- ‘ಗುರಮಠಕಲ್‌ನಲ್ಲಿ ಸಿಬಿಎಸ್‌ಸಿ ಶಾಲೆ ಮಾಡದೆ ಯಲಹಂಕದಲ್ಲಿ ಮಾಡಿಕೊಂಡಿದ್ದಾರೆ’
- ‘ನೀವು ಡಾಲರ್ಸ್ ಕಾಲೋನಿಯ ಬೆಂಗಳೂರಿನ ಮಂತ್ರಿ, ಬಡವರ ಕಷ್ಟ ಅರಿವಾಗಲ್ಲ’
ತನ್ನನ್ನು ತಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೋಲಿಕೆ ಮಾಡಿಕೊಳ್ಳುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರಾಜಕಾರಣದ ಸ್ಪೆಷಲ್ ಬೇಬಿ ಎಂದು ಸಂಬೋಧಿಸುತ್ತೇನೆ ಎಂದು ಸಂಸದ ಡಾ. ಉಮೇಶ ಜಾಧವ ವ್ಯಂಗ್ಯವಾಡಿದರು.
ಕಲಬುರಗಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದ ಅವರು, “ಗುರಮಠಕಲ್‌ನಲ್ಲಿ ನಿಮ್ಮ ತಂದೆ ಎಂಟು ಬಾರಿ, ಚಿತ್ತಾಪುರದಲ್ಲಿ ನೀವು ಮೂರು ಬಾರಿ ಗೆದ್ದಿದ್ದೀರಿ. ಆದರೆ, ಗುರಮಠಕಲ್‌ನಲ್ಲಿ ಸಿಬಿಎಸ್‌ಸಿ ಶಾಲೆ ಮಾಡದೆ ಯಲಹಂಕದಲ್ಲಿ ಮಾಡಿಕೊಂಡಿದ್ದೀರಿ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜ್ ತೆರೆದಿದ್ದೀರಿ. ನೀವು ಡಾಲರ್ಸ್ ಕಾಲೋನಿಯ ಬೆಂಗಳೂರಿನ ಮಂತ್ರಿ. ಬಡವರ ಕಷ್ಟ ಅರಿವಾಗಲ್ಲ” ಎಂದು ಟೀಕಿಸಿದರು.
“ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರದಲ್ಲಿ ಜನಸ್ಪಂದನೆ ನಡೆಸುವಂತೆ ಸೂಚಿಸಿದ್ದರು. ಅವರ ಮಾತನ್ನು ಕಡೆಗಣಿಸಿ, ಪ್ರಯಾಣಕ್ಕೆ ಅನುಕೂಲ ಆಗುವಂತಹ ಹೈದರಾಬಾದ್‌ಗೆ ಸಮೀಪದ ಚಿಂಚೋಳಿಯಲ್ಲಿ ಜನಸ್ಪಂದನೆ ನಡೆಸಿದ್ದು ಇದೇ ಸ್ಪೇಷಲ್ ಬೇಬಿ. ಶಾಸಕನಾದ ಮೊದಲ ಅವಧಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಮೂರು ಬಾರಿ ಮಂತ್ರಿಗಿರಿ ಪಡೆದು, ಮುಖ್ಯಮಂತ್ರಿ ಸೂಚನೆಯನ್ನೂ ಕಡೆಗಣಿಸಿ ಜಿಲ್ಲಾ ಕೇಂದ್ರವನ್ನು ಬಿಟ್ಟು ಚಿಂಚೋಳಿಯಲ್ಲಿ ಜನಸ್ಪಂದನೆ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಪಡೆದ ಪ್ರಿಯಾಂಕ್ ಅವರು ಎಂ.ಬಿ. ಪಾಟೀಲ ಅವರಿಗೆ ಸಿಕ್ಕಿದ್ದ ಐಟಿ, ಬಿಟಿ ಖಾತೆಯನ್ನೂ ಕಸಿದುಕೊಂಡರು. ಹಿರಿಯ ನಾಯಕರಾದ ಎಂ.ವೈ.ಪಾಟೀಲ ಮತ್ತು ರೇವುನಾಯಕ ಬೆಳಮಗಿ ಅವರನ್ನು ಎಡ–ಬಲಕ್ಕೆ ಕೂರಿಸಿಕೊಳ್ಳುವುದು ಇದೇ ಸ್ಪೇಷಲ್ ಬೇಬಿ ಪ್ರಿಯಾಂಕ್ ” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಸವ ಅಥವಾ ಗರ್ಭಪಾತ; ಮಹಿಳೆಯ ಆಯ್ಕೆಯೇ ಅಂತಿಮ
ದುರಹಂಕಾರದ ವ್ಯಕ್ತಿ ಪ್ರಿಯಾಂಕ್ ಖರ್ಗೆ
“ಪ್ರಿಯಾಂಕ್ ಖರ್ಗೆ ಅವರಲ್ಲಿ ದುರಹಂಕಾರ ತುಂಬಿ ತುಳುಕುತ್ತಿದೆ. ಜಿಲ್ಲಾ ಕೆಡಿಪಿ ಸಭೆ ನಡೆಸುವ ಬದಲು ನ್ಯಾಯಾಲಯದ ಮೋರೆ ಹೋಗಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ದುರಹಂಕಾರ ಪ್ರದರ್ಶನ ಮಾಡಿದ್ದಾರೆ” ಎಂದು ಉಮೇಶ ಜಾಧವ ಹರಿಹಾಯ್ದರು.
“ಪಶ್ಚಿಮ ಬಂಗಾಳದ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರತಿಪಕ್ಷದವರ ಧ್ವನಿ ಅಡಗಿಸುವ ಸಂಸ್ಕೃತಿ ಶುರುವಾಗಿದೆ. ದೇವಾನಂದ ಕೊರಬಾ ಆತ್ಮಹತ್ಯೆಗೆ ನ್ಯಾಯ ಸಿಕ್ಕಿಲ್ಲ. ಪಾಲಿಕೆಯಲ್ಲಿ ಲಿಂಗಾಯತ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ. ಸೇಡಂನಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪ್ರಶ್ನೆ ಎತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಲ್ಲಿ ಕೊಲೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದೇನಾ ನಿಮ್ಮ ಸುಸಂಸ್ಕೃತ ಆಡಳಿತ?” ಎಂದು ವಾಗ್ದಾಳಿ ನಡೆಸಿದರು.