ಇಸ್ರೇಲ್-ಹಮಾಸ್ ನಡುವಿನ ಸದ್ಯ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮೌನ ಮುರಿದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಮನುಕುಲದ ಮೇಲಿನ ಪರಿಣಾಮಗಳನ್ನು ನಿರ್ಲಕ್ಷಿಸುವ ಮಿಲಿಟರಿ ತಂತ್ರಗಾರಿಕೆಯು ಅಂತಿಮವಾಗಿ ಇಸ್ರೇಲ್‌ಗೆ ತಿರುಗುಬಾಣವಾಗಲೂಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಘರ್ಷದ ಬಗ್ಗೆ ಸುದೀರ್ಘವಾದ ಪೋಸ್ಟ್ ಹಾಕಿರುವ ಒಬಾಮಾ, ‘ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಗಾಝಾದ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಆ ನಗರಕ್ಕೆ ನೀರು, ಆಹಾರ ಮುಂತಾದ ಮೂಲಭೂತ ಸೌಕರ್ಯಗಳ ಪೂರೈಕೆ ಸ್ಥಗಿತಗೊಳಿಸಿರುವುದು, ಫೆಲೆಸ್ತೀನೀಯರ ಧೋರಣೆಯನ್ನು ತಲೆಮಾರುಗಳ ಕಾಲ ಇನ್ನಷ್ಟು ಕಠಿಣವಾಗಿಸಲೂಬಹುದು ಮತ್ತು ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಬೆಂಬಲ ಕಡಿಮೆಗೊಳಿಸಬಹುದು’ ಎಂದು ಹೇಳಿದ್ದಾರೆ.
I wanted to share some thoughts on what’s happening right now in Israel and Gaza.https://t.co/fEaYWFisnN
— Barack Obama (@BarackObama) October 23, 2023
ಇಸ್ರೇಲ್ ದಾಳಿಯಿಂದಾಗಿ ಗಾಝಾದಲ್ಲಿ ಕನಿಷ್ಠ 5,087 ಜನರು ಸಾವನ್ನಪ್ಪಿದ್ದು, 15,273 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿನ ಆರೋಗ್ಯ ಅಧಿಕಾರಿಗಳು ತಿಳಿಸುತ್ತಿದ್ದಂತೆ ಒಬಾಮಾ ಅವರಿಂದ ಈ ಹೇಳಿಕೆ ಬಂದಿದೆ.
“ಗಾಝಾದ ಜನರಿಗೆ ಆಹಾರ, ನೀರು, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಇಸ್ರೇಲ್‌ನ ನಿರ್ಧಾರವು ಅಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಬಹುದು. ಈ ಪ್ರಾಂತ್ಯದಲ್ಲಿ ಶಾಂತಿ-ಸ್ಥಿರತೆ ಕಾಪಾಡುವ ಯತ್ನಕ್ಕೆ ಮತ್ತಷ್ಟು ತೊಡಕಾಗಬಹುದು” ಎಂದು ಒಬಾಮ ಹೇಳಿದ್ದಾರೆ.
ಹಮಾಸ್‌ನ ದಾಳಿಯನ್ನು ಖಂಡಿಸಿರುವ ಒಬಾಮಾ, ಇಸ್ರೇಲ್‌ನ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಆದರೆ ಯುದ್ಧಗಳಲ್ಲಿ ನಾಗರಿಕರಿಗೆ ಆಗುತ್ತಿರುವ ಅಪಾಯಗಳ ಬಗ್ಗೆಯೂ ಗಮನ ಹರಿಸಬೇಕಾದುದು ಯುದ್ಧದ ನಿಯಮ ಎಂದು ಅವರು ಎಚ್ಚರಿಕೆ ನೀಡಿದರು.
35 ಮಂದಿ ವಿಶ್ವಸಂಸ್ಥೆ ಸಿಬ್ಬಂದಿ ಬಲಿ
ವಿಶ್ವಸಂಸ್ಥೆಯ ವರದಿಯಂತೆ ಅಕ್ಟೋಬರ್ ರಿಂದ ಪ್ಯಾಲೇಸ್ತೀನಿಯನ್ ನಿರಾಶ್ರಿತರೊಂದಿಗೆ ಕೆಲಸ ಮಾಡುವ ಕನಿಷ್ಠ 35 ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ (UNRWA) ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.
ಈ ನಡುವೆ 200ಕ್ಕೂ ಅಧಿಕ ಒತ್ತೆಯಾಳುಗಳ ಪೈಕಿ, ಹಮಾಸ್ ಇಬ್ಬರು ಹಿರಿಯ ಇಸ್ರೇಲಿ ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ. ಹಮಾಸ್‌ನವರು ಒತ್ತೆಯಾಳುಗಳೊಂದಿಗೆ ಕರುಣೆಯಿಂದ ವರ್ತಿಸಿದರು ಎಂದು ಬಿಡುಗಡೆಗೊಂಡ ಮಹಿಳೆಯ ಪೈಕಿ 85ರ ಹರೆಯದ ಹಿರಿಯ ಮಹಿಳೆ ಲಿಫ್‌ಶಿಟ್ಜ್ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಹಮಾಸ್‌ನವರು ಒತ್ತೆಯಾಳುಗಳೊಂದಿಗೆ ಕರುಣೆಯಿಂದ ವರ್ತಿಸಿದರು: ಬಿಡುಗಡೆಗೊಂಡ ಹಿರಿಯ ಮಹಿಳೆ
ಏತನ್ಮಧ್ಯೆ, ಇಸ್ರೇಲಿ ರಕ್ಷಣಾ ಪಡೆಗಳ (ಐಡಿಎಫ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೆವಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ, ಇಸ್ರೇಲ್ ಹಮಾಸ್ ವಿರುದ್ಧದ ವೈಮಾನಿಕ ದಾಳಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.