- ಕಾರ್ಯಕರ್ತರು ಹಾಗೂ ಜನ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ
- ‘ಅಶೋಕ್ ಪಟ್ಟಣ ಹೇಳಿಕೆ ಚರ್ಚೆ ಮಾಡಲು ನಾನು ಹೋಗುವುದಿಲ್ಲ’
ನಮ್ಮ ಪಕ್ಷವನ್ನು ನಾನೊಬ್ಬನೇ ಅಧಿಕಾರಕ್ಕೆ ತಂದಿದ್ದೇನೆ ಎಂದು ಯಾವತ್ತೂ ಹೇಳಿಲ್ಲವಲ್ಲ. ಅಷ್ಟಕ್ಕೂ ಈ ಮಾತನ್ನು ನಾನ್ಯಾಕೆ ಹೇಳಬೇಕು. ಕಾರ್ಯಕರ್ತರು ಹಾಗೂ ಜನ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, “ಶಿವಕುಮಾರ್ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ” ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
“ಪಕ್ಷದ ಕಾರ್ಯಕರ್ತರು, ನಾವು, ನೀವು ಸೇರಿ, ರಾಜ್ಯದ ಜನರು, ಪ್ರತಿ ಹಳ್ಳಿಯಲ್ಲಿರುವವರು ಬಿಜೆಪಿಯನ್ನು ತಿರಸ್ಕರಿಸಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಡಿ ಕೆ ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿದ್ದಾನೆ ಎಂದು ಇಂದು, ನಾಳೆ, ಎಂದಿಗೂ, ಯಾವತ್ತಿಗೂ ಹೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹೊರ ರಾಜ್ಯದಿಂದ ವಿದ್ಯುತ್ ಖರೀದಿ ಕಮಿಷನ್‌ಗಾಗಿ: ಕುಮಾರಸ್ವಾಮಿ ಆರೋಪ
ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂಬ ಅಶೋಕ್ ಪಟ್ಟಣ ಹೇಳಿಕೆ ವಿಚಾರವಾಗಿ ಉತ್ತರಿಸಿ, “ಪಕ್ಷದಲ್ಲಿ ಆಂತರಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗಿರುತ್ತವೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ಚರ್ಚೆ ಮಾಡಲು ನಾನು ಹೋಗುವುದಿಲ್ಲ, ನನಗೆ ಇರುವ ಮಾಹಿತಿ ಪ್ರಕಾರ ಆ ರೀತಿ ಚರ್ಚೆ ನಡೆದಿಲ್ಲ” ಎಂದ ಡಿಕೆ ಶಿವಕುಮಾರ್, ”ಪಕ್ಷ, ಸರಕಾರದ ಆಂತರಿಕ ವಿಚಾರಗಳ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಬೇಡಿ” ಎಂದು ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಿದರು.