ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಬುಧವಾರ ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ, ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ನವೆಂಬರ್ 2 ರವರೆಗೆ ದೆಹಲಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ತಮ್ಮ ಬಳಿ ಇರುವ ‘ರಕ್ಷಿತ ಸಾಕ್ಷಿ’ಗಳನ್ನಿಟ್ಟುಕೊಂಡು ವಿಚಾರಣೆಗೆ ಒಳಪಡಿಸಲು ನ್ಯೂಸ್‌ಕ್ಲಿಕ್‌ನ ಮುಖ್ಯಸ್ಥರನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ದೆಹಲಿ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಅವರ ಮನವಿಗೆ ಸಮ್ಮತಿ ನೀಡಿರುವ ಕೋರ್ಟ್, ಪ್ರಬೀರ್ ಮತ್ತು ಅಮಿತ್ ಅವರನ್ನು 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರಬೀರ್ ಮತ್ತು ಅಮಿತ್ ಅವರು ತಮ್ಮ ಸಂಸ್ಥೆಗೆ ಚೀನಾದಿಂದ ಆರ್ಥಿಕ ನೆರವು ಪಡೆದಿದ್ದಾರೆಂಬ ಆರೋಪದ ಮೇಲೆ ಯುಎಪಿಎ (ದೇಶದ್ರೋಹ) ಮತ್ತು ವಿದೇಶಿ ನಿಧಿ ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಕ್ಟೋಬರ್ 3ರಂದು ಅವರನ್ನು ಬಂಧಿಸಲಾಗಿತ್ತು. ಬಂಧಿಸಿದ್ದ ಸಂದರ್ಭದಲ್ಲಿ ಅವರಿಬ್ಬರನ್ನೂ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಬಳಿಕ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ನ್ಯಾಯಾಂಗ ಬಂಧನ ಇಂದಿಗೆ ಮುಗಿದಿದ್ದು, ಇದೀಗ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ನ್ಯೂಸ್‌ಕ್ಲಿಕ್ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದೆ. ಪೊಲೀಸರ ಕ್ರಮವನ್ನು ‘ನಿರ್ಭೀತ ಧ್ವನಿಗಳನ್ನು ನಿಗ್ರಹಿಸುವ ಪ್ರಯತ್ನ’ ಎಂದು ಕರೆದಿದೆ.
ಪ್ರಬೀರ್ ಮತ್ತು ಅಮಿತ್ ಅವರ ಬಂಧನವನ್ನು ಹಲವಾರು ಮಾಧ್ಯಮಗಳು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಅಕ್ಟೋಬರ್ 30ರಂದು ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಲಿದೆ.
ಹದಿನಾರು ಪತ್ರಿಕಾ ಗುಂಪುಗಳು ಈ ಹಿಂದೆ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು, “ಮಾಧ್ಯಮಗಳ ವಿರುದ್ಧ ತನಿಖಾ ಸಂಸ್ಥೆಗಳ ‘ಹೆಚ್ಚುತ್ತಿರುವ ದಮನಕಾರಿ ದಾಳಿ’ಯನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದವು.