ಪರಶುರಾಮನ ಪ್ರತಿಮೆಯ ವಿಚಾರವಾಗಿ ಶಾಸಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧದ ಆರೋಪಗಳು ಸುಳ್ಳೆಂದು ಅವರು ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸಾಬೀತು ಮಾಡಿದರೆ, ನಾನು ಕ್ಷಮೆ ಕೇಳುತ್ತೇನೆ. ಮಾತ್ರವಲ್ಲ ರಾಜಕೀಯದಿಂದಲೂ ನಿವೃತ್ತಿಯಾಗುತ್ತೇನೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್‌ಗೆ ಕಾರ್ಕಳ ಪುರಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಶುಭದ ರಾವ್ ಸವಾಲು ಹಾಕಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶುಭದ ರಾವ್, “ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುನೀಲ್ ಅವರು ತಮ್ಮ ವಿರುದ್ಧದ ಆರೋಪಗಳು ಸುಳ್ಳೆಂದು ಹೇಳಿದ್ದಾರೆ. ಅಲ್ಲದೆ, ಅವರು ಅಸಭ್ಯವಾಗಿ ಮಾತನಾಡಿದ್ದಾರೆ. ಧರ್ಮದ ದುರ್ಬಳಕೆಯು ಅವರನ್ನು ಭಿಕ್ಷೆ ಬೇಡುವ ಪರಿಸ್ಥಿತಿಗೆ ತರುತ್ತದೆ. ಅವರು ತಮ್ಮ ವಿರುದ್ಧದ ಆರೋಪಗಳು ಸುಳ್ಳೆಂದು ದೇವರ ಮೇಲೆ ಆಣೆ ಮಾಡಲಿ. ಪ್ರಮಾಣ ಮಾಡುವ ಸ್ಥಳ, ಸಮಯ, ದಿನಾಂಕವನ್ನು ಅವರೇ ನಿರ್ಧರಿಸಲಿ” ಎಂದು ಹೇಳಿದ್ದಾರೆ.
“ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿರುವ ಪ್ರತಿಮೆ ಚೂರಾದ ಚಿತ್ರಗಳು ಪ್ರತಿಮೆ ಸ್ಥಾಪನೆ ಸಂದರ್ಭದ್ಧೇ? ವಿಡಿಯೋದಲ್ಲಿ ದಾಖಲಾಗಿರುವಂತೆ ಕ್ರೈನ್ ಮೂಲಕ ಎತ್ತಿದ ಪರಶುರಾಮನ ಎದೆಯ ಮೇಲಿನ ಭಾಗ ಕಂಚಿನದ್ದೇ? ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪರಶುರಾಮನ ಪ್ರತಿಮೆ ಸಂಪೂರ್ಣ ಕಂಚಿನದ್ದೇ? ಪ್ರತಿಮೆಯ ಮೇಲ್ಭಾಗ ತೆರವು ವಿಚಾರವಾಗಿ ಜಿಲ್ಲಾಡಳಿತ, ಪೊಲೀಸ್ ಮತ್ತು ನಿರ್ಮಿತಿ ಕೇಂದ್ರದ ಮೇಲೆ ತಾವು ಒತ್ತಡ ಹೇರಲಿಲ್ಲವೇ? ಕಾಂಗ್ರೆಸ್ ಅನುದಾನ ತಡೆ ಹಿಡಿದಿದೆ ಎಂದ ಹೇಳಿದ ತಮ್ಮ ಆರೋಪ ಸರಿಯೇ? ಈ ಎಲ್ಲ ಪ್ರಶ್ನೆಗಳಿಗೆ ದೇವಾಲಯಕ್ಕೆ ಬಂದು ಪ್ರಮಾಣ ಮಾಡಿ, ಸಾಬೀತು ಪಡಿಸಿ” ಎಂದು ಶಾಸಕ ಸುನೀಲ್ ಕುಮಾರ್‌ಗೆ ಸುಭದ ರಾವ್ ಸವಾಲು ಹಾಕಿದ್ದಾರೆ.