ಪೌರಕಾರ್ಮಿಕರು ಮುಂಜಾನೆಯೇ ಎದ್ದು, ರಸ್ತೆಗಳ ಕಸ-ಕಡ್ಡಿ ಗುಡಿಸಿ ನಗರವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ, ದುಡಿಯುವ ಅವರಿಗೆ ವೇತನವೇ ದೊರೆಯುತ್ತಿಲ್ಲ. ಸುರಕ್ಷಾ ಸಲಕರಣೆಗಳನ್ನೂ ನೀಡಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಸಿದ್ದು ಕೇರೂರ್ ಕಿಡಿಕಾರಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಪುರಸಭೆಯ ಹೊರಗುತ್ತಿಗೆ ನೌಕರರಿಗೆ ಸುಮಾರು ಒಂದು, ಒಂದೂವರೆ ವರ್ಷಗಳಿಂದ ವೇತನ ನೀಡಲಾಗಿಲ್ಲ. ಬಾಕಿ ವೇತನವನ್ನು ನೀಡಬೇಕು ಮತ್ತು ಇಪಿಎಫ್, ಇಎಸ್‌ಐಅನ್ನು ಪಾವತಿಸಬೇಕೆಂದು ಒತ್ತಾಯಿಸಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಸತ್ಯಾಗ್ರಹವನ್ನು ಬೆಂಬಲಿಸಿ ಅವರು ಮಾತನಾಡಿದರು. “ನಗರವನ್ನು ಸ್ವಚ್ಛಗೊಳಿಸುವ ನೌಕರರ ವೇತನವನ್ನು ಕಸಿದುಕೊಳ್ಳಬಾರದು. ಅವರಿಗೆ ಸುರಕ್ಷತಾ ಕವಚವನ್ನು ಕೊಡದೆ ಅಮಾನುಷವಾಗಿ ದುಡಿಸಿಕೊಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಲಿತ ಹಿರಿಯ ಮುಖಂಡ ಚಂದ್ರಶೇಖರ್ ಹರನಾಳ, ಮಲ್ಲಣ್ಣ ಕೊಡಚಿ, ಸಿದ್ದರಾಮ ಕಟ್ಟಿ, ಮದನ್ ಗುಡೂರ್, ಅಬ್ದುಲ್ ಗನಿ, ವಿಶ್ವರಾಧ್ಯ ಗೋಪಾಲ್ಕರ್, ಬಸವರಾಜ್ ಇಂಗಳಗಿ, ಮಲ್ಲಿಕಾರ್ಜುನ ಕೆಲ್ಲೂರ, ರಾಜು ಆಂದೋಲ ಹಾಗೂ ನೌಕರರು ಇದ್ದರು.