ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಆರೋಪದ ಹಿನ್ನೆಲೆಯಲ್ಲಿ ಪಾಲಿಕೆ ಒಂದೇ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಪಾಲಿಕೆಯ ನಗರ ಯೋಜನಾ ಘಟಕದ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಆದೇಶ ಹೊರಡಿಸಿದ್ದಾರೆ. ಪಾಲಿಕೆಯ ಭಾಗ್ಯಶ್ರೀ ಎಮ್.ಎನ್, ಲತಾರಾಣಿ ಜಿಎಮ್ ಬಸವಂತಿ ಪಾಟೀಲ್, ವಿಲಾಸ್, ಮಂಜುಳಾ ನಾಟೇಕರ್ ವರ್ಗಾವಣೆಯಾಗಿರುವ ನಾಲ್ವರು ಅಧಿಕಾರಿಗಳು. ಇವಲ್ಲದೆ, ಇನ್ನೂ ಮೂವರನ್ನು ವರ್ಗಾವಣೆ ಮಾಡಲಾಗಿದೆ.
ನಗರ ಯೋಜನೆ ಘಟಕದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿದ್ದವು. ಅಧಿಕಾರಿಗಳ ವಿರುದ್ಧ ಹಲವಾರು ಮಂದಿ ಆಯುಕ್ತರಿಗೆ ದೂರು ನೀಡಿದ್ದರು. ಅಧಿಕಾರಿಗಳಿಗೆ ಆಯುಕ್ತರು ನೋಟಿಸ್ ಕೂಡ ಜಾರಿ ಮಾಡಿದ್ದರು. ಆದರೂ, ಅಧಿಕಾರಿಗಳು ತಮ್ಮ ಚಾಳಿಯನ್ನು ಬಿಟ್ಟಿರಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಯಾವುದೇ ಪ್ರಮಾಣ ಪತ್ರ ಪಡೆಬೇಕೆಂದರೂ ಲಂಚ ಕೊಡಬೇಕಿತ್ತು. ಕಟ್ಟಡ ಪರವಾನಿಗೆ, ಮುಕ್ತಾಯ ಪ್ರಮಾಣ ಪತ್ರ ನೀಡಲು ಹೆಚ್ಚು ಲಂಚ ಪಡೆಯುತ್ತಿದ್ದರು. ಅಲ್ಲದೇ ಕೆಲವರ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುತ್ತಿದ್ದರು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ಆರೋಪ ಮಾಡಿದ್ದರು.
ಆರೋಪಗಳನ್ನು ಗಮನಿಸಿದ್ದ ಆಯುಕ್ತರು ಅಧಿಕಾರಿಗಳಿಗೆ ನೋಟಿಸ್ ನೀಡಿ, ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದ್ದರು. ಆದರೂ, ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ ಎಂದು ತಿಳಿದಬಂದಿದೆ.