ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಕೃತ ಮನಸ್ಸಿನ ಹಂತಕನೊಬ್ಬ ತನ್ನ ಸಹೋದರನ ಮೇಲೆ ಟ್ರ್ಯಾಕ್ಟರ್ ಹರಿಸಿ ಬರ್ಬರವಾಗಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡದಿದೆ. ಘಟನೆಯ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಕೃತ್ಯವನ್ನು ತಡೆಯದೇ, ಚಿತ್ರೀಕರಿಸುತ್ತಾ ನಿಂತಿದ್ದು ಅಮಾನವೀಯತೆ ಮರೆದಿದ್ದಾರೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಅಡ್ಡಾ ಗ್ರಾಮದಲ್ಲಿ ಕೃತ್ಯ ನಡೆದಿದ್ದು, ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು 30 ವರ್ಷದ ನಿರ್ಪತ್ ಗುರ್ಜರ್ ಎಂದು ಗುರುತಿಸಲಾಗಿದೆ. ಆತನ ಸಹೋದರ ದಾಮೋದರ್ ಗುರ್ಜರ್ ಹತ್ಯೆಗೈದ ಆರೋಪಿಯೆಂದು ಹೇಳಲಾಗಿದೆ ಎಂದು ಭರತ್‌ಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಕಿಲಾನಿಯಾ ತಿಳಿಸಿದ್ದಾರೆ.
“ನರ್ಪತ್ ಸಿಂಗ್ ಅವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದಿರುವ ಆರೋಪಿ ಮೃತನ ಸಹೋದರ ದಾಮೋದರ್ ಗುರ್ಜರ್ ಎಂದು ವಿಡಿಯೋದಲ್ಲಿ ಕಂಡುಬಂದಿದೆ. ಇಬ್ಬರ ನಡುವೆ ಮೂರು ದಿನಗಳ ಹಿಂದೆಯೂ ಜಗಳವಾಗಿತ್ತು. ಇಂದು (ಬುಧವಾರ) ಮತ್ತೆ ಅವರಿಬ್ಬರ ನಡುವೆ ಜಗಳವಾಗಿದೆ. ದಾಮೋದರ್ ಎಂಬಾತ ತನ್ನ ಸಹೋದರ ನಿರ್ಪತ್‌ನನ್ನು ಟ್ರ್ಯಾಕ್ಟರ್ ಹತ್ತಿಸಿ ಕೊಂದಿದ್ದಾನೆ” ಎಂದು ಕಿಲಾನಿಯಾ ಹೇಳಿದ್ದಾರೆ.
ನಡಿಗೆಯ ಹಾದಿ (ರಸ್ತೆ) ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘರ್ಷಣೆಯು ಉಲ್ಬಣಗೊಂಡು, ನಿರ್ಪತ್‌ಗೆ ದಾಮೋದರ್ ಟ್ರ್ಯಾಕ್ಟರ್‌ನಿಂದ ಗುದ್ದಿದ್ದಾನೆ. ನಿರ್ಪತ್ ಕೆಳಗೆ ಬಿದ್ದ ಬಳಿಕ, ಮತ್ತೊಮ್ಮೆ ಆತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾನೆ. ನಿರ್ಪತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನು ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಈವರೆಗೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರನ್ನು ಹಿಡಿಯಲು ಶೋಧ ನಡೆಸುತ್ತಿದ್ದಾರೆ.
ಈ ಘಟನೆಯು ರಾಜಸ್ಥಾನದಲ್ಲಿ ಆಕ್ರೋಶ ಗುರಿಯಾಗಿದೆ. ಸರ್ಕಾರದ ವಿರುದ್ಧ ಜನರು ಮತ್ತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
भरतपुर के बयाना क्षेत्र में युवक की सरेआम ट्रैक्टर से रौंदकर हत्या की वारदात दिल दहला देने वाली है।
क्योंकि मामला पुलिस के संज्ञान में था, इसलिए उस पर सवाल उठना स्वाभाविक है।
यह अत्यंत निंदनीय हादसा है, जो गहलोत सरकार के कार्यकाल में उपजी आपराधिक – अराजक मानसिकता का परिणाम… pic.twitter.com/zoj3S3C5gP
— Gajendra Singh Shekhawat (@gssjodhpur) October 25, 2023
ರಾಜಸ್ಥಾನದ ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಅವರು ಘಟನೆಯನ್ನು ‘ಹೃದಯ ವಿದ್ರಾವಕ’ ಎಂದಿದ್ದಾರೆ. “ಕೃತ್ಯವು ಅತ್ಯಂತ ಖಂಡನೀಯ. ಇದು ಗೆಹ್ಲೋಟ್ ಸರ್ಕಾರದ ಅವಧಿಯಲ್ಲಿ ಉದ್ಭವಿಸಿದ ಅಪರಾಧ-ಅರಾಜಕತಾವಾದಿ ಮನಸ್ಥಿತಿಯ ಪರಿಣಾಮವಾಗಿದೆ,” ಎಂದು ಹೇಳಿದ್ದಾರೆ.