ತುಂಗಭದ್ರ ಎಡದಂಡೆ ಕಾಲುವೆ 104 ಮೈಲ್‌ನ ಕೆಳಭಾಗಕ್ಕೆ ನೀರು ಸಿಗದೆ ಅಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ರೈತರ ನಿರಂತರ ಹೋರಾಟದ ಫಲವಾಗಿ ಸಮಸ್ಯೆ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಚಿವ ಎನ್.ಎಸ್ ಬೋಸರಾಜ ಹಾಗೂ ಪ್ರಾದೇಶಿಕ ಆಯುಕ್ತರು, ನಿರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದು, ಗೇಜ್ ನಿರ್ವಹಣೆಯಾಗುತ್ತಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಹೇಳಿದ್ದಾರೆ.
ರಾಯಚೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ನಾಲೆಯ ಕೊನೆ ಭಾಗಕ್ಕೆ ನೀರು ಒದಗಿಸುವಂತೆ ಅಕ್ಟೋಬರ್ 16ರಿಂದ ನಿರಂತರ ಹೋರಾಟ ನಡೆಸಿದ್ದೇವೆ. ಹೋರಾಟದ ಫಲವಾಗಿ ಗೇಜ್ ನಿರ್ವಹಣೆಯಾಗುತ್ತಿದೆ. ಗಣೇಕಲ್ ಜಲಾಶಯವೂ ಭರ್ತಿಯಾಗುತ್ತಿದೆ. ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಎಲ್ಲರ ಸಹಕಾರದಿಂದ ನೀರು ಹರಿದು ಬರುತ್ತಿದೆ” ಎಂದು ಹೇಳಿದ್ದಾರೆ.
“ಕಾಲುವೆ ನೀರು ಹರಿಸಿದಾಗಿನಿಂದ ಕೊನೆಭಾಗಕ್ಕೆ ನೀರು ಬಾರದೇ ಹೋಗಿರುವದರಿಂದ ಹೋರಾಟ ನಡೆಸಬೇಕಾಯಿತು. ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ನ.31ರವರೆಗೆ ಗೇಜ್ ನಿರ್ವಹಣೆ ಮಾಡಬೇಕು ಕಾಲುವೆ ವ್ಯಾಪ್ತಿಯಲ್ಲಿ ನೀರು ಇಳಿಕೆಯಾದಲ್ಲಿ ಮತ್ತೊಮ್ಮೆ ಹೋರಾಟ ನಡೆಸಬೇಕಾಗುತ್ತದೆ” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆ.ಶರಣಪ್ಪ , ನಾಗನಗೌಡ ಹರವಿ, ಸಿದ್ದನಗೌಡ ನೆಲಹಾಳ, ಬಸವರಾಜ ಕಲ್ಲೂರು, ವೀಶ್ವೇಶ್ವರ, ವೆಂಕಟರೆಡ್ಡಿ ಇದ್ದರು.
ವರದಿ : ಹಫೀಜುಲ್ಲ