ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹಲವು ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಲವಡೆ ಬಿಜೆಪಿ ಟಿಕೆಟ್ ಸಿಗದ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜ್‌ಸಮಂದ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಹಲವು ವಸ್ತುಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಈ ಹಿಂದೆ, 41 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ಭಾನುವಾರ 83 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಟಿಕೆಟ್ ಸಿಗದೇ ಇರುವ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಚಿತ್ತೋರ್‌ಗಢ, ರಾಜ್‌ಸಮಂದ್, ಬುಂದಿ, ಅಲ್ವಾರ್ ಮತ್ತು ಜೈಪುರದಲ್ಲಿ ಭಾಗದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಈ ಭಾಗದಲ್ಲಿ ಚುನಾವಣೆಯಲ್ಲ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚಿತ್ತೋರ್‌ಗಢದಲ್ಲಿ ಹಾಲಿ ಶಾಸಕ ಚಂದ್ರಭನ್ ಸಿಂಗ್ ಆಕ್ಯಾ ಅವರನ್ನು ಪಕ್ಷವು ಕೈಬಿಟ್ಟಿದ್ದು, ನರ್ಪತ್ ಸಿಂಗ್ ರಾಜ್ವಿಗೆ ಟಿಕೆಟ್ ನೀಡಿದೆ. ಸತತ ಎರಡು ಅವಧಿಗೆ ಚಿತ್ತೋರ್‌ಗಢದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಚಂದ್ರಭಾನ್ ಸಿಂಗ್ ಆಕ್ಯಾ ಅವರ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಪಿ ಜೋಶಿ ವಿರುದ್ಧ ಕಿಡಿಕಾರಿದ್ದಾರೆ.
“ಜೋಶಿ ಅವರು ಕಾಂಗ್ರೆಸ್‌ನ ಎನ್‌ಎಸ್‌ಯುಐ ಭಾಗವಾಗಿದ್ದಾಗ ನಾನು ಎಬಿವಿಪಿಯಲ್ಲಿದ್ದೆ. ಆಗಿನಿಂದಲೂ ಜೋಶಿ ಅವರು ನನ್ನ ಮೇಲೆ ದ್ವೇಷ ಹೊಂದಿದ್ದಾರೆ. ಪರಿಣಾಮವಾಗಿ, ನನ್ನ ಟಿಕೆಟ್ ಹಿಂಪಡೆಯಲಾಗಿದೆ” ಎಂದು ಚಂದ್ರಭಾನ್ ಸಿಂಗ್ ಕಿಡಿಕಾರಿದ್ದಾರೆ.
ರಾಜ್‌ಸಮಂದ್‌ನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ದಿನೇಶ್ ಬಡಾಲಾ, ಗಣೇಶ್ ಪಲಿವಾಲ್ ಮತ್ತು ಮಹೇಂದ್ರ ಕೊಠಾರಿ ಬೆಂಬಲಿಗರು ಹಾಲಿ ಶಾಸಕಿ ದೀಪ್ತಿ ಮಹೇಶ್ವರಿ ಅವರನ್ನು ಕಣಕ್ಕಿಳಿಸಿರುವುದನ್ನು ವಿರೋಧಿಸಿ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಸಿಟ್ಟಿಗೆದ್ದ ಕಾರ್ಯಕರ್ತರು ಚುನಾವಣಾ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಟಿಕೆಟ್ ನಿರ್ಧಾರ ವಿರೋಧಿಸಿ ಹಲವು ಮುಖಂಡರು ಮತ್ತು ಬೂತ್ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಉದಯಪುರದಲ್ಲಿ ಉಪಮೇಯರ್ ಪರಸ್ ಸಿಂಘ್ವಿ ತಾರಾ ಚಂದ್ ಜೈನ್ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಹೀಗಾಗಿ, ಅವರು ಕಾರ್ಯಕರ್ತರ ಮುಂದೆ ಭಾವುಕರಾಗಿ ಮಾತನಾಡಿದ್ದು, “ಪಕ್ಷದ ವರಿಷ್ಠರು ಮರುಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.
ಜೈಪುರದ ಪಕ್ಷದ ಕಚೇರಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಅಲ್ಲಿ ಹಾಲಿ ಶಾಸಕ ಅಶೋಕ್ ಲಾಹೋಟಿ ಬದಲಿಗೆ ಭಜನ್ ಲಾಲ್ ಶರ್ಮಾ ಅವರಿಗೆ ಟಿಕೆಟ್ ನೀಡಲಾಗಿದೆ. ಇದನ್ನು ಖಂಡಿಸಿ ಲಾಹೋಟಿ ಬೆಂಬಲಿಗರು ವಿರೋಧಿಸಿದ್ದಾರೆ.