ಸತ್ಯಪಾಲ್ ಮಲಿಕ್ ಸಂದರ್ಶನ ನಡೆಸಿದ ರಾಹುಲ್ ಗಾಂಧಿ: ವಿಡಿಯೋ ವೈರಲ್

Date:

Advertisements

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಸಂದರ್ಶನ ನಡೆಸಿದ್ದು, ಅದರ ಸಂಪೂರ್ಣ ವಿಡಿಯೋವನ್ನು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬುಧವಾರ ಬಿಡುಗಡೆಗೊಳಿಸಿದ್ದಾರೆ.

ಅಕ್ಟೋಬರ್ 14ರಂದು ಈ ಮಾತುಕತೆ ನಡೆಸಿರುವುದಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಸಂದರ್ಶನದ ವೇಳೆ ಪುಲ್ವಾಮಾ ದಾಳಿ, ಅದಾನಿ ಹಗರಣ, ಮಣಿಪುರ ಹಿಂಸಾಚಾರ, ಜಾತಿ ಜನಗಣತಿ, ಇಸ್ರೇಲ್-ಹಮಾಸ್ ಸಂಘರ್ಷ, ದೇಶದ ಗೋದಿ ಮಾಧ್ಯಮಗಳು, ರಾಜಕೀಯ ಘಟನೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

Advertisements

ಈ ಸಂದರ್ಶನದಲ್ಲಿ 2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಮತ್ತೆ ಬಿಚ್ಚಿಟ್ಟಿರುವ ಸತ್ಯಪಾಲ್ ಮಲಿಕ್, ಸರ್ಕಾರದ ವ್ಯವಸ್ಥಿತ ವೈಫಲ್ಯವು 40 ಸಿಆರ್‌ಪಿಎಫ್ ಸೈನಿಕರ ಸಾವಿಗೆ ಕಾರಣವಾಯಿತು ಎಂದು ಹೇಳಿದರು.

ಘಟನೆಯ ಬಗ್ಗೆ ಮೆಲುಕು ಹಾಕಿದ ಅವರು, ‘ಪುಲ್ವಾಮಾ ಘಟನೆ ಏಕೆ ಸಂಭವಿಸಿತು? ಅವರು ಐದು ವಿಮಾನಗಳನ್ನು ಕೇಳಿದ್ದರು. ನನ್ನನ್ನು ಕೇಳಿದ್ದರೆ, ನಾನು ಅದನ್ನು ತಕ್ಷಣವೇ ಕೊಡುತ್ತಿದ್ದೆ. ಹಿಮದಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ನಾನು ವಿಮಾನವನ್ನು ಒದಗಿಸಿದ್ದೆ. ದೆಹಲಿಯಲ್ಲಿ ವಿಮಾನವನ್ನು ಬಾಡಿಗೆಗೆ ಪಡೆಯುವುದು ಸುಲಭ. ಆದರೆ ಅವರ ಅರ್ಜಿಯು ಗೃಹ ಸಚಿವಾಲಯದಲ್ಲಿ ನಾಲ್ಕು ತಿಂಗಳಿನಿಂದ ಬಿದ್ದಿತ್ತು. ತದನಂತರ ಅದನ್ನು ತಿರಸ್ಕರಿಸಲಾಯಿತು. ನಂತರ ಸಿಆರ್‌ಪಿಎಫ್ ಸಿಬ್ಬಂದಿ ಅಸುರಕ್ಷಿತ ಎಂದು ತಿಳಿದ ರಸ್ತೆಯನ್ನು ಹಿಡಿದರು’ ಎಂದು ಮಲಿಕ್ ಹೇಳಿದರು.

ಪುಲ್ವಾಮಾ ಘಟನೆಯಲ್ಲಿ ಉಂಟಾದ ಭದ್ರತಾ ಲೋಪಗಳನ್ನು ತಿಳಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿರಲು ಹೇಳಿದ್ದರು ಎಂದು ಅವರು ಹೇಳಿದರು.

‘ಪುಲ್ವಾಮಾ ಘಟನೆ ನಡೆದಾಗ ನಾನು ಪ್ರಧಾನಿ ಮೋದಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಸಂಜೆ 5-6 ಗಂಟೆ ಸುಮಾರಿಗೆ ಅವರು ನನಗೆ ಮತ್ತೆ ಕರೆ ಮಾಡಿದರು. ಇಷ್ಟೊಂದು ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೀಡಾಗಲು ನಮ್ಮ ತಪ್ಪೇ ಕಾರಣ ಎಂದು ಹೇಳಿದ್ದೆ. ಇದನ್ನು ಎಲ್ಲಿಯೂ ಹೇಳಬೇಡಿ ಎಂದು ಕೇಳಿಕೊಂಡರು. ಆಗ ನನ್ನ ಸಹಪಾಠಿಯಾಗಿದ್ದ ಎನ್‌ಎಸ್‌ಎ ಅಜಿತ್ ದೋವಲ್ ಕರೆ ಮಾಡಿ ಈ ಬಗ್ಗೆ ಎಲ್ಲಿಯೂ ಹೇಳಬೇಡಿ ಎಂದು ಕೇಳಿಕೊಂಡರು. ಅಷ್ಟೊತ್ತಿಗಾಗಲೇ ಎರಡು ಚಾನೆಲ್‌ಗಳಿಗೆ ಹೇಳಿದ್ದೆ. ನಂತರ, ನನ್ನ ಹೇಳಿಕೆಗಳು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಭಾವಿಸಿದೆ, ಆದರೆ ಯಾವುದೇ ತನಿಖೆ ಇರಲಿಲ್ಲ. ಅದನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಂಡರು. ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪುಲ್ವಾಮಾ ಘಟನೆಯನ್ನು ಬಳಸಿಕೊಂಡರು,” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರು ಹೇಳಿದರು.

ಮಣಿಪುರ ವಿಷಯದ ಕುರಿತು ಮಾತನಾಡಿದ ಮಲಿಕ್, ಪರಿಸ್ಥಿತಿಯು ಸಾಮಾನ್ಯವಾಗಿದೆ ಸರ್ಕಾರದ ವೈಫಲ್ಯ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಮತ್ತು ನಂತರದ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಅವರು ಆರೋಪಿಸಿದರು. ಆದರೆ ಇದು ನಡೆದು ಕೇವಲ ಆರು ತಿಂಗಳಾಗಿದೆ. ನಾನು ಲಿಖಿತವಾಗಿ ಬೇಕಾದರೆ ಬರೆದು ಕೊಡುತ್ತೇನೆ, ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ಪುಲ್ವಾಮಾ ದಾಳಿಯ ವೇಳೆ ತಮಗಾದ ಅನುಭವ ಬಿಚ್ಚಿಟ್ಟ ರಾಹುಲ್ ಗಾಂಧಿ, ಹುತಾತ್ಮರಿಗೆ ಗೌರವ ಸಲ್ಲಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಆದರೆ ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು. ಅಲ್ಲೊಂದು ಸಮಾರಂಭ ಇದ್ದಂತೆ ಕಂಡಿತು. ಪ್ರಧಾನ ಪ್ರಧಾನಿ ಮೋದಿ ಅಲ್ಲಿದ್ದರು. ಕೊಠಡಿಯಿಂದ ಹೊರಹೋಗಲು ನಾನು ಜಗಳ ಮಾಡಬೇಕಾಯಿತು,” ಎಂದು ರಾಹುಲ್‌ ನೆನಪಿಸಿಕೊಂಡರು.

ವಿಡಿಯೋದಲ್ಲಿ ಉದ್ಯಮಿ ಗೌತಮ್ ಅದಾನಿ ಹಗರಣವನ್ನು ಉಲ್ಲೇಖಿಸಿದ ಮಲಿಕ್, ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದರಿಂದ ಕೃಷಿ ಉತ್ಪನ್ನದ ಬೆಲೆಗಳನ್ನು ತನ್ನ ಪ್ರಯೋಜನಕ್ಕೆ ತಕ್ಕಂತೆ ಅದಾನಿ ಮಾಡಿಕೊಂಡರು. ದೊಡ್ಡ ಗೋದಾಮುಗಳ ಸ್ಥಾಪನೆಯಿಂದ ಅದಾನಿ ಸಂಸ್ಥೆ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಹೊಂದಿದೆ. ನೀವು ಬೇಕಾದರೆ ಗಮನಿಸಿ, ಮುಂದಿನ ವರ್ಷ ಬೆಲೆ ಏರಿಕೆಯಾದಾಗ ಅದಾನಿ ಕಂಪೆನಿಯವರು ಮಾರಾಟ ಮಾಡುತ್ತಾರೆ. ಎಂಎಸ್‌ಪಿ ಜಾರಿಯಾದಲ್ಲಿ ರೈತರು ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡುವುದಿಲ್ಲ’ ಎಂದು ಹೇಳಿದರು.

ಸತ್ಯಪಾಲ್ ಮಲಿಕ್ ಜೊತೆಗೆ ನಡೆಸಿದ ಸುಮಾರು 29 ನಿಮಿಷಗಳ ಸಂಪೂರ್ಣ ಸಂದರ್ಶನವನ್ನು ರಾಹುಲ್ ಗಾಂಧಿಯವರು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ, ಸಂದರ್ಶನದ ಹಲವು ಭಾಗಗಳನ್ನು ತಮ್ಮ ತಮ್ಮ ಟ್ವಿಟ್ಟರ್ ಹಾಗೂ ಸೋಷಿಯಲ್ ಮೀಡಿಯಾದ ಪ್ರೊಫೈಲ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಂಪೂರ್ಣ ಸಂದರ್ಶನ ಇಲ್ಲಿದೆ. ವೀಕ್ಷಿಸಲು ಯೂಟ್ಯೂಬ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X