ಯುವ ಜನರಲ್ಲಿ ಉದಾತ್ತ ವೈಚಾರಿಕತೆ, ಉನ್ನತ ನೀತಿ, ನೈತಿಕತೆ, ಮೌಲ್ಯ ಪ್ರಜ್ಞೆ, ಸಂಸ್ಕೃತಿ ಬೆಳೆಸಲು ಧಾರವಾಡದ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಯುವಜನ ಸಂಘಟನೆಯ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಯುವಜನ ಶಿಬಿರವನ್ನು ಆಯೋಜಿಸಿತ್ತು.
ಶಿಬಿರದ ಮೊದಲ ಗೋಷ್ಠಿಯಲ್ಲಿ ʼವೈಚಾರಿಕತೆ ಮತ್ತು ಯುವಜನತೆʼ ಎಂಬ ವಿಷಯದ ಕುರಿತು ಏಐಡಿವೈಓ ರಾಜ್ಯ ಖಜಾಂಚಿ ಜಯಣ್ಣ ಮಾತನಾಡಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ರಾಜರಹಿತ ಪಂಥದ ಕ್ರಾಂತಿಕಾರಿಗಳ ಆಶಯಗಳಾದ ಶೋಷಣೆ, ಅಸಮಾನತೆ ರಹಿತ ಸಮಾಜವಾದಿ ಭಾರತದ ಕನಸು ನುಚ್ಚು ನೂರಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಎಲ್ಲ ಕ್ಷೇತ್ರಗಳಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರದ ಖಾಸಗಿಕರಣ- ವ್ಯಾಪಾರೀಕರಣ, ಬೆಲೆ ಏರಿಕೆ, ನಿರುದ್ಯೋಗ, ಬಡತನ, ಮಹಿಳೆಯರ ಮೇಲಿನ ಅಪರಾಧಗಳು ತೀವ್ರವಾಗಿ ಹೆಚ್ಚಾಗಿವೆ ಎಂದರು.
ಇಂದು ಒಂದೆಡೆ ಸಮಾಜವನ್ನು ಮುನ್ನಡೆಸುವ ಪ್ರಗತಿಪರ ಚಿಂತನೆಗಳು ಅಸ್ತಿತ್ವದಲ್ಲಿದ್ದರೆ, ಇನ್ನೊಂದೆಡೆ ಸಮಾಜದ ಪ್ರಗತಿಯನ್ನು ತಡೆಗಟ್ಟುವ ಪ್ರತಿಗಾಮಿ ವಿಚಾರಗಳು ಕೂಡಾ ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಹಳೆಯ ಊಳಿಗಮಾನ್ಯ ವಿಚಾರಗಳನ್ನ ತೆಗೆದುಹಾಕುವ ನಿಟ್ಟಿನಲ್ಲಿ ಪ್ರಮುಖವಾಗಿ ಸಾಂಸ್ಕೃತಿಕ ಹೋರಾಟ ನಡೆಯಲಿಲ್ಲ. ಹಾಗಾಗಿ ಸಮಾಜದ ಪ್ರಗತಿಯ ಹಂತದಲ್ಲಿ ಒಡಮೂಡಬೇಕಿದ್ದ ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸಮಾನತೆ, ಭಾತೃತ್ವ, ಜಾತ್ಯತೀತತೆಯಂತಹ ವಿಚಾರಗಳು ಆಳವಾಗಿ ಬೇರೂರಲಿಲ್ಲ. ಅಂಧವಾಗಿ ಯಾವುದನ್ನೂ ಒಪ್ಪಿಕೊಳ್ಳದೆ, ಪ್ರತಿಯೊಂದು ಹಳೆಯ ವಿಚಾರಗಳನ್ನು ಪ್ರಶ್ನಿಸುವ ಮತ್ತು ಸತ್ಯವನ್ನು ಅರಿಯಲು ವಿಚಾರಗಳನ್ನು ತಾರ್ಕಿಕವಾಗಿ ಯೋಚಿಸುವ, ವೈಜ್ಞಾನಿಕವಾಗಿ ವಿಶ್ಲೇಷಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎರಡನೇ ಗೋಷ್ಠಿಯಲ್ಲಿ ʼಪ್ರಸಕ್ತ ಸಾಮಾಜಿಕ ತಲ್ಲಣಗಳು, ಯುವಜನರ ಮುಂದಿರುವ ಕರ್ತವ್ಯಗಳುʼ ಎಂಬ ವಿಷಯದ ಕುರಿತು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ ಮಾತನಾಡಿ, ಒಂದೆಡೆ ದೇಶದ ಕೆಲವೇ ಶ್ರೀಮಂತರು ಇಡೀ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಶೇ. 90ಕ್ಕೂ ಹೆಚ್ಚಿರುವ ದುಡಿಯುವ ಜನರು ಜೀವನ ನಡೆಸುವುದು ದುಸ್ತರವಾಗಿದೆ. ಇಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತ ಬೇಕಾಗಿರುವ ಯುವಜನರ ಮನಸ್ಸಿನಲ್ಲಿ ಜಾತಿ-ಧರ್ಮ, ಕೋಮು ಗಲಭೆ, ಧರ್ಮಾಂಧತೆಗಳಂತಹ ವಿಚಾರಗಳನ್ನು ನಮ್ಮನ್ನು ಆಳುವ ಸರ್ಕಾರಗಳು ಬಿತ್ತುತ್ತಿವೆ ಎಂದು ಬೇಸರಿಸಿದರು.
ಯುವಜನರ ನೈತಿಕ ಬೆನ್ನೆಲುಬು ಮುರಿಯಲು ಅಶ್ಲೀಲ ಸಿನಿಮಾ ಸಾಹಿತ್ಯದ ಪ್ರಚಾರ, ಮದ್ಯ-ಮಾದಕ ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ನೀಡುತ್ತಿವೆ. ಆದ್ದರಿಂದ ಎಲ್ಲ ರೀತಿಯ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು, ಕ್ರಾಂತಿಕಾರಿಗಳ ಹೋರಾಟದ ಬದುಕಿನ ಸಾರವನ್ನು ಗ್ರಹಿಸಿ, ಉನ್ನತ ನೀತಿ, ಸಂಸ್ಕೃತಿ ಆಧಾರದಲ್ಲಿ ಹೋರಾಟ ಕಟ್ಟಲು ಕ್ರಾಂತಿಕಾರಿ ವಿಚಾರ ಮತ್ತು ಕ್ರಾಂತಿಕಾರಿ ಯುವಜನ ಸಂಘಟನೆಯ ಅವಶ್ಯಕವಿದೆ. ಈ ನೆಲದ ಕ್ರಾಂತಿಕಾರಿ ಯುವಜನ ಸಂಘಟನೆ ಏಐಡಿವೈಓ ಈ ವಿಚಾರಗಳ ಆಧಾರದಲ್ಲಿ ದೇಶಾದ್ಯಂತ ಯುವಜನರನ್ನು ಸಂಘಟನೆ ಮಾಡುತ್ತಿದ್ದು ಯುವಜನರು ತಮ್ಮ ಊರುಗಳಲ್ಲಿ, ಬಡಾವಣೆಗಳಲ್ಲಿ ಸಂಘಟನೆ ಕಟ್ಟಲು ಮುಂದಾಗಬೇಕು ಎಂದರು.
ಏಐಡಿವೈಒ ಜಿಲ್ಲಾಧ್ಯಕ್ಷ ಭವಾನಿ ಶಂಕರ್, ಜಿಲ್ಲಾ ಕಾರ್ಯದರ್ಶಿ ರಣಜಿತ್ ದೂಪದ್, ಪ್ರೀತಿ ಸಿಂಗಾಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿ ಯುವಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು.