ತೆಲಂಗಾಣದ ವಿವಾದಿತ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತು ರದ್ದುಗೊಳಿಸಿರುವ ಬಿಜೆಪಿ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೋಶಾಮಹಲ್ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವುದಾಗಿ ಭಾನುವಾರ ಘೋಷಿಸಿದೆ.
ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಜಾ ಸಿಂಗ್ ಅವರನ್ನು 2022ರ ಆಗಸ್ಟ್‌ನಲ್ಲಿ ಅಮಾನತು ಮಾಡಲಾಗಿತ್ತು. ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನು ರಾಜಾ ಸಿಂಗ್ ಪುನರಾವರ್ತಿಸಿದ್ದರು. ಹೈದರಾಬಾದ್‌ನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದ ನಂತರ ಎಚ್ಚೆತ್ತುಕೊಂಡ ಬಿಜೆಪಿ, ಶಾಸಕ ರಾಜಾ ಸಿಂಗ್ ವಿರುದ್ಧ ಕ್ರಮ ಜರುಗಿಸಿತ್ತು.
ನೂಪುರ್ ಶರ್ಮಾ ನೀಡಿದ ಹೇಳಿಕೆ ಅರಬ್ ರಾಷ್ಟ್ರಗಳಲ್ಲಿ ಭಾರೀ ಸದ್ದು ಮಾಡಿತ್ತು. ಭಾರತದೊಂದಿಗಿನ ವ್ಯಾಪಾರ ವಹಿವಾಟುಗಳಿಗೆ ಮಾರಕವಾಗುವಂತಹ ಬೆಳವಣಿಗೆಗಳು ಆಗಿದ್ದವು.
“ಪಕ್ಷದ ಶೋಕಾಸ್ ನೋಟಿಸ್‌ಗೆ ನೀಡಿದ ಉತ್ತರದ ಆಧಾರದ ಮೇಲೆ ರಾಜಾ ಸಿಂಗ್ ಅವರ ಅಮಾನತು ರದ್ದುಗೊಳಿಸಲಾಗಿದೆ” ಎಂದು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ತಿಳಿಸಿದ್ದಾರೆ.
“ಪಕ್ಷಕ್ಕೆ ಅಗೌರವ ತರುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ ಪಕ್ಷವನ್ನು ಟೀಕಿಸಿದಾಗಲೆಲ್ಲ ನಾನು ಮುಸ್ಲಿಮರನ್ನು ಟೀಕಿಸುತ್ತಿದ್ದೇನೆಂದು ಭಾವಿಸಲಾಗುತ್ತಿದೆ” ಎಂದು ರಾಜಾ ತಮ್ಮ ಉತ್ತರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪಕ್ಷದಿಂದ ಅಮಾನತುಗೊಳಿಸಿದ ನಂತರವೂ ರಾಜಾ ಸಿಂಗ್ ಮುಸ್ಲಿಮರ ವಿರುದ್ಧ ಹಲವಾರು ಬಾರಿ ದ್ವೇಷದ ಭಾಷಣಗಳನ್ನು ಮಾಡಿರುವುದನ್ನು ಕಾಣಬಹುದು.
“ಬುರ್ಖಾ ಧರಿಸುವ ಮಹಿಳೆಯರೊಂದಿಗೆ ಸ್ನೇಹ ಬೆಳೆಸಬೇಡಿ” ಎಂದು ಹಿಂದೂ ಮಹಿಳೆಯರನ್ನು ಉದ್ದೇಶಿಸಿ ಈ ವರ್ಷದ ಆರಂಭದಲ್ಲಿ ರಾಜಾ ಹೇಳಿಕೆ ನೀಡಿದ್ದರು.
“ಹಣೆಯ ಮೇಲೆ ತಿಲಕವನ್ನು ಹೊಂದಿರುವವರು ನನ್ನ ಸಹೋದರರು. ತಿಲಕವನ್ನು ಧರಿಸುವ ಜನರೊಂದಿಗೆ ಮಾತ್ರ ನಾನು ಸ್ನೇಹ ಬೆಳೆಸುತ್ತೇನೆ. ನಮ್ಮ ಸಹೋದರಿಯರೇ, ಬುರ್ಖಾ ಧರಿಸಿದ ಮಹಿಳೆಯರೊಂದಿಗೆ ಸ್ನೇಹ ಬೆಳೆಸಬೇಡಿ” ಎಂದು ಪ್ರಚೋದಿಸಿದ್ದರು.
ಮುಸ್ಲಿಂ ಪುರುಷರಷ್ಟೇ ಅಲ್ಲ, ಮಹಿಳೆಯರಿಂದಲೂ ಹಿಂದೂಗಳು ಅಪಾಯವನ್ನು ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾವು ಅಫ್ತಾಬ್‌ನಿಂದ ಅಪಾಯವನ್ನು ಎದುರಿಸಿದ್ದೇವೆ, ಆದರೆ ಈಗ ಆಯೇಷಾರಿಂದಲೂ ಅಪಾಯವಿದೆ. ಅಫ್ತಾಬ್‌ಗೆ [ಹಿಂದೂ ಮಹಿಳೆಯರನ್ನು] ಪರಿಚಯಿಸಿದ್ದು ಇದೇ ಆಯೇಷಾ ಎಂದಿದ್ದರು.
ಮಾರ್ಚ್ ತಿಂಗಳು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಜಾ ಸಿಂಗ್ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. 2026ರ ವೇಳೆಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗುವುದು ಎಂದು ತಿಳಿಸಿದ್ದರು.
ಮಹಾರಾಷ್ಟ್ರದ ಔರಂಗಾಬಾದ್ ನಗರಕ್ಕೆ ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದನ್ನು ಬೆಂಬಲಿಸಲು ಆಯೋಜಿಸಲಾಗಿದ್ದ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಜಾ ಸಿಂಗ್, “ಲವ್ ಜಿಹಾದ್ ಪ್ರಕರಣಗಳು ಕಂಡುಬಂದರೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದರು.
ಭಾರತದಲ್ಲಿ 100 ಕೋಟಿ ಹಿಂದೂಗಳಿದ್ದಾರೆ. ಹಿಂದೂಗಳು ಜಿಹಾದ್ ಮಾಡಲು ಪ್ರಾರಂಭಿಸಿದರೆ, ನಿಮಗೆ [ಮುಸ್ಲಿಮರಿಗೆ] ಮದುವೆಯಾಗಲು ಹೆಣ್ಣುಗಳು ಸಿಗುವುದಿಲ್ಲ ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು.
ಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಅವರಿಗೆ ನಿಂದನೀಯ ಪದಗಳನ್ನು ಬಳಸಿದ್ದರು. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕರನ್ನು ನಾಯಿಗಳಿಗೆ ಹೋಲಿಸಿದ್ದರು.