ಸಾರ್ವಜನಿಕ ಶೌಚಾಲಯದ ಆಸ್ತಿ ಒತ್ತುವರಿ ಮಾಡಿಕೊಂಡು ಸುತ್ತುಗೋಡೆಯನ್ನು ತೆರವುಗೊಳಿಸಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲು ಕುಮ್ಮಕ್ಕು ನೀಡಿದ ಬಳೂರ್ಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ಅವರನ್ನು ಅಮಾನತು ಮಾಡಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಅಫಜಲಪುರ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಕಾರ್ಯಕರ್ತರು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
“ಬಳೂರ್ಗಿ ಗ್ರಾಮದ ಸಾರ್ವಜನಿಕ ಶೌಚಾಲಯದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಸುತ್ತು ಗೋಡೆಯನ್ನು ತೆರವುಗೊಳಿಸಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲು ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಕುಮ್ಮಕ್ಕು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಿ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ವ್ಯಕ್ತಿಗಳಿಗೆ ದಂಡ ಹಾಕಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಜತೆಗೆ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.
“ಬಳೂರ್ಗಿ ಗ್ರಾಮದ ದುಧನಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಹಿಳೆಯರ ಸಾರ್ವಜನಿಕ ಶೌಚಾಲಯವು ಸುಮಾರು ವರ್ಷಗಳ ಹಿಂದಿನದು. ಸದರಿ ಶೌಚಾಲಯದ ಜಾಗವು ಗ್ರಾಮ ಪಂಚಾಯಿತಿ ಅಧೀನದಲ್ಲಿ ಬರುವುದರಿಂದ ಇದಕ್ಕೆ ಸುತ್ತಗೋಡೆ ನಿರ್ಮಿಸಿರುವುದಿಲ್ಲ. ಸುತ್ತಮುತ್ತಲಿನ ಜಾಗದ ವ್ಯಕ್ತಿಗಳು, ಅವರ ಅಳತೆಯ ಜಾಗವನ್ನು ಮೀರಿ ಸರ್ಕಾರದ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಅವರಿಗೆ ಬೇಕಾದಂತೆ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯನ್ನು ಒಡೆದುಹಾಕಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿ, ಕಟ್ಟಡ ನಿರ್ಮಿಸಿದ್ದಾರೆ” ಎಂದರು.
“ಗ್ರಾಮದ ಮಹಿಳೆಯರು ಈ ವಿಷಯವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿ ಮಹಿಳೆಯರಿಗೆ ಮನಬಂದಂತೆ ಬೈದು ಕಳುಹಿಸಿದ್ದಾರೆ. ಆದ್ದರಿಂದ ಬಳೂರ್ಗಿ ಗ್ರಾಮದ ಮಹಿಳೆಯರ ಶೌಚಾಲಯದ ಜಾಗ ಕಬಳಿಕೆ ಆಗಿರುವುದನ್ನು ನೋಡಿದಾಗ ಮಹಿಳೆಯರ ಶೌಚಾಲಯದ ಸರ್ಕಾರಿ ಜಾಗವನ್ನು ಕಬಳಿಸಿದ್ದು, ಅನ್ಯಾಯ ಎಸಗಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರಿ ಆಸ್ತಿ ಕಬಳಿಕೆ ಮಾಡಿರುವುದಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿದ್ದು, ನೀವು ಸ್ಥಳಕ್ಕೆ ಕೂಡಲೇ ಬರಬೇಕೆಂದು ಮನವಿ ಮಾಡಿದರೂ ಅವರು ಮನಬಂದಂತೆ ಮಾತನಾಡಿ, ಈ ಆಸ್ತಿಯ ವಿಷಯು ನಮಗೆ ಸಂಬಂಧಿಸಿಲ್ಲ. ನಾನು ಅಲ್ಲಿಗೆ ಬರುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದರು” ಎಂದು ಅಲವತ್ತುಕೊಂಡರು.
“ಶೌಚಾಲಯದ ಸರಕಾಗಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೇ ಗ್ರಾಮ ಪಂಚಾಯಿತಿ ಅಧೀನದಲ್ಲಿ ಪಡೆದುಕೊಳ್ಳಬೇಕು ಹಾಗೂ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಒಡೆದುಹಾಕಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿ ಕಟ್ಟಡ ನಿರ್ಮಿಸಿರುವ ವ್ಯಕ್ತಿಗೆ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಕೀಮೋಥೆರಪಿ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರ ಕೊರತೆ
“ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಹಾಗೂ ಇದಕ್ಕೆ
ಸಂಬಂಧಪಟ್ಟ ಮೇಲಾಧಿಕಾರಿಗಳನ್ನೂ ಅಮಾನತು ಮಾಡಬೇಕು. ಬಳೂರ್ಗಿ ಗ್ರಾಮದ ಮಹಿಳೆಯರಿಗೆ ಉಂಟಾಗಿರುವ ಅನ್ಯಾಯಕ್ಕೆ ತಾವು ನ್ಯಾಯ ಒದಗಿಸಿ, ಕೂಡಲೇ ಶೌಚಾಲಯ, ಹಾಗೂ ಸುತ್ತುಗೋಡೆ ನಿರ್ಮಿಸಿ ಚಾಲನೆ ನೀಡಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಮನೋಹರ ರಾಠೋಡ, ಮುತ್ತಪ್ಪ ಕುರಿಮನಿ, ಶರಣು ದಿವಾಣಜಗಿ, ನಂದಕುಮಾರ ಹರಳಯ್ಯ, ಬೈಲಪ್ಪ ಗೌರ, ದಯಾನಂದ ಪಾಟೀಲ, ಈರಣ್ಣಗೌಡ ಪಾಟೀಲ, ಶರಣಯ್ಯ ಮಠಪತಿ,
ಜಗದೀಶ ತಳವಾರ ಸೇರಿದಂತೆ ಇತರರು ಇದ್ದರು.