ಅದ್ದೂರಿ ಮೇಕಿಂಗ್ನಿಂದಲೇ ನಿರೀಕ್ಷೆ ಹೆಚ್ಚಿಸಿರುವ ʼಸಲಾರ್ʼ
ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮತ್ತು ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ʼಸಲಾರ್ʼ ಸಿನಿಮಾದ ಬಿಡುಗಡೆ ದಿನಾಂಕ ಬುಧವಾರ ಘೋಷಣೆಯಾಗಿದೆ.
ಚಿತ್ರಕ್ಕೆ ಬಂಡವಾಳ ಹೂಡಿರುವ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲಂಸ್ʼ ಟ್ವಿಟರ್ನಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದ್ದು, “ಸದ್ಯದಲ್ಲೇ ಕಡು ಕ್ರೂರಿ ನಿಮ್ಮ ಮುಂದೆ ಬರಲಿದ್ದಾನೆ. ಮುಂಬರುವ ಸೆಪ್ಟೆಂಬರ್ 28ರಂದು ಸಲಾರ್ ಸಿನಿಮಾ ತೆರೆಗೆ ಬರಲಿದೆ” ಎಂದು ಮಾಹಿತಿ ನೀಡಿದೆ.
ಫಸ್ಟ್ಲುಕ್ ಪೋಸ್ಟರ್ ಮತ್ತು ಅದ್ದೂರಿ ಮೇಕಿಂಗ್ನಿಂದಲೇ ನಿರೀಕ್ಷೆ ಹೆಚ್ಚಿಸಿರುವ ʼಸಲಾರ್ʼ ಸಿನಿಮಾದಲ್ಲಿ ಬಹುಭಾಷಾ ನಟಿ ಶೃತಿ ಹಾಸನ್, ಪ್ರಭಾಸ್ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರೇಯಾ ರೆಡ್ಡಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ʼಬಾಹುಬಲಿ-2ʼ ಬಳಿಕ ಪ್ರಭಾಸ್ ನಟಿಸಿದ್ದ ʼಸಾಹೋʼ ಮತ್ತು ʼರಾಧೆ ಶ್ಯಾಮ್ʼ ಸಿನಿಮಾಗಳು ಸೋಲನುಭವಿಸಿದ್ದವು. ಸದ್ಯ ತೆರೆಗೆ ಸಜ್ಜಾಗಿರುವ ʼಆದಿಪುರುಷ್ʼ ಸಿನಿಮಾದ ಟೀಸರ್ ಕೂಡ ಸಿನಿ ರಸಿಕರಿಂದ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ʼಸಲಾರ್ʼ ಸಿನಿಮಾ ಬಹಳಷ್ಟು ಮಹತ್ವ ಪಡೆದುಕೊಂಡಿದೆ.