ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿವಾದ: ಮೂರು ಪ್ರತ್ಯೇಕ ಎಫ್‌ಐಆರ್ ದಾಖಲು

Date:

Advertisements

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿರುವ ಹಾಗೂ ವಿವಾದದ ಕೇಂದ್ರ ಬಿಂದುವಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಿರ್ಮಾಣ ಮಾಡಲಾಗಿದ್ದ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.

ಪರಶುರಾಮನ ಪ್ರತಿಮೆ ಕಂಚಿನದ್ದೋ ಅಥವಾ ಫೈಬರ್‌ನದ್ದೋ ಎಂಬ ನೈಜತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಕೆಲವು ತಿಂಗಳ ಹಿಂದೆಯೇ ಹೇಳಿಕೆಗಳು, ಪ್ರತಿಭಟನೆ, ಹಾಗೂ ಉಪವಾಸ ಸತ್ಯಾಗ್ರಹ ನಡೆದಿದೆ. ಪರ-ವಿರೋಧ ಹೇಳಿಕೆಗಳು ಕೂಡ ಬಂದಿದ್ದವು.

ಕಳೆದ ಎರಡು ತಿಂಗಳಿನಿಂದ ಈ ವಿಚಾರ ಸಾಮಾಜಿಕ ಜಾಲತಾಣ ಮತ್ತು ಬಹಿರಂಗವಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಈಗ ಈ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ತೀವ್ರ ತಿಕ್ಕಾಟಕ್ಕೂ ಕಾರಣವಾಗಿದೆ. ಇದರ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಈಗ, ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

Advertisements

ಸಿನಿಲ್‌ ಕುಮಾರ್‌ ಸಿಎಂ

ಮೂರು ಎಫ್‌ಐಆರ್

ರಿಯಾಲಿಟಿ ಚೆಕ್ ಮಾಡಲು ಹೊರಟ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿಯವರು ದೂರು ನೀಡಿದರೆ, ಪರಶುರಾಮ ಮೂರ್ತಿಯ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಸಂಬಂಧ ಬಿಜೆಪಿಯವರ ವಿರುದ್ಧ ಪರಶುರಾಮ ಥೀಮ್ ಪಾರ್ಕ್ ನೈಜತೆಯ ಬಗ್ಗೆ ಹೋರಾಟ ನಡೆಸುತ್ತಿರುವ ದಿವ್ಯಾ ನಾಯಕ್ ದೂರು ನೀಡಿದ್ದಾರೆ.

ಇದೇ ವೇಳೆ ಬೆಟ್ಟದ ಹತ್ತಿರ ಹೋಗಿ ಫೋಟೋ ತೆಗೆಯುತ್ತಿದ್ದ ಮುಸ್ಲಿಂ ಯುವಕನ ಮೇಲೆ ಬಿಜೆಪಿಯವರು ಕಂಚಿನದ್ದೆಂದು ಹೇಳಲು ಹಲ್ಲೆ ನಡೆಸಿರುವ ಬಗ್ಗೆಯೂ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಒಂದೇ ವಿವಾದಕ್ಕೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಾಗಿದೆ.

karkala police station

ಬಿಜೆಪಿ ನೀಡಿದ ದೂರಿನಲ್ಲೇನಿದೆ?
ಬೈಲೂರು ಉಮಿಕಲ್ ಕುಂಜ ಬೆಟ್ಟದ ಮೇಲೆ ನಿರ್ಮಾಣವಾಗಿದ್ದ ಪರಶುರಾಮನ ಪ್ರತಿಮೆ ಫೈಬರ್ ಎಂಬುದು ಕಾಂಗ್ರೆಸ್ ವಾದಿಸುತ್ತಿದೆ. ಕಾರ್ಕಳ ಕಾಂಗ್ರೆಸ್ ಈ ಬಗ್ಗೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಮೂರ್ತಿಯ ಸತ್ಯಾಸತ್ಯತೆ ಬಯಲಿಗೆಳೆಯಲು ಇಳಿದಿತ್ತು. ಈ ವಿಚಾರವಾಗಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತ ಸುನಿಲ್ ಎಂಬುವವರು ದೂರು ನೀಡಿದ್ದಾರೆ.

parashurama

ದೂರಿನಲ್ಲಿ, ಪರಶುರಾಮ ವಿಗ್ರಹದ ಮುಂದುವರಿದ ಕಾಮಗಾರಿಗಳು ನಡೆಯುತ್ತಿರುವ ಕಾರಣ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದಾರೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಗುಂಪುಗುಂಪಾಗಿ ಉಮಿಕಲ್ ಬೆಟ್ಟದ ಮೇಲೆ ಹೋಗಿದ್ದಾರೆ. ಸರ್ಕಾರಿ ಸೊತ್ತು ಆಗಿರುವ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚವನ್ನು ಹರಿದು ಹಾಕಿ, ಕಂಚಿನ ಮೂರ್ತಿಯ ಮೇಲಿದ್ದ ಫಿನಿಷಿಂಗ್ ಲೇಪನವನ್ನು ಹರಿದಿದ್ದಾರೆ. ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಬಳಿಕ ಮೂರ್ತಿ ಫೈಬರ್ ಎಂಬಂತೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಹಿಂದೂ ಧರ್ಮದ ಅನುಯಾಯಿಗಳ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನ ಅನ್ವಯ ಶುಭದ ರಾವ್, ದೀಕ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ, ಸುಬಿತ್ ಎನ್. ಆರ್, ವಿವೇಕಾನಂದ ಶೆಣೈ, ಯೋಗೀಶ ನಯನ್ ಇನ್ನಾ ಸೂರಜ್ ಶೆಟ್ಟಿ ನಕ್ರೆ, ಪ್ರದೀಪ್ ಶೆಟ್ಟಿ ನಲ್ಲೂರು, ಅಲ್ಪಾಜ್, ಐವಾನ್ ಮಿರಾಂಡ ರಂಗನಪಲ್ಕೆ, ದಿವ್ಯಾ ನಾಯಕ್, ಕೃಷ್ಣ ಶೆಟ್ಟಿ ನಲ್ಲೂರು, ಹರೀಶ್ ಪೂಜಾರಿ ಮತ್ತಿತರರ ವಿರುದ್ಧ ಕೇಸು ದಾಖಲಾಗಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಕಾರ್ಕಳದ ಕಾಂಗ್ರೆಸ್ ಮುಖಂಡ ದೀಪಕ್ ಶೆಟ್ಟಿ, ‘ಪರಶುರಾಮ ಮೂರ್ತಿ ಕಾಣೆಯಾದ ಸುದ್ದಿ ಹೊರಬಂದ ಬಳಿಕ ಇದರ ಪರಿಶೀಲನೆ ನಡೆಸಲು ಅ.19ರಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಬಂದಿದ್ದರು. ಈ ವೇಳೆ ಉಡುಪಿಯ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕೂಡ ಇದ್ದರು. ಮೂರ್ತಿ ಇದ್ದ ಸ್ಥಳಕ್ಕೆ ಹಾಕಿದ್ದ ಟರ್ಪಾಲು ತೆಗೆದಿದ್ದು ನಾವಲ್ಲ. ನಿರ್ಮಿತಿ ಕೇಂದ್ರದ ಅಧಿಕಾರಿಗಳು. ಶಾಸಕರು ಪರಶುರಾಮ ಮೂರ್ತಿಯಲ್ಲಿ ನಡೆಸಿದ್ದ ಭ್ರಷ್ಟಾಚಾರವನ್ನು ನಾವು ಜನರ ಮುಂದೆ ಇರಿಸಿದ್ದಕ್ಕೆ ಈ ರೀತಿ ಎಫ್‌ಐಆರ್ ಮಾಡಿಸಿದ್ದಾರೆ. ಸತ್ಯ ಜನರಿಗೆ ಗೊತ್ತಿದೆ’ ಎಂದು ತಿಳಿಸಿದರು.

Karkala Theme Park Controversy

ದಿವ್ಯಾ ನಾಯಕ್ ನೀಡಿದ ದೂರೇನು?
ಕಾರ್ಕಳ ತಾಲೂಕು ಯರ್ಲಪಾಡಿ ಗ್ರಾಮದ ಪರಶುರಾಮ ಥೀಮ್ ಪಾರ್ಕ್ ಸರಕಾರದ ಅನುದಾನದಿಂದ ನಡೆದ ಕೆಲಸವಾಗಿದ್ದು, ಪ್ರಸ್ತುತ ಅಲ್ಲಿಗೆ ಭೇಟಿ ನೀಡಲು ಯಾರಿಗೂ ಅವಕಾಶವಿರುವುದಿಲ್ಲ. ಈ ಸ್ಥಳಕ್ಕೆ ಅ.19ರಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ನಂತರ ಪರಶುರಾಮ ಮೂರ್ತಿಯ ಪಕ್ಕಕ್ಕೆ ಹೋಗಿ ಪರಶುರಾಮರ ಪಾದಕ್ಕೆ ಸುತ್ತಿಗೆಯಿಂದ ಹೊಡೆದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಸಂಬಂಧ ಸುಹಾಸ್‌ , ಮಹಾವೀರ , ಸುಮಿತ್‌, ವಿಖ್ಯಾತ್‌ , ಮುಸ್ತಫಾ , ರಾಕೇಶ್‌, ಸಮೃದ್ದಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿಯವರು ನೀಡಿದ ದೂರಿನ ಸಂಬಂಧ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ದಿವ್ಯಾ ನಾಯಕ್, ‘ಬಿಜೆಪಿಯವರು ಈಗಾಗಲೇ ನೀಡಿದ ದೂರಿನಲ್ಲಿ ನನ್ನ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ನಾನು ಆ ದಿನ ಊರಿನಲ್ಲೇ ಇರಲಿಲ್ಲ. ಇದು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ. ಈ ಬಗ್ಗೆ ಉಡುಪಿ ಎಸ್‌ಪಿಯವರ ಗಮನಕ್ಕೂ ತಂದಿದ್ದೇನೆ’ ಎಂದು ತಿಳಿಸಿದ್ದಾರೆ.

ಕೈಗೆ ಸುತ್ತಿಗೆ ನೀಡಿ ಕಂಚಿನ ಮೂರ್ತಿಯದ್ದೆಂದು ಹೇಳಬೇಕು ಎಂದು ಒತ್ತಡ ಹಾಕಿದ್ದ ಬಿಜೆಪಿಗರು!
ಇದೇ ವಿಚಾರವಾಗಿ ಬಿಜೆಪಿಯವರ ಮೇಲೆ ಮುಸ್ಲಿಂ ಯುವಕನೋರ್ವ ದೂರು ನೀಡಿದ್ದು, ಪರಶುರಾಮ ಥೀಮ್ ಪಾರ್ಕ್ ಬಳಿ ತೆರಳಿ, ಹಿಂದೆ ಬರುತ್ತಿದ್ದಾಗ ಬಿಜೆಪಿಯವರೆಂದು ಹೇಳಿಕೊಂಡ ಒಂದು ಗುಂಪು, ನನ್ನನ್ನು ಬೆಟ್ಟದ ಮೇಲೆ ಕರೆದುಕೊಂಡು ಹೋಗಿ, ಕೈಗೆ ಸುತ್ತಿಗೆ ನೀಡಿ ಕಂಚಿನ ಮೂರ್ತಿಯದ್ದೆಂದು ಹೇಳಬೇಕು. ನಾವು ವಿಡಿಯೋ ಮಾಡುತ್ತೇವೆ ಎಂದು ಒತ್ತಡ ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧ ಕೂಡ ಎಫ್‌ಐಆರ್ ದಾಖಲಾಗಿದೆ.

WhatsApp Image 2023 10 22 at 7.20.00 PM

ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಹೆಸರು ಹೇಳಲಿಚ್ಛಿಸದ ಸಾಫ್ಟ್‌ವೇರ್ ಉದ್ಯೋಗಿ ಯುವಕ, ‘ಘಟನೆ ನಡೆದದ್ದು ಹೌದು. ದೂರು ಕೂಡ ನೀಡಿದ್ದೇನೆ. ಇದು ದೊಡ್ಡ ವಿಚಾರ ಎಂದು ನನಗೆ ಗೊತ್ತಿರಲಿಲ್ಲ. ಈ ಕಿರಿಕಿರಿ ನಮಗೆಲ್ಲ ಬೇಡ ಎಂದು ಕುಟುಂಬದವರು ತಿಳಿಸಿದ್ದಾರೆ. ಹಾಗಾಗಿ, ಪೊಲೀಸರಿಗೆ ನೀಡಿರುವ ದೂರನ್ನು ಹಿಂಪಡೆಯುತ್ತೇನೆ’ ಎಂದು ಯುವಕ ತಿಳಿಸಿದ್ದಾನೆ.

ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರ ಅಲ್ಲ ಎಂದ ಶಾಸಕ ಸುನಿಲ್ ಕುಮಾರ್

ಈ ಎಲ್ಲ ಬೆಳವಣಿಗೆ ನಡುವೆ ವಿವಾದಕ್ಕೆ ಸಂಬಂಧಿಸಿ ನಿನ್ನೆ(ಅ.21) ಮೌನ ಮುರಿದಿದ್ದ ಶಾಸಕ ಸುನಿಲ್ ಕುಮಾರ್, ‘ಪರಶುರಾಮ ಥೀರ್ಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ. ಅದೊಂದು ಪ್ರವಾಸಿ ತಾಣ ಮಾತ್ರ’ ಎಂದಿದ್ದಾರೆ.

‘ಕಾಂಗ್ರೆಸ್ ನಾಯಕರು ಪರಶುರಾಮ ಥೀಮ್ ಪಾರ್ಕಿನಲ್ಲಿ ಹಿಂದುತ್ವದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ. ಅದೊಂದು ಪ್ರವಾಸಿ ತಾಣವಾಗಿದೆ. ಅಲ್ಲಿಗೆ ಯಾರು ಬೇಕಾದರೂ ಪಾದರಕ್ಷೆಯನ್ನು ಹಾಕಿಕೊಂಡು ಹೋಗಬಹುದು. ಅಲ್ಲಿ ತೆಂಗಿನಕಾಯಿ ಒಡೆಯಲು, ಊದುಬತ್ತಿ ಹಚ್ಚಲು, ಮಂಗಳಾರತಿ ಮಾಡಲು ಅವಕಾಶವೇ ಇಲ್ಲ’ ಎಂದು ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ತುರ್ತಾಗಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ವಿ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X