ಬೆಂಗಳೂರು ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಬಾಂಗ್ಲಾದೇಶ ಮೂಲದ ಯುವತಿಯರ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿವೆ. ಬಾಂಗ್ಲಾ ಪ್ರಜೆ ಕಮಲ್ ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುತ್ತಿರುವ ವಿಚಾರ ಗೊತ್ತಾಗಿದೆ.
ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಮೇಲೆ ನಡೆದ ದಾಳಿಯಲ್ಲಿ ನಕಲಿ ಆಧಾರ್ ಕಾರ್ಡ್ ದಂಧೆ ಬಯಲಾಗಿದೆ. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ತನಿಖೆಗೆ ಇಳಿದಾಗ ನಕಲಿ ಆಧಾರ್ ಕಾರ್ಡ್ ಜಾಲ ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ಸರ್ಕಾರಿ ಗುರುತಿನ ಚೀಟಿಗಳನ್ನು ಸೃಷ್ಟಿಸುವ ದಂಧೆ ಕುರಿತು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಕ್ಟೋಬರ್ 19 ರಂದು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
“ನಾವು ವೇಶ್ಯಾಗೃಹದ ಮೇಲೆ ದಾಳಿ ನಡೆಸಿದ ನಂತರ, ಸಾಮಾನ್ಯವಾಗಿ ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತೇವೆ. ಈ ವೇಳೆ, ವೇಶಾವಾಟಿಕೆಯಲ್ಲಿ ತೋಡಗಿದ್ದ ಮಹಿಳೆಯರ ಆಧಾರ್ ಕಾರ್ಡ್‌ನಲ್ಲಿನ ವಿಳಾಸವು ತಪ್ಪಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ತನಿಖೆಯ ನಂತರ, ಕಾರ್ಡ್‌ಗಳು ನಕಲಿ ಎಂದು ತಿಳಿದುಬಂದಿತ್ತು” ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
ನಕಲಿ ಆಧಾರ್ ಮಾಡಿಕೊಟ್ಟ ಆರೋಪಿಗಳು ಸಚಿವ ಬೈರತಿ ಸುರೇಶ್ ಆಪ್ತರು ಎನ್ನಲಾಗಿದ್ದು, ಈ ವಿಚಾರವೀಗ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ದಸರಾ ಸಂಭ್ರಮ | ಬೆಂಗಳೂರಿನ ಮಾರ್ಕೇಟ್‌ಗಳಲ್ಲಿ ಜನವೋ ಜನ
ಆರೋಪಿಗಳು ಸಚಿವರ ಆಪ್ತರಾದ ಹಿನ್ನೆಲೆ, ಸಿಸಿಬಿ ಪೊಲೀಸರು ಆಧಾರ್ ಆ್ಯಕ್ಟ್ 2016ನ್ನು ಎಫ್ಐಆರ್ನಲ್ಲಿ ದಾಖಲಿಸದೆ, ಕೇವಲ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಪ್ರಕರಣ ಸಮ್ಮರಿಯಲ್ಲಿ ಅಧಾರ್ ಕಾರ್ಡ್ ಕೂಡ ನಕಲಿ ಮಾಡಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ, ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.