ಜಾಗತಿಕ ಲಿಂಗ ಸಮಾನತೆಯಲ್ಲಿ ಐಸ್‌ಲ್ಯಾಂಡ್ ಎತ್ತರದ ಸ್ಥಾನದಲ್ಲಿರುವುದು ಹೌದು. ಆದರೂ ಪುರುಷರು ಮತ್ತು ಮಹಿಳೆಯರ ವೇತನದಲ್ಲಿ ಶೇ.21ರಷ್ಟು ಅಂತರವಿದೆ. ‘ಇದನ್ನು ಸಮಾನತೆ ಎಂದು ಕರೀತೀರಾ ನೀವುʼ ಎಂಬುದು ಐಸ್‌ಲ್ಯಾಂಡ್ ಮಹಿಳೆಯರ ಪ್ರಶ್ನೆ
ಐಸ್‌ಲ್ಯಾಂಡ್ ದೇಶದ ಒಂದು ಲಕ್ಷದಷ್ಟು ಹೆಣ್ಣುಮಕ್ಕಳು ವೇತನ ಸಮಾನತೆಗೆ ಆಗ್ರಹಿಸಿ ಮತ್ತು ತಮ್ಮ ಮೇಲಿನ ಲೈಂಗಿಕ ಹಿಂಸಾಚಾರ ನಿಲ್ಲಬೇಕೆಂದು ಒತ್ತಾಯಿಸಿ 24 ತಾಸುಗಳ ಮುಷ್ಕರ ನಡೆಸಿದರು. ರಾಜಧಾನಿ ರೆಕ್ಯಾವಿಕ್ ನಲ್ಲಿ ಮೊನ್ನೆ (ಅ.24) ಜರುಗಿದ ಈ ಮುಷ್ಕರದಲ್ಲಿ ದೇಶದ ಪ್ರಧಾನಮಂತ್ರಿ ಕಾಟ್ರಿನ್ ಯಾಕಬ್ಸ್ ಡಾಟರ್ ಭಾಗವಹಿಸಿದ್ದು ವಿಶೇಷ. 1975ರಲ್ಲಿ ಇದೇ ದಿನ, ಇದೇ ಕಾರಣಗಳಿಗಾಗಿ ಇಂತಹುದೇ ಮೊತ್ತಮೊದಲ ಸರ್ವಮಹಿಳಾ ಮುಷ್ಕರ ಅಲ್ಲಿ ನಡೆದಿತ್ತು. ದೇಶದ ಶೇ.90ರಷ್ಟು ಮಹಿಳೆಯರು ಆಗ ಪಾಲ್ಗೊಂಡಿದ್ದರು. ಜಾಗತಿಕ ಲಿಂಗ ಸಮಾನತೆಯಲ್ಲಿ ಐಸ್‌ಲ್ಯಾಂಡ್ ಎತ್ತರದ ಸ್ಥಾನದಲ್ಲಿರುವುದು ಹೌದು. ಆದರೂ ಪುರುಷರು ಮತ್ತು ಮಹಿಳೆಯರ ವೇತನದಲ್ಲಿ ಶೇ.21ರಷ್ಟು ಅಂತರವಿದೆ. ‘ಇದನ್ನು ಸಮಾನತೆ ಎಂದು ಕರೀತೀರಾ ನೀವುʼ ಎಂಬುದು ಐಸ್‌ಲ್ಯಾಂಡ್ ಮಹಿಳೆಯರ ಪ್ರಶ್ನೆ.
ವಿಶ್ವ ಆರ್ಥಿಕ ವೇದಿಕೆಯ (World Economic Forum) ಜಾಗತಿಕ ಲಿಂಗ ಸಮಾನತೆ ಸೂಚ್ಯಂಕದ ಪ್ರಕಾರ ಕಳೆದ 14 ವರ್ಷಗಳಿಂದ ವಿಶ್ವದಲ್ಲೇ ಅತಿ ಹೆಚ್ಚು ಲಿಂಗಸಮಾನತೆಯ ಖ್ಯಾತಿ ಐಸ್‌ಲ್ಯಾಂಡಿನದು. ಐಸ್‌ಲ್ಯಾಂಡಿನ ಜನಸಂಖ್ಯೆ ನಾಲ್ಕು ಲಕ್ಷಕ್ಕೂ ಕಡಿಮೆ. 1975ರ ಮುಷ್ಕರದ ನಂತರ ಸಮಾನತೆಯ ಹಲವು ಲಾಭಗಳು ಮಹಿಳೆಯರಿಗೆ ದಕ್ಕಿದವು.
ಆದರೆ 48 ವರ್ಷಗಳ ನಂತರವೂ ವೇತನ ಅಂತರ ಮತ್ತು ಲಿಂಗಾಧಾರಿತ ಹಿಂಸೆಯ ಅನಾಚಾರಗಳು ಉಳಿದುಬಿಟ್ಟಿವೆ. ಕೆಲವು ವೃತ್ತಿಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈಗಲೂ ಶೇ.21ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಲೈಂಗಿಕ ಹಿಂಸೆಯನ್ನು ಎದುರಿಸುತ್ತಿರುವ ಮಹಿಳೆಯರ ಪ್ರಮಾಣ ಶೇ.40. ಸಮಾನತೆಯ ಸ್ವರ್ಗ ಎಂದು ಬಣ್ಣಿಸಲಾಗುವ ನಮ್ಮ ದೇಶದಲ್ಲಿ ಈ ಅಸಮಾನತೆ ಅನ್ಯಾಯಗಳು ಜೀವಂತ ಎಂಬುದು ಮಹಿಳೆಯರ ಆಕ್ರೋಶ.
ಸಂಬಳರಹಿತ ಅಥವಾ ಸಂಬಳಸಹಿತದ ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವುದೂ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳು ಉದ್ಯೋಗಗಳನ್ನು ಮಹಿಳೆಯರು ನಿರಾಕರಿಸಿದ್ದಾರೆ. ಹೆಣ್ಣುಮಕ್ಕಳೇ ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ಸ್ವಾಸ್ಥ್ಯಕಾಳಜಿ, ಆತಿಥ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ, ಈ ಮುಷ್ಕರ ತೀವ್ರ ಬಿಸಿ ತಟ್ಟಿಸಿದೆ. ಅಸಮಾನ ವೇತನ ಮತ್ತು ಲೈಂಗಿಕ ಹಿಂಸೆ ಎರಡೂ ಸಮಸ್ಯೆಗಳ ಬೇರುಗಳು ಮಹಿಳೆಯನ್ನು ಕೀಳಾಗಿ ಕಾಣುವ ಧೋರಣೆಯಲ್ಲಿವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಮತ್ತೊಂದನ್ನು ಪ್ರಭಾವಿಸುತ್ತದೆ.
ಪುರುಷರಷ್ಟೇ ಅರ್ಹತೆಗಳನ್ನು ಹೊಂದಿದ್ದು, ಅವರು ಮಾಡುವಷ್ಟು ಕೆಲಸವನ್ನೇ ಮಾಡಿದರೂ, ಖಾಸಗಿ ಮತ್ತು ಸರ್ಕಾರಿ ಏಜೆನ್ಸಿಗಳು ಮಹಿಳೆಯರು ಮತ್ತು ಪುರುಷರಿಗೆ ಸಮಾನವೇತನ ನೀಡಬೇಕೆಂದು 2018ರಲ್ಲಿ ಕಾಯಿದೆಯನ್ನೇ ಜಾರಿಗೊಳಿಸಿದ್ದರೂ ಈ ತಾರತಮ್ಯ ನಿವಾರಣೆಯಾಗಿಲ್ಲ.
ಅನಾದಿ ಕಾಲದಿಂದ ಮಹಿಳೆಯ ಶ್ರಮ ಶಕ್ತಿಯ ಕುರಿತು ಖ್ಯಾತ ಸ್ತ್ರೀ ಚಿಂತಕಿ ಜರ್ಮೇನ್ ಗ್ರೀರ್ ವಿಸ್ತೃತವಾಗಿ ಬರೆದಿದ್ದಾರೆ. The Whole Woman ಎಂಬ ಕೖತಿಯಲ್ಲಿ ಹೆಣ್ಣು ಗಂಡಿನ ನಡುವೆ ಶ್ರಮ ಶಕ್ತಿ ವಿಭಜನೆಯ ಅನ್ಯಾಯದ ತಾರತಮ್ಯವನ್ನು ಬಿಡಿಸಿ ಇಟ್ಟಿದ್ದಾರೆ.
ಹೆಜ್ಜೆಹೆಜ್ಜೆಗೂ ಗಂಡಾಳಿಕೆ ಮೆರೆದಾಡುವ ಭಾರತದಲ್ಲಂತೂ ಈ ಅಸಮಾನತೆ ಹಿಂಸೆ ಶೋಷಣೆಯ ಆಳ ಅಗಾಧವಾದದ್ದು. ಹೊಲದ ಕೆಲಸದಿಂದ ಹಿಡಿದು ಬಾಲಿವುಡ್ ತನಕ ಸರ್ವವ್ಯಾಪಿ. ಪೇಟೆ ಪಟ್ಟಣಗಳಲ್ಲಿ ಆಕೆಯ ಬದುಕು ಅಡುಗೆ ಕೋಣೆಗಳಲ್ಲಿ ಬಳಸುವ ಮಸಿಬಟ್ಟೆಗಿಂತ ಕೀಳು. ನಸುಕಿನಿಂದ ಇರುಳಿನ ತನಕ ಆಕೆ ಮಾಡುವ ಮನೆಗೆಲಸ, ಗಂಡನ ಸೇವೆ, ಮಕ್ಕಳ ಚಾಕರಿ ಉತ್ಪಾದಕ ಕೆಲಸ ಎನ್ನಿಸಿಕೊಳ್ಳುವುದೇ ಇಲ್ಲ. ರಜೆ ಸಂಬಳ ಬಡ್ತಿ ಮುಷ್ಕರ ರಾಜೀನಾಮೆ ಆಕೆಯ ಚಾಕರಿಯಲ್ಲಿ ಅಪರಿಚಿತ ಶಬ್ದಗಳು. ಹೊರಗೆ ಹೋಗಿ ನೌಕರಿ ಮಾಡಿ ಸಂಜೆ ಮನೆಗೆ ಮರಳುವ, ಪಗಾರ ಎಣಿಸುವ ಪುರುಷನದೇ ‘ಅಸಲು ದುಡಿಮೆ’. ಆತನೇ ಮನೆಯ ‘ಯಜಮಾನ’.
ಹೊರಗೂ ದುಡಿದು ಮನೆಯಲ್ಲೂ ಚಾಕರಿ ಮಾಡುವ ಹೆಣ್ಣುಮಕ್ಕಳದು ದುಪ್ಪಟ್ಟು ಗುಲಾಮಗಿರಿ. ಕಸ ಗುಡಿಸಲು ನೆಲ ಒರೆಸಲು ಬಟ್ಟೆ ಒಗೆಯಲು ಹೆಣ್ಣಾಳಿನ ನೆರವು ಆಕೆಗೆ ಇದ್ದೀತು. ಆದರೆ ಮನೆಗೆಲಸ ಮತ್ತು ಹೊರಗಿನ ಕೆಲಸದ ದುಪ್ಪಟ್ಟು ಭಾರ ಹೊರುವ ಆಕೆ ಕೂಡ ಹೆಂಗಸೇ. ಸಂಸಾರದ ನೊಗಲಿಗೆ ಹೆಗಲು ನೀಡದ ಗಂಡು ಕುಲವೇ ಹೆಣ್ಣಾಳಿನ ಬವಣೆಯ ಹಿಂದಿನ ಕಾರಣ.
ಹೊಲಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಮಾಡುವ ಹೆಣ್ಣಾಳುಗಳಿಗೆ ಅರ್ಧ ಕೂಲಿಯ ಅವಮಾನ ಯುಗಗಳಿಂದ ನಡೆದು ಬಂದದ್ದು. ಗಂಡ ಹೆಂಡತಿ ಇಬ್ಬರೂ ಕೂಲಿಯಾಳುಗಳು. ಬಸ್ಸೇರಿ ಕುಳಿತವರ ಬಳಿ ಬರುವ ಕಂಡಕ್ಟರ್ ಎರಡು ಟಿಕೆಟುಗಳ ದರ ತೆರುವಂತೆ ಹೇಳುತ್ತಾನೆ. ಅದ್ಯಾಕೆ ಎರಡು ಟಿಕೆಟುಗಳ ರೊಕ್ಕ ಕೊಡಲಿ… ನನಗೆ ಪೂರ್ತಿ ಕೂಲಿ ಕೊಟ್ರೆ ಆಕೆಗೆ ಕೊಡೋದು ಅರ್ಧ ಕೂಲಿಯೇ. ಕೂಲಿಯಾದರೆ ಅರ್ಧ, ಟಿಕೆಟ್ಟಾದರೆ ಪೂರ್ತಿ! ಈ ಅನ್ಯಾಯ ಯಾಕೆ? ಒಂದೂವರೆ ಟಿಕೆಟ್ ಹರೀರಿ ಎಂದು ಪ್ರತಿಭಟಿಸುತ್ತಾನೆ ಗಂಡ.
ಪಿತೃಪ್ರಧಾನ ವ್ಯವಸ್ಥೆಯ ಪಿರಮಿಡ್ ತುದಿಯಲ್ಲಿ ಶತಮಾನಗಳಿಂದ ವಿರಾಜಮಾನರಾಗಿರುವ ಸ್ತ್ರೀದ್ವೇಷಿಗಳು ಸಮಾನತೆಯ ವಿಚಾರವನ್ನು ಒಪ್ಪಲಿಕ್ಕಿಲ್ಲ. ಆದರೆ, ಬದಲಾವಣೆಯೊಂದೇ ಶಾಶ್ವತ ಎಂಬ ಮಾತನ್ನು ಅವರೂ ನೆನಪಿನಲ್ಲಿಡಬೇಕು.
