ಹುಲಿ ಉಗುರಿನ ವಿಚಾರ ಭಾರಿ ಸದ್ದು ಮಾಡುತ್ತಿದೆ. ನಟ ಜಗ್ಗೇಶ್, ದರ್ಶನ್, ರಾಜಕಾರಣಿ ಕಮ್ ಸಿನಿಮಾ ನಟ ನಿಖಿಲ್ ಕುಮಾರಸ್ವಾಮಿ ಮುಂತಾದವರಿಂದ ಪೊಲೀಸರು ಹುಲಿ ಉಗುರಿನ ಲಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಿಡಂಬನೆ ಇಲ್ಲಿದೆ.
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಹೋಗಿಬಂದದ್ದರ ಬಗ್ಗೆ ಬ್ರೇಕಿಂಗ್ ನ್ಯೂಸ್ ಬಿತ್ತರಿಸಿ ನಂತರ ಕಾಣೆಯಾಗಿದ್ದ ಪೂಟ್ ಲಾಯರ್ ಪರಮೇಶಿ ಮೊನ್ನೆ ಮತ್ತೆ ಸಿಕ್ಕಿದ. ಅವನ ಕತ್ತಲ್ಲಿ ಸರವೊಂದು ನೇತಾಡುತ್ತಿತ್ತು.
‘ಏನೋ ಪರಮೇಶಿ ಕತ್ತಲ್ಲಿ ಸರ? ಹುಲಿ ಉಗುರು ಏನಾದರೂ ಇಟ್ಟಿದ್ದೀಯೋ ಹೆಂಗೆ?’ ಎಂದು ಕೆಣಕಿದ ಗಫೂರ
‘ಹುಲಿ ಉಗುರು ಅಂದರೆ ಏನಂದ್ಕೊಂಡಿದ್ದೀಯಾ ನೀನು?’ ಕಣ್ಣು ಕೆಕ್ಕರಿಸಿದ ಪರಮೇಶಿ.
‘ಅದು ಸಿಗೋದು ಅಷ್ಟು ಸುಲಭ ಅಲ್ಲ. ಆಮೇಲೆ ಅದನ್ನು ಯಾರೂ ಸುಮ್ಸುಮ್ನೆ ಇಟ್ಟುಕೊಳ್ಳೋದಿಲ್ಲ. ಅದನ್ನು ಇಟ್ಟುಕೊಂಡ ವ್ಯಕ್ತಿಗೆ ವಿಶೇಷ ಶಕ್ತಿ, ಆಕರ್ಷಣೆ, ಬಲ ಬರುತ್ತೆ. ಅದರಲ್ಲಿ ಪವರ್ ಇರುತ್ತೆ. ರಾಜಮಹಾರಾಜರು ಅಧಿಕಾರವನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಹುಲಿ ಉಗುರನ್ನು ಬಳಸುತ್ತಿದ್ದರಂತೆ ಗೊತ್ತಾ’ ಎಂದ.
ಇಷ್ಟೆಲ್ಲ ಪೀಠಿಕೆ ಹಾಕಿದ ಮೇಲೆ ಭರ್ಜರಿ ಬ್ರೇಕಿಂಗ್ ಇದ್ದೇ ಇರುತ್ತೆ ಎಂದು ನಮ್ಮ ಕುತೂಹಲ ಮತ್ತಷ್ಟು ಹೆಚ್ಚಾಯಿತು.
‘ನಮ್ ಜಗ್ಗೇಶಿ ಅದುನ್ನ ಯಾಕ್ ಇಟ್ಟುಕೊಂಡಿದ್ದರು ಗೊತ್ತೇನ್ರೋ?’ ಎಂದು ನಮ್ಮ ಕಡೆ ನೋಡಿದ ಪರಮೇಶಿ.
ನಾವು ಗೊತ್ತಿಲ್ಲ ಎನ್ನುವಂತೆ ಮಿಕಮಿಕನೆ ಅವನ ಮುಖವನ್ನೇ ನೋಡಿದೆವು.
‘ಜಗ್ಗೇಶಿನ ನವರಸ ನಾಯಕ ಅಂತಾರಲ್ಲ.. ಅವರು ತಮ್ಮ ನವರಸಗಳನ್ನು ಎಲ್ಲಿ ಇಟ್ಟುಕೊಂಡಿದ್ದರು ಅಂದ್ಕೊಂಡಿದ್ರಿ? ಆ ಹುಲಿ ಉಗುರಿನ ಲಾಕೆಟ್ಟಿನಲ್ಲಿಯೇ!’ ಎಂದ ಪರಮೇಶಿ.
‘ಓಹೋ, ಅದ್ಯಾವುದೋ ಪುರಾಣ ಕಥೆಯಲ್ಲಿ ರಾಣಿ ಪ್ರಾಣ ಅದೆಲ್ಲೋ ಇಟ್ಟಿರ್ತಾರಲ್ಲ ಹಾಗೆ ಅನ್ನು’ ಎಂದು ತನ್ನ ಅಲ್ಪ ಜ್ಞಾನ ತೋರಿಸಿಕೊಂಡ ಪ್ರಶಾಂತ.
‘ಅದು ಹಂಗಲ್ಲ. ಜಗ್ಗೇಶಿಗೆ 20 ವರ್ಷ ಆದ್ರೂ ಏನೂ ಬತ್ತಿರಲಿಲ್ವಂತೆ. ವಿದ್ಯೆ ತಲೆಗೆ ಹತ್ತಲಿಲ್ಲ. ಕೆಲಸಕ್ಕೆ ಹೋಗು ಅಂದ್ರೆ ಅದೂ ಮಾಡ್ಲಿಲ್ಲ. ಹೋಗ್ಲಿ ನಟನಾದ್ರೂ ಆಗಲಿ ಅಂತ ಅವರಮ್ಮ ನವರಸಗಳೆನ್ನೆಲ್ಲ ಒರಳು ಕಲ್ಲಿನಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ಅದನ್ನೆಲ್ಲ ಹುಲಿ ಉಗುರಿನ ಲಾಕೆಟ್ನಲ್ಲಿ ಹಾಕಿ ಅದನ್ನು ಮಗನ ಕುತ್ತಿಗೆಗೆ ಕಟ್ಟಿ ಇದು ಯಾವತ್ತೂ ಬಿಚ್ಚಬೇಡ ಎಂದು ಹೇಳಿದ್ದಳು. ಅದನ್ನು ಕಟ್ಟಿಕೊಂಡ ಮೇಲೇನೆ ಜಗ್ಗೇಶಿಗೆ ಸಿನಿಮಾದಲ್ಲಿ ಸಕ್ಸಸ್ ಸಿಕ್ಕಿದ್ದು. ಅವರು ನವರಸ ನಾಯಕ ಆಗಿದ್ದು’ ಎಂದು ತಾನೇ ಖುದ್ದು ಕಂಡವನಂತೆ ಪರಮೇಶಿ ವಿವರಿಸಿದ.
‘ಪಾಪ, ಪೊಲೀಸರು ಅದುನ್ನೇ ಕಿತ್ಕೊಂಡ್ ಹೋದರಲ್ಲೋ’ ಎಂದು ಕನಿಕರ ತೋರಿದ ಗಫೂರ.
‘ಮದುವೆ ಗಂಡಿಗೆ ಅದೇ ಇಲ್ಲ ಅನ್ನಂಗಾಯ್ತು. ಇನ್ನ ಆಕ್ಟಿಂಗ್ ಹೆಂಗೆ ಮಾಡ್ತಾರೋ?’ ಎಂದು ಲೊಚಗುಟ್ಟಿದ ಪ್ರಶಾಂತ.
‘ನಟ ದರ್ಶನ್ ಹತ್ರಾನೂ ಒಂದಿತ್ತಂತೆ. ಅದನ್ನೂ ಪೊಲೀಸರು ಕಿತ್ಕೊಂಡಿದ್ದಾರಂತಲ್ಲಾ’ ಎಂದ ಗಫೂರ.
‘ಯಾವ ಸಿನಿಮಾನೂ ದೊಡ್ಡ ಹಿಟ್ ಆಗದಿದ್ರೂ ನಂಬರ್ ಒನ್ ನಟ ದರ್ಶನ್ ಆಗಿರೋದಕ್ಕೂ ಹುಲಿ ಉಗುರೇ ಕಾರಣ’ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ಪರಮೇಶಿ.
‘ಆ ಕುಮಾರಸ್ವಾಮಿ ಮಗನಿಗೇನಾಗಿತ್ತೋ, ಆತನತ್ರನೂ ಇತ್ತಂತಲ್ಲಾ’ ಪ್ರಶ್ನಿಸಿದ ಪ್ರಶಾಂತ
‘ಮಗ ರಾಜಕಾರಣದಲ್ಲೂ ಬರಕತ್ತಾಗ್ತಿಲ್ಲ, ಸಿನಿಮಾದಲ್ಲೂ ಸಕ್ಸಸ್ ಆಗ್ತಿಲ್ಲ ಅಂತ ಅವರಪ್ಪನೇ ಮೊನ್ನೆ ಎಲೆಕ್ಷನ್ನಲ್ಲಿ ಸೋತ ನಂತರ ಮಗನಿಗೆ ಒಂದು ತಂದುಕೊಟ್ಟಿದ್ದರಂತೆ. ಆದರೆ, ಅದ್ಯಾರೋ ಕುಮಾರಸ್ವಾಮಿಗೆ ಡೂಪ್ಲಿಕೇಟ್ ಹುಲಿ ಉಗುರು ತಂದುಕೊಟ್ಟು ಮೋಸ ಮಾಡವ್ರಂತೆ. ಅದುನ್ನೆ ಕುಮಾರಸ್ವಾಮಿ ಪೊಲೀಸ್ರಿಗೆ ಕೊಟ್ಟು ಬೇಕಿದ್ರೆ ಚೆಕ್ ಮಾಡ್ಕೊಳಿ ಅಂತಾ ಬಚಾವಾಗವ್ರೆ’ ಎಂದ ಪರಮೇಶಿ.
‘ಅದ್ಯಾರೋ ವಿನಯ್ ಗುರೂಜಿ ಹತ್ರ ಹುಲಿ ಚರ್ಮ ಇತ್ತಂತೆ ನಿಜವೇ?’ ಎಂದ ಗಫೂರ.
‘ಹಿಂದಿನಿಂದಲೂ ಮಠಗಳಲ್ಲಿ ಸ್ವಾಮೀಜಿಗಳು ಹುಲಿ ಚರ್ಮದ ಮೇಲೆ ಕೂರ್ತಿರಲಿಲ್ಲವೇನೋ.. ಅವರೂ ಅದೇ ಥರ ಒಂದು ಚರ್ಮ ಇಟ್ಕೊಂಡಿದ್ದರಂತೆ. ಇದು ವಿವಾದ ಆದೇಟಿಗೇನೇ ವಾಪಸ್ ಕೊಟ್ಟಿದ್ದೀನಿ ಅನ್ನೋ ಥರಾ ವಿಡಿಯೋ ಮಾಡಿ ನನ್ನತ್ರ ಈಗಿಲ್ಲ ಬಂದು ಚೆಕ್ ಮಾಡಿಕೊಳ್ಳಿ ಎಂದರಂತೆ ವಿನಯ್ ಗುರೂಜಿ’ ಎಂದ ಪರಮೇಶಿ.
‘ಸ್ವಾಮೀಜಿಗಳು, ಬ್ರಹ್ಮ ವಿದ್ಯೆ ಕಲಿತವರಿಗೆಲ್ಲ ಪ್ರಾಣಿ ಚರ್ಮದ ಮೇಲ್ಯಾಕೋ ಮೋಹ’ ಪ್ರಶಾಂತ ಗೊಣಗಿದ.
‘ಬ್ರಹ್ಮ ವಿದ್ಯೆ ಕಲಿತ ಬ್ರಾಹ್ಮಣರೂ ಹಿಂದೆ ಪ್ರಾಣಿಗಳ ಅಂಗಾಂಗವನ್ನ ಬಳಸ್ತಾ ಇದ್ರು ಗೊತ್ತಾ. ಕೃಷ್ಣ ಮೃಗದ ಚರ್ಮದ ಒಂದು ತುಂಡನ್ನು ಉಪನಯನದ ವೇಳೆ ಜನಿವಾರಕ್ಕೆ ಗಂಟು ಕಟ್ಟುವ ಪರಿಪಾಠ ಇತ್ತು. ಜೊತೆಗೆ ಸಂಧ್ಯಾ ವಂದನೆಯನ್ನು ಕೃಷ್ಣಾಜಿನದ ಮೇಲೆ ಮಾಡಲಾಗ್ತಿತ್ತು. ಹುಲಿಯ ಹಲ್ಲು, ಆನೆ ಬಾಲದ ಕೂದಲು, ನರಿಯ ಹಲ್ಲು ಇವುಗಳನ್ನು ಇಟ್ಟುಕೊಂಡರೆ ಅಗೋಚರ ಶಕ್ತಿ ಸಿದ್ಧಿಸುತ್ತೆ ಅನ್ನೋ ನಂಬಿಕೆ ಅವರಲ್ಲಿತ್ತು…’ ಪ್ರಶಾಂತನ ಅಜ್ಞಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ ಪರಮೇಶಿ.
‘ನಿಜವಾದ ಸುದ್ದಿ ಏನು ಗೊತ್ತೇನ್ರೋ’ ಎಂದು ಪರಮೇಶಿ ಸ್ನೇಹಿತರ ಮುಖ ನೋಡಿದ.
ಮತ್ತೆ ಮುಂದುವರೆಸಿದ: ನಮ್ಮ ಅನೇಕ ಸಿನಿಮಾ ನಟರು, ಉದ್ಯಮಿಗಳು, ರಾಜಕಾರಣಿಗಳು, ಎಂಎಲ್ಎಗಳು, ಮಿನಿಸ್ಟರ್ಗಳ ಹತ್ರ ಹುಲಿ ಉಗುರು ಇದೆ. ಅದರ ಬಲದಿಂದಾನೇ ತಾವೆಲ್ಲ ಜೀವನದಲ್ಲಿ ಸಾಧನೆ ಮಾಡಿದ್ದೀವಿ ಅನ್ನೋದು ಅವರೆಲ್ಲರ ನಂಬಿಕೆ. ಆದರೆ, ಅದೃಷ್ಟ ತಂದುಕೊಡುತ್ತೆ ಅಂತ ಅಂದುಕೊಂಡಿದ್ದ ಹುಲಿ ಉಗುರು ಈಗ ಕಂಟಕವಾಗ್ತಾ ಇರೋದನ್ನ ನೋಡಿ ಅವರೆಲ್ಲ ಗಾಬರಿಗೊಂಡಿದ್ದಾರೆ. ಹೀಗಾಗಿ ಅವರೆಲ್ಲ ಅದನ್ನು ಎಲ್ಲಿ ಸೇಫ್ ಮಾಡೋದು ಅನ್ನೋ ಲೆಕ್ಕಾಚಾರದಲ್ಲಿ ತೊಡಗವ್ರೆ. ಕೆಲವರು ಸ್ವಿಸ್ ಬ್ಯಾಂಕಲ್ಲಿ ಹಣವಿಟ್ಟು ಬಂದಂತೆ, ಫಾರಿನ್ಗೋಗಿ ಅಲ್ಲಿ ಹುಲಿ ಉಗುರನ್ನು ಸೇಫಾಗಿ ಇಟ್ಟು ಬರೋದಕ್ಕೆ ಮುಂದಾಗಿದ್ದಾರೆ. ಈ ಗಲಾಟೆ, ಗದ್ದಲ ಎಲ್ಲ ಮುಗಿದ ಮೇಲೆ ಅವನ್ನು ವಾಪಸ್ ತಂದರಾಯಿತು ಅನ್ನೋದು ಅವರ ಸದ್ಯದ ಲೆಕ್ಕಾಚಾರ’
ಪರಮೇಶಿಯ ಮಾತನ್ನು ಕೇಳಿ ಏನು ಹೇಳುವುದೆಂದು ತೋಚದೇ ಗಫೂರ ಮತ್ತು ಪ್ರಶಾಂತ ಸುಮ್ಮನೆ ಅವನನ್ನೇ ದಿಟ್ಟಿಸುತ್ತ ಕೂತರು.

ಕೆರೆಕೆಳಗಿನಹಳ್ಳಿ ಶ್ರೀನಿವಾಸ್
ಲೇಖಕ, ಸಾಮಾಜಿಕ ಹೋರಾಟಗಾರ