ಮುಂಬೈನಲ್ಲಿ ನಡೆದ ಐಸಿಸಿ ವಿಶ್ವಕಪ್‌ನ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಹಣಾಹಣಿಯಲ್ಲಿ ಬಾಂಗ್ಲಾ ತಂಡ ಹೀನಾಯ ಸೋಲುಕಂಡಿದೆ. ಬರೋಬ್ಬರಿ 149 ರನ್‌ಗಳ ಅಂತರದಲ್ಲಿ ಸೋಲುಂಡ ಬಾಂಗ್ಲಾ ತಂಡ ಐಸಿಸಿ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಭರ್ಜರಿ ಗೆಲುವು ಕಂಡ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿಕಾಕ್ (174), ಐಡೆನ್ ಮಾರ್ಕ್ರಾಮ್ (60) ಮತ್ತು ಹೆನ್ರಿಚ್ ಕ್ಲಾಸೆನ್ (90) ಅವರ ಅಬ್ಬರದ ಆಟದಿಂದ 382 ರನ್ ಕಲೆ ಹಾಕಿತ್ತು. ದುಬಾರಿ ರನ್‌ನ ಬೆನ್ನತ್ತಿದ ಬ್ಲಾಂಗ್ಲಾ ತಂಡ 46.4 ಓವರ್‌ಗಳಲ್ಲಿ 233 ರನ್ ಕಲೆ ಗಳಿಸಿ ಆಲ್‌ಔಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.
ಭಾರೀ ರನ್‌ಗಳ ಒತ್ತಡದಲ್ಲಿದ್ದ ಬಾಂಗ್ಲಾ ಬ್ಯಾಟರ್‌ಗಳು ಎದುರಾಳಿ ತಂಡದ ಬೌಲರ್‌ಗಳ ಬೌಲಿಂಗ್‌ಗೆ ಕಂಗಾಲಾದರು. ಕೇಳವ 15 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಬಾಂಗ್ಲಾ ಒಪ್ಪಿಸಿತು. ಆರಂಭಿಕ ಆಟಘಾರಾದ ತಂಝೀದ್ ಹಸನ್ ಮತ್ತು ಲಿಟ್ಟನ್ ದಾಸ್ 30 ರನ್‌ಗಳ ಜತೆಯಾಟಕ್ಕೆ ಸೀಮಿತವಾದರು. ಹಸನ್ 12 ರನ್ ಗಳಿಸಿ ವಿಕೆಟ್ ನೀಡಿದರು.
ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂಟೊ (0), ಶಕೀಬ್ ಅಲ್ ಹಸನ್(1), ಮುಶ್ಫಿಕರ್ ರಹೀಮ್ (8) ಟಿಕೆಟ್ ಇತ್ತು ಹೊರನಡೆದರೆ, ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ 22 ರನ್‌ಗಳಿಗೆ ಧಣಿದು ಹೋದರು.
ಮಹಮ್ಮದುಲ್ಲಾ ಅವರು ಸ್ಕ್ರೀಜ್‌ನಲ್ಲಿ ಗಟ್ಟಿಯಾಗಿ ನಿಂತು ಆಟವಾಡಿದರೂ, ಗರಿಷ್ಠ ಮೊತ್ತದ ಬೆನ್ನತ್ತಲು ಸಾಧ್ಯವಾಗಲಿಲ್ಲ. ಮಹಮ್ಮದುಲ್ಲಾ ಅವರು 11 ಬೌಂಡರಿ, 4 ಸಿಕ್ಸ್ನಿಂದ 111 ಕಲೆಹಾಕಿ ಔಟ್‌ಆದರು. ಇನ್ನು, ಮೆಹಿದಿ ಹಸನ್ ಮಿರಾಜ್ (11), ನಸುಮ್ ಅಹ್ಮದ್ (19) ಮತ್ತು ಹಸನ್ ಮಹಮ್ಮದ್ (15) ಮಹಮ್ಮದುಲ್ಲಾ ಅವರಿಗೆ ಸಾಥ್ ನೀಡಿ ಹೊರನಡೆದರು.