ಉಪ ವಿಭಾಗಾಧಿಕಾರಿ ಜಗದೀಶ್ ಮತ್ತು ತಹಶೀಲ್ದಾರ್ ನಿಸರ್ಗ ಪ್ರಿಯ, ರೈತ ಮುಖಂಡರ ಜೊತೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕು ಕಚೇರಿಯಲ್ಲಿ ತಾಲೂಕಿನ ರೈತರ ಸಮಸ್ಯೆಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆ ನಡೆಸಿದರು.
ಬೆಳೆ ಸಮೀಕ್ಷೆ, ಕಳಪೆ ಬಿತ್ತನೆ ಬೀಜ, ಕಳಪೆ ಗೊಬ್ಬರ, ಕಳಪೆ ಕೀಟನಾಶಕ ಮಾರಾಟ ಹಾಗೂ ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯಿಂದ ಆಗುತ್ತಿರುವ ಹಾನಿ ಮತ್ತು ಎಥನಾಲ್ ಘಟಕ ಪ್ರಾಜೆಕ್ಟ್ ಕುರಿತಂತೆ ತಾಲೂಕು ಆಡಳಿತ ಎಲ್ಲ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, ತಾಲೂಕಿನಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದ್ದು, ರೈತರಿಗೆ ಅನ್ಯಾಯ ಆಗುತ್ತಿದೆ. ಬೆಳೆ ಸಮೀಕ್ಷೆಯಲ್ಲಿ ದಲ್ಲಾಳಿಗಳು ನೇರವಾಗಿ ಭಾಗಿಯಾಗುತ್ತಿದ್ದು ಪಾರದರ್ಶಕತೆ ಇಲ್ಲ. ರೈತರ ಉಪಸ್ಥಿತಿ ಇಲ್ಲದೆ ಜಮೀನಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ಬೇಕಾಬಿಟ್ಟಿ ವರದಿಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ಕೃಷಿ ಇಲಾಖೆ ಅಧಿಕಾರಿಗಳ ವಂಚನೆಯಿಂದ ಸಾಕಷ್ಟು ರೈತರಿಗೆ ಅನ್ಯಾಯ ಆಗಿದೆ. ಕೆಲವು ರೈತರ ಜಮೀನಿನಲ್ಲಿ ಅಡಿಕೆ, ತೆಂಗು ಇಲ್ಲದೆ ಇದ್ದರು, ಇರುವುದಾಗಿ ಅಧಿಕಾರಿಗಳು ವರದಿ ಹಾಕಿದ್ದಾರೆ. ಸಮೀಕ್ಷೆ ವರದಿ ಆಗಿರುವ ಹಳ್ಳಿಗಳಿಗೆ ಎಸಿ, ತಹಶೀಲ್ದಾರ್ ನೇತೃತ್ವದಲ್ಲಿ ತೆರಳಿ ಪರಿಶೀಲನೆ ನಡೆಸಿ ಅಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಸೂಕ್ತ ಕ್ರಮವಹಿಸಿ. ಇಲ್ಲವಾದಲ್ಲಿ ಆರೋಪ ಮಾಡಿದ ನಮ್ಮ ಮೇಲೆ ಕೇಸ್ ಮಾಡಿ ಎಂದು ಸವಾಲು ಹಾಕಿದರು.
ಹಿರಿಯ ಮುಖಂಡರಾದ ರಾಜೇಗೌಡ ಮಾತನಾಡಿ, ಕುರಿ ಕಾಯೋಕೆ ತೋಳ ನೇಮಿಸಿದಂತೆ ಆಗಿದೆ. ಅಧಿಕಾರಿಗಳ ವರ್ತನೆ, ಸಮಾಜದಲ್ಲಿ ಹುಟ್ಟಿ ಸಮಾಜದ ಉಪ್ಪು ತಿಂದು ಸಮಾಜಕ್ಕೆ ಏನಾದರು ಉಪಯುಕ್ತವಾಗುವಂತೆ ಕೆಲಸ ಮಾಡಬೇಕು ಅನ್ನುವವರು ಒಬ್ಬರು ಇಲ್ಲ, ಹುಟ್ಟಲು ಹಳ್ಳಿ ಹೇಳಲು ರೈತನ ಮಕ್ಕಳು ಕೆಲಸ ಮಾಡೋದು ಮಾತ್ರ ಸಿರಿವಂತರ ಪರ ರೈತರ ವಿರೋಧವಾಗಿ ಎಂದು ಕಿಡಿಕಾರಿದರು.
ರೈತರ ಸಭೆಗೆ ಹಾಜರಾಗುವಂತೆ ನೋಟಿಸ್ ಇದ್ದರೂ ರೈತರಿಗೆ ಉತ್ತರ ಕೊಡಲು ಆಗದೆ ವಿನಾಃ ಕಾರಣ ರಜೆ ಹಾಕಿ, ಬೇಡದ ಸಬೂಬು ಕೊಟ್ಟು ಬಹುತೇಕ ಅಧಿಕಾರಿಗಳು ಗೈರಾಗಿದ್ದಾರೆ. ಇದೇನಾ ರೈತ ಪರ ಕಾಳಜಿ,ಸಮಾಜದ ಮೇಲಿನ ಬದ್ಧತೆ ರೈತರ ಕಂದಾಯದ ಸಂಬಳ ಬೇಕು ರೈತನ ಕಷ್ಟ ಕೇಳಲಾಗದವರು ಎಂದು ವಿಷಾದಿಸಿದರು.
ರೈತ ಮುಖಂಡ ಕರೊಟ್ಟಿ ತಮ್ಮೆಗೌಡ ಮಾತನಾಡಿ, ತಾಲೂಕಿನಲ್ಲಿ ಫರ್ಟಿಲೈಸರ್ ಅಂಗಡಿಗಳಲ್ಲಿ ಕಳಪೆ ಗೊಬ್ಬರ, ಕಳಪೆ ಕೀಟನಾಶಕ, ಕಳಪೆ ಬಿತ್ತನೆ ಬೀಜ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಇದಕ್ಕೆಲ್ಲ ಕೃಷಿ ಅಧಿಕಾರಿಗಳ ಕುಮ್ಮಕ್ಕು ಇದೆ. ದೂರು ನೀಡಿದರೂ ಕೂಡ ಅಂಗಡಿಗೆ ದಾಳಿ ನಡೆಸುವ ಬದಲು ಇರುವ ಸ್ಟಾಕ್ ಪೂರ್ಣ ಮಾರಾಟವಾಗುವ ಹಾಗೆ ನೆರವು ನೀಡುತ್ತಿದ್ದು, ರೈತ ವಿರೋಧಿ ನಿಲುವಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಮಂಡ್ಯಕ್ಕೆ ಲ್ಯಾಬ್ ಪರೀಕ್ಷೆಗೆ ಕಳಿಸಿ ತಿಂಗಳು ಗಟ್ಟಲೆ ಆಗಿದೆ. ಆದರೆ, ಇದುವರೆಗೂ ಪರೀಕ್ಷೆ ಮಾಡಿಲ್ಲ. ಖಾಸಗಿಯಾಗಿ ಪರೀಕ್ಷೆ ಮಾಡಿಸಿದರೆ ರೈತ ಅದನ್ನ ಒಪ್ಪುವುದಿಲ್ಲ. ಅಧಿಕಾರಿಗಳು ಪರೀಕ್ಷೆ ಮಾಡಿಸುವ ತನಕ ರೈತ ಎಷ್ಟು ಸಮಯ ಕಾಯಬೇಕು. ಅದುವರೆಗೆ ರೈತ ಬಾಯಿಗೆ ಮಣ್ಣು ಹಾಕಿಕೊಳ್ಳಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.