ಚೈತ್ರಾ ಕುಂದಾಪು ಅವರು ಮತ್ತು ಇತರರು ಸೇರಿ ಟಿಕೆಟ್ ಮಾರಿಕೊಂಡು ಜನರಿಗೆ ಮೋಸ ಮಾಡಿದ್ದನ್ನು ನಾವು ನೋಡಿದ್ದೇವೆ. 40 ಪರ್ಸೆಂಟ್ ಕಮಿಷನ್ ಸರ್ಕಾರವನ್ನೂ ನಾವು ನೋಡಿದ್ದೇವೆ. ಈವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದ ದುಃಸ್ಥಿತಿ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟಿಲ್ ಹೇಳಿದರು.
ವಿಜಯಪುರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಚೇರಿಯ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಎಲ್ಲರಿಗೂ ವಿಜಯದಶಮಿ ಶುಭಾಷಯ ತಿಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
“ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಚೇತರಿಸಿಕೊಳ್ಳಲಾಗದೆ ಬಿಜೆಪಿ ನಾಯಕರು, ರಾಜ್ಯದ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗದ ಪರಿಸ್ಥಿತಿಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿ ಈಗಾಗಲೇ ಮುಳುಗಿ ಹೋಗಿರುವ ಹಡಗಿನಂತಾಗಿದೆ. ಹೀಗಾಗಿ ಈ ಪಕ್ಷಕ್ಕೆ ಭವಿಷ್ಯವಿಲ್ಲ” ಎಂದು ನುಡಿದರು.
ಮಹಾನಗರ ಪಾಲಿಕೆ ಸದಸ್ಯರುಗಳು ಪ್ರವಾಸದ ವಿಷಯಕ್ಕೆ ಉತ್ತರಿಸಿದ ಸಚಿವರು, “ಸ್ವಾಭಾವಿಕವಾಗಿ ಸದಸ್ಯರುಗಳನ್ನು ರಕ್ಷಣೆ ಮಾಡಬೇಕು. ಅವರಿಗೆ ತೊಂದರೆ ಆಗಬಾರದು. ಒತ್ತಾಯದಿಂದ ಯಾರನ್ನೂ ತೆಗೆದುಕೊಂಡು ಹೋಗಬಾರದು ಮತ್ತು ಅಹಿತಕರ ಘಟನೆ ನಡೆಯಬಾರದೆಂದು ಹಾಗೆ ಮಾಡಿರುತ್ತಾರೆ. ನಮ್ಮ ಪಕ್ಷಕ್ಕೆ ಬೆಂಬಲಿತ ಸದಸ್ಯನೊಬ್ಬನನ್ನು ಬಿಜೆಪಿ ಅವರು ವಿಶೇಷವಾಗಿ ನಗರದ ಶಾಸಕರು ಕರೆದುಕೊಂಡು ಹೋಗಿ ಅಡಗುತಾಣದಲ್ಲಿ ಇಟ್ಟಿದ್ದಾರೆಂಬ ಮಾಹಿತಿ ಇದೆ. ನಮಗೂ ಕೂಡ ಹಾಗೆ ಮಾಡಲು ಬರುತ್ತೆ. ಆದರೆ ನಾವು ಹಾಗೆ ಮಾಡಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ನಾವು ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ” ಎಂದರು.
“ಮೇಯರ್, ಉಪಮೇಯರ್ ಆಯ್ಕೆ ಅಕ್ಟೋಬರ್ 30ಕ್ಕೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಏನೂ ತೊಂದರೆಯಾಗುವುದಿಲ್ಲ. ಸೆಕ್ಯುಲರ್ ವೋಟುಗಳು ಜೆಡಿಎಸ್‌ಗೆ ಈವರೆಗೆ ಬರುತ್ತಿದ್ದವು. ಇನ್ನು ಮುಂದೆ ಸೆಕ್ಯುಲರ್ ವೋಟುಗಳು ಕಾಂಗ್ರೆಸ್ಸಿಗೆ ಬೀಳುತ್ತವೆ. ನಮಗೇನೂ ತೊಂದರೆಯಾಗುವುದಿಲ್ಲ” ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಖಜಾನೆ ತುಂಬಿಸಿಕೊಳ್ಳುವ ದುರುದ್ದೇಶದಿಂದ ಕನಕಪುರ ಹೆಸರಲ್ಲಿ ಡಿಕೆಶಿ ಹೊಸ ನಾಟಕ: ಎಚ್‌ಡಿಕೆ ಕಿಡಿ
ಈ ಸಂದರ್ಭದಲ್ಲಿ ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಬಕ್ಷಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲ್ಗೂರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡರುಗಳಾದ ವಸಂತ ಹೋನಮೋಡೆ, ಸರಿತಾ ನಾಯಕ್, ಮರ್ತುಜ ಶಿರಬೂರ ಸೇರಿದಂತೆ ಇತರರು ಇದ್ದರು.