ಮಾಹಿತಿ ಮುಟ್ಟಿಸಲು, ಯುವಜನರ ಸಮಸ್ಯೆಗಳಿಗೆ ಕಿವಿಯಾಗಲು, ದನಿಯಾಗಲು ಯುವಜನರ ಆಯೋಗದ ಅಗತ್ಯವಿದೆ” ಎಂದು ಮನವಿ ಮಾಡಿದರು.