ಗುಜರಾತ್ ರಾಜ್ಯದ ಸೂರತ್ ನಗರದ ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದಾಜಾನ್ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಈ ಕುಟುಂಬವು ಆತ್ಮಹತ್ಯೆಗೆ ಶರಣಾಗಿದ್ದು, ಅಲ್ಲಿ ಸಿಕ್ಕಿರುವ ಪತ್ರವೊಂದರಲ್ಲಿ’ಹಣಕಾಸಿನ ಸಂಕಷ್ಟವೇ ನಮ್ಮ ಈ ನಿರ್ಧಾರಕ್ಕೆ ಕಾರಣ” ಎಂದು ಬರೆಯಲಾಗಿದೆ.
ಮೃತರನ್ನು ಮನೆಯ ಯಜಮಾನ ಮನೀಷ್ ಸೋಲಂಕಿ (37), ಆತನ ಪತ್ನಿ, ತಂದೆ-ತಾಯಿ, 6 ವರ್ಷದ ಪುತ್ರ, 10 ಮತ್ತು 13 ವರ್ಷದ ಇಬ್ಬರು ಪುತ್ರಿಯರು ಎಂದು ಗುರುತಿಸಲಾಗಿದೆ. ಮನೀಷ್ ಸೋಲಂಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಉಳಿದ ಆರು ಮಂದಿ ವಿಷಾಹಾರ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿಕ್ಷಕರ ಹತ್ಯೆ ಪ್ರಕರಣ: ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು
ಕುಟುಂಬದ ಯಜಮಾನ ಮನೀಷ್ ಸೋಲಂಕಿ ಪೀಠೋಪಕರಣ ಉದ್ಯಮಿಯಾಗಿದ್ದು ಕುಟುಂಬವು ಆರ್ಥಿಕ ಸಮಸ್ಯೆಗೆ ಸಿಲುಕಿತ್ತು. ಗುಜರಾತ್ ಸೂರತ್‌ನ ಕಾರ್ಖಾನೆಯಲ್ಲಿ ಸುಮಾರು 35 ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆಯನ್ನು ಸೋಲಂಕಿ ಅವರು ನಡೆಸುತ್ತಿದ್ದರು. ಈ ಕಾರ್ಮಿಕರು ಶನಿವಾರ ಬೆಳಿಗ್ಗೆ ಸೋಲಂಕಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಕರೆಗಳಿಗೆ ಉತ್ತರಿಸಲಿಲ್ಲ. ಅಲ್ಲದೆ ಅವರ ಮನೆಯ ಬಾಗಿಲನ್ನು ತೆರೆಯಲಿಲ್ಲ.
ಸ್ಥಳೀಯರು ಮನೆಯ ಹಿಂಬದಿಯ ಕಿಟಕಿ ಒಡೆದು ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆಗಾಗಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸೋಲಂಕಿ ದೊಡ್ಡ ದೊಡ್ಡ ಒಪ್ಪಂದಗಳನ್ನು ಹೊಂದಿದ್ದರು ಮತ್ತು ದೀರ್ಘಕಾಲದಿಂದ ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಕುಟುಂಬದ ಸಂಬಂಧಿಕರು ಯಾವುದೇ ವಿವರ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಸಾವಿಗೆ ನಿಖರ ಕಾರಣವೇನೆಂದು ತನಿಖೆ ನಂತರ ತಿಳಿದುಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.