ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆಯುತ್ತಿರುವ ಅನಧಿಕೃತ ಕಟ್ಟಡ ನಿರ್ಮಾಣಗಳ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಒಂದೇ ಬಡಾವಣೆಯಲ್ಲಿ 40 ಅನಧಿಕೃತ ಕಟ್ಟಡಗಳನ್ನು ಗುರುತಿಸಿ 27 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇನ್ನುಳಿದ 13 ಕಟ್ಟಡಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಿದ್ದು, ನಿಯಮಾನುಸಾರ 102 ದಿನಗಳಲ್ಲಿ ಕಟ್ಟಡಗಳನ್ನು ಕೆಡವುವ ಸಾಧ್ಯತೆಯಿದೆ.
ನಗರ ಯೋಜನಾ ಜಂಟಿ ನಿರ್ದೇಶಕ (ಜೆಡಿಟಿಪಿ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಜಿನಿಯರ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
“ನಗರದ ವೈಟ್‌ರೋಸ್ ಲೇಔಟ್‌ನಲ್ಲಿರುವ ಈ ಕಟ್ಟಡಗಳನ್ನು ಹೊರ ರಾಜ್ಯದ ನಿವಾಸಿಗಳು ನಿರ್ಮಿಸಿದ್ದಾರೆ. ಅವರ ಗುರಿ ಕೇವಲ ಲಾಭ ಗಳಿಸುವುದು. ಕಟ್ಟಡಗಳು ಪಾಲಿಕೆಯಿಂದ ಅಗತ್ಯ ಅನುಮತಿಗಳನ್ನು ಪಡೆದಿಲ್ಲ. ಗ್ರೌಂಡ್ ಪ್ಲಸ್-ಎರಡು ಅಂತಸ್ತುಗಳಿರಬೇಕಾದ ಅನೇಕ ಕಟ್ಟಡಗಳು ಕನಿಷ್ಠ ಆರು ಮಹಡಿಗಳನ್ನು ಹೊಂದಿವೆ. ಬೆಳೆಯುತ್ತಿರುವ ಅಕ್ರಮ ‘ಪೇಯಿಂಗ್ ಗೆಸ್ಟ್’ ವಸತಿ ವ್ಯವಹಾರವು ಅವ್ಯಾಹತವಾಗಿ ನಡೆಯುತ್ತಿದೆ” ಎಂದು ವೈಟ್‌ಫೀಲ್ಡ್‌ನ ನಿವಾಸಿಯೊಬ್ಬರು ತಿಳಿಸಿದರು.
“ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ, ಭೂಗತ ಸಂಪರ್ಕಗಳಿಲ್ಲ ಹಾಗೂ ನೀರು ಸರಬರಾಜಿಗೆ ಸೂಕ್ತವಾದ ಮಾರ್ಗಗಳಿಲ್ಲ. ಅಧಿಕಾರಿಗಳು ಅಂತಹ ಮಾಲೀಕರು ಮತ್ತು ಬಿಲ್ಡರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು. ಇತರ ಪ್ರದೇಶಗಳಲ್ಲಿ ಮತ್ತೆ ಉಲ್ಲಂಘನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು” ಎಂದರು.
”ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಅಕ್ಕಪಕ್ಕದ ಎಲ್ಲ ಪ್ರದೇಶಗಳಿಗೂ ಆರೋಗ್ಯದ ಅಪಾಯವಿದೆ. ರಸ್ತೆಗಳು ಸರಿಯಾಗಿಲ್ಲ. ನೀರಿನ ಸಂಪರ್ಕಗಳಿಲ್ಲ, ಒಳಚರಂಡಿ ಸಂಪರ್ಕಗಳಿಲ್ಲ, ಮತ್ತು ಕಟ್ಟಡಗಳು ಸಹ ಕೊಳಚೆ ನೀರನ್ನು ರಸ್ತೆಗಳಿಗೆ ಬಿಡುತ್ತಿವೆ. ಇದು ತೆರೆದ ಕೆರೆಗಳಲ್ಲಿ ಸಂಗ್ರಹವಾಗುತ್ತಿದೆ. ಜನರಲ್ಲಿ ಆರೋಗ್ಯದ ಅಪಾಯವನ್ನು ಸೃಷ್ಟಿಸುತ್ತದೆ. ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ” ಎಂದು ಹೇಳಿದರು.
ಹೈಕೋರ್ಟ್ ಹೊರಡಿಸಿದ ಆದೇಶದಂತೆ ಕ್ರಮ ಕೈಗೊಳ್ಳಬೇಕು ಎಂದು ಮಹದೇವಪುರ ವಲಯದ ಜಂಟಿ ಆಯುಕ್ತೆ ಡಾ.ದಾಕ್ಷಾಯಿಣಿ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂವಿಧಾನವನ್ನು ಗೌರವಿಸುವುದಾದರೆ ಜಗದೀಶ್ ಗುಡಗಂಟಿಯನ್ನು ಪಕ್ಷದಿಂದ ಉಚ್ಚಾಟಿಸಿ: ಬಿಜೆಪಿಗೆ ಎಎಪಿ ಸವಾಲು
”ಅಕ್ರಮ ನಿರ್ಮಾಣಗಳನ್ನು ತಡೆಯಲು ಕ್ರಮಕೈಗೊಳ್ಳುವಂತೆ ಜೆಡಿಟಿಪಿ ಮತ್ತು ಬಿಬಿಎಂಪಿ ಮಾರ್ಷಲ್‌ಗಳಿಗೆ ಸೂಚನೆ ನೀಡಿದ್ದೇನೆ. ಮಾರತ್ತಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಮಾಲೀಕರ ದುರಾಸೆ ಮತ್ತು ಹೆಚ್ಚಿನ ಬಾಡಿಗೆ ಹಣಕ್ಕಾಗಿ ಹೊರ ರಾಜ್ಯಗಳಿಂದ ಲಾಬಿ ಮಾಡುವ ಬಿಲ್ಡರ್‌ಗಳು ಕಟ್ಟಡದ ನಿಯಮಗಳನ್ನು ಉಲ್ಲಂಘನೆಗೆ ಕಾರಣವಾಗುತ್ತಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸ್ಪಷ್ಟ ಸೂಚನೆ ನೀಡಿದ್ದು, ಅಂತಹ ಕಟ್ಟಡಗಳನ್ನು ಗುರುತಿಸಿ ತೆಗೆಯಲು ಹೈಕೋರ್ಟ್ ನಿರ್ದೇಶನವನ್ನು ಪಾಲಿಸುವಂತೆ ಸೂಚಿಸಿದ್ದಾರೆ” ಎಂದು ದಾಕ್ಷಾಯಿಣಿ ಅವರು ತಿಳಿಸಿದ್ದಾರೆ.