ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಮುಂದುವರಿದಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲರ್ಧದಲ್ಲಿ ಶೇ.32ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವರದಿ ತಿಳಿಸಿದೆ. ಇದೇ ಅವಧಿಯಲ್ಲಿ ರಾಷ್ಟ್ರೀಯ ಸರಾಸರಿ ಶೇ.22.1 (18.31 ಕೋಟಿ) ಕ್ಕಿಂತ ಹೆಚ್ಚಾಗಿದೆ ಎಂದು ಅದರ ವಾಯು ಸಂಚಾರ(ಏರ್ ಟ್ರಾಫಿಕ್) ವರದಿ ಬಹಿರಂಗಪಡಿಸಿದೆ.
ಬೆಂಗಳೂರು ವಿಮಾನ ನಿಲ್ದಾಣವು ಈ ವರ್ಷ ಏಪ್ರಿಲ್ ಮತ್ತು ಸಪ್ಟೆಂಬರ್ ನಡುವೆ 1,84,74,104 ಪ್ರಯಾಣಿಕರಿಗೆ ಸಾಕ್ಷಿಯಾಗಿದೆ. ಕಳೆದ ವರ್ಷ 1,39,93,742 ಪ್ರಯಾಣಿಕರು ಪ್ರಯಾಣಿಸಿದ್ದರು. ಅಂತರರಾಷ್ಟ್ರೀಯ ಪ್ರಯಾಣಿಕರು 16,77,541 ಕ್ಕೆ ಹೋಲಿಸಿದರೆ ಸುಮಾರು 22,29,524 ರಷ್ಟಿದ್ದು, ಶೇ. 32.9 ರಷ್ಟು ಹೆಚ್ಚಳವನ್ನು ಕಂಡಿದೆ. ಇದು ಅಂತಾರಾಷ್ಟ್ರೀಯ ಸಂಚಾರವನ್ನು ದೇಶೀಯ ದಟ್ಟಣೆಗಿಂತ (31.9 ಶೇಕಡಾ) ಶೇ.1 ರಷ್ಟು ಹೆಚ್ಚಿಸಿದೆ.
ಕೆಲವು ಮಾರ್ಗಗಳ ಸ್ಥಗಿತದಿಂದ ಬೆಳಗಾವಿ, ಮೈಸೂರು ಮತ್ತು ಕಲಬುರಗಿಯಂತಹ ವಿಮಾನ ನಿಲ್ದಾಣಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾಜ್ಯದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ.0.9ರಷ್ಟು ಕುಸಿದಿದೆ. ಆದರೂ ದೇಶೀಯ ಸಂಚಾರವು ಶೇಕಡಾ 9.5 ರಷ್ಟು ಹೆಚ್ಚಳವನ್ನು ತೋರಿಸಿದ್ದು, 6,86,726 ಪ್ರಯಾಣಿಕರನ್ನು ದಾಖಲಿಸಿದೆ. ಹುಬ್ಬಳ್ಳಿಯಲ್ಲೂ ಶೇ.30.1ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಕಲಬುರಗಿ ಮತ್ತು ಬೆಳಗಾವಿಯಲ್ಲಿ ಕ್ರಮವಾಗಿ ಶೇ.35.8 ಮತ್ತು ಶೇಕಡಾ 28.4 ರಷ್ಟು ಸಂಚಾರ ದಟ್ಟಣೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕಳೆದ ವರ್ಷ 1,04,330 ರಷ್ಟಿದ್ದ ಮೈಸೂರು ಈ ವರ್ಷ ಕೇವಲ 76,475 ಕ್ಕೆ ತಲುಪಿದೆ.
“ಹಲವು ವಿಮಾನಯಾನ ಸಂಸ್ಥೆಗಳು ವಿವಿಧ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ನಮಗೆ ತೀವ್ರ ಹೊಡೆತ ಉಂಟಾಗಿದೆ. ಪ್ರೋತ್ಸಾಹದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್‌ಗೆ ಸ್ಪೈಸ್ ಜೆಟ್ ವಿಮಾನಗಳು, ಪುಣೆಗೆ ಅಲಯನ್ಸ್ ಏರ್ ಮತ್ತು ನಾಸಿಕ್‌ಗೆ ಸ್ಟಾರ್ ಏರ್ ವಿಮಾನಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ” ಎಂದು ಬೆಳಗಾವಿ ವಿಮಾನ ನಿಲ್ದಾಣದ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಗಡುವು ವಿಸ್ತರಣೆ ಸಾಧ್ಯತೆ
ಮೈಸೂರಿನಿಂದ ಬೆಳಗಾವಿಗೆ ಟ್ರೂಜೆಟ್ ವಿಮಾನಗಳು ಭರ್ತಿಯಾಗುತ್ತಿದ್ದವು. ಆದರೂ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯನ್ನು ನಿಲ್ಲಿಸಿವೆ ಎಂದು ಮೈಸೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಮೈಸೂರಿನಿಂದ ಹುಬ್ಬಳ್ಳಿಗೆ ಇದ್ದ ಇಂಡಿಗೊ ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ. ಮೈಸೂರಿನಿಂದ ಮಂಗಳೂರಿಗೆ ಕಾರ್ಯನಿರ್ವಹಿಸುತ್ತಿರುವ ಅಲಯನ್ಸ್ ಏರ್‌ಗೆ ಉತ್ತಮ ಪ್ರೋತ್ಸಾಹವಿರಲಿಲ್ಲ. ಪ್ರಸ್ತುತ ರನ್ ವೇ ಎಟಿಆರ್ – 72 ವಿಮಾನಗಳಿಗೆ ಮಾತ್ರ ಸ್ಥಳಾವಕಾಶ ಕಲ್ಪಿಸುತ್ತದೆ. ರನ್ ವೇ ವಿಸ್ತರಿಸಿದಾಗ, ಇತರ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯನ್ನು ಪರಿಗಣಿಸಬಹುದು.