ಮೀಝೋರಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೂ ಕೂಡ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಿಝೋರಾಂ ಮುಖ್ಯಮಂತ್ರಿ ಝೊರಮ್ ತಂಗ ಹೇಳಿಕೆ ನೀಡಿದ್ದಾರೆ.
ಮಿಝೋರಾಂನಲ್ಲಿ ಮುಂದಿನ ನ.7ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮಿಝೋರಾಂ ಮುಖ್ಯಮಂತ್ರಿ ಝೊರಮ್ ತಂಗ ಅವರ ಮಿಝೋ ನ್ಯಾಷನಲ್ ಫ್ರಂಟ್ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದು ಪ್ರಧಾನಿ ಮೋದಿ ಮಮತ್ ಪಟ್ಟಣಕ್ಕೆ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಈ ನಡುವೆಯೇ ಝೊರಮ್ ತಂಗ ಈ ರೀತಿಯ ಹೇಳಿಕೆ ನೀಡಿ, ಅಚ್ಚರಿ ಮೂಡಿಸಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳದ ತಮ್ಮ ನಿರ್ಧಾರದ ಕಾರಣ ತಿಳಿಸಿರುವ ಮಿಝೋರಾಂ ಸಿಎಂ, ಮಿಝೋರಾಂನ ಜನರೆಲ್ಲರೂ ಕ್ರಿಶ್ಚಿಯನ್ನರು. ಮಣಿಪುರದಲ್ಲಿ ಮೇತಿ ಜನರು ನೂರಾರು ಚರ್ಚ್ಗಳನ್ನು ಸುಟ್ಟು ಹಾಕಿದಾಗ ಮಿಝೋರಾಂ ಜನರು ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಈ ಸಮಯದಲ್ಲಿ ಬಿಜೆಪಿಯೊಂದಿಗೆ ಸಹಾನುಭೂತಿ ಹೊಂದುವುದು ನಮ್ಮ ಪಕ್ಷಕ್ಕೆ ದೊಡ್ಡ ಹೊಡೆತ ಕೊಡುತ್ತದೆ’ ಎಂದು ಹೇಳಿದ್ದಾರೆ.
Another party broke alliance with NDA.
Mizo National Front Cheif & Mizoram CM @ZoramthangaCM says he won’t share the stage with Prime Minister Modi in the upcoming election campaign. pic.twitter.com/iXB3a6awsT
— Mahua Moitra Fans (@MahuaMoitraFans) October 24, 2023
ಪ್ರಧಾನಿ ವೇದಿಕೆಯಲ್ಲಿ ಅವರು ಒಬ್ಬರೇ ಇರಲಿ. ನಾನು ಮಾತ್ರ ಪ್ರತ್ಯೇಕವಾದ ವೇದಿಕೆಯಲ್ಲಿ ಚುನಾವಣೆ ಪ್ರಚಾರ ಮಾಡುತ್ತೇನೆ. ಮಿಝೋ ನ್ಯಾಷನಲ್ ಫ್ರಂಟ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಯಾಕೆಂದರೆ ನಮ್ಮ ಪಕ್ಷವು ಕಾಂಗ್ರೆಸ್ ವಿರುದ್ಧವಾಗಿದೆ. ಆದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟದ ಭಾಗವಾಗಿದ್ದರೂ ಮಣಿಪುರದ ಹಿಂಸಾಚಾರದ ಹಿನ್ನೆಲೆ ಪ್ರಧಾನಿ ಮೋದಿಯ ಜೊತೆ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಝೊರಮ್ ತಂಗ ಹೇಳಿದ್ದಾರೆ.
ಮಣಿಪುರ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಿರಾಶ್ರಿತರಿಗೆ ಮಿಝೋರಾಂ ಆಶ್ರಯ ನೀಡಲಿದೆ. ನಾವು ಮ್ಯಾನ್ಮಾರ್ನ ನಿರಾಶ್ರಿತರಿಗೆ ಮಾನವೀಯ ಆಧಾರದ ಮೇಲೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತೇವೆ ಎಂದವರು ಹೇಳಿದ್ದಾರೆ.
ನಿರಾಶ್ರಿತರಿಂದ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲು ಸೂಚಿಸಿರುವ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನವನ್ನು ತಮ್ಮ ಸರ್ಕಾರ ಅನುಸರಿಸುವುದಿಲ್ಲ ಎಂದು ಕಳೆದ ತಿಂಗಳು ಝೊರಮ್ ತಂಗ ಹೇಳಿದ್ದರು. ಮ್ಯಾನ್ಮಾರ್ ನಿರಾಶ್ರಿತರ ಬಯೋಮೆಟ್ರಿಕ್ ಮತ್ತು ದತ್ತಾಂಶಗಳ ಸಂಗ್ರಹವು ತಾರತಮ್ಯವನ್ನು ಉಂಟು ಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಇದನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದರು.
ಹಲವಾರು ಬಿಜೆಪಿ ನಾಯಕರು ಒತ್ತಾಯಿಸುತ್ತಿರುವ ಏಕರೂಪ ನಾಗರಿಕ ಸಂಹಿತೆಯ ಯೋಜನೆಗಳ ವಿರುದ್ಧವೂ ಝೊರಮ್ ತಂಗ ಮಾತನಾಡಿದ್ದಾರೆ. ಎನ್ಡಿಎ ಮಿತ್ರ ಪಕ್ಷವಾಗಿದ್ದರೂ ಕೂಡ ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ಬಗ್ಗೆ ಹಲವಾರು ಬಾರಿ ಧ್ವನಿ ಎತ್ತಿದ್ದಾರೆ.