ಪರಿಶಿಷ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ರವಾನಿಸುವುದು ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ವು ಅಕ್ಟೋಬರ್ 31ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲು ನಿರ್ಧರಿಸಿದೆ ಎಂದು ರಾಯಚೂರು ಜಿಲ್ಲಾ ಸಂಚಾಲಕ ಕೆ ಪಿ ಅನಿಲ್‌ಕುಮಾರ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಎಲ್ಲ ಸರ್ಕಾರಗಳು ಮೀಸಲಾತಿ ವರ್ಗೀಕರಣದ ಕುರಿತು ತಾರ್ಕಿಕ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ. ಈ ಹಿಂದೆ ಬಿಜೆಪಿ ಸರ್ಕಾರ ಮಾಧುಸ್ವಾಮಿ ನೇತೃತ್ವದ ಉಪಸಮಿತಿ ವರದಿಯನ್ನು ಕೇಂದ್ರಕ್ಕೆ ರವಾನಿಸಿ ಸುಮ್ಮನಾಯಿತು. ಕೇಂದ್ರ ಸರ್ಕಾರ ಸಂವಿಧಾನಾತ್ಮಕವಾಗಿ ಕಾನೂನು ತಿದ್ದುಪಡಿ ಮಾಡದೆ ನಿರ್ಲಕ್ಷಿಸುತ್ತಾ ಬಂದಿದೆ. ಶೆಡ್ಯೂಲ್ 9ಕ್ಕೆ ಸೇರಿಸುವ ಭರವಸೆಯೂ ಈಡೇರಿಲ್ಲ. 341(2) ತಿದ್ದಪಡಿ ತಂದು ಜಾರಿಗೊಳಿಸಲು ಮುಂದಾಗಲಿಲ್ಲ” ಎಂದು ಆರೋಪಿಸಿದರು.
“ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಮುಂದಿನ ಅಧೀವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸು ಮಾಡುವಂತೆ ಆಗ್ರಹಿಸಲು ಜಿಲ್ಲೆಯಿಂದ 500 ಮಂದಿ ಬೆಂಗಳೂರಿಗೆ ತೆರಳುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಜನರಲ್ಲಿ ಪರಸ್ಪರ ಸೇವಾ ಮನೋಭಾವ ಬೆಳೆಯಲಿ: ಸಲೀಮ್ ಅರ್ಶಾದಿ
ಈ ಸಂದರ್ಭದಲ್ಲಿ ಅಬ್ರಾಹಂ ಹೊನ್ನಟಗಿ, ಜನಾರ್ಧನ ಹಳ್ಳಿ ಬೆಂಚಿ, ರಮೇಶ, ನರಸಿಂಹಲು, ಜಯಪ್ಪ, ಶರಣಬಸವ, ಸುರೇಶ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ