ಭಗೀರಥ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಶಾಸಕ ಶಿವರಾಜ ಪಾಟೀಲ್ ಹೇಳಿದರು.
ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಗೀರಥ ಉಪ್ಪಾರ ಸಮಾಜದಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
“ಭಗೀರಥ ಸಮಾಜದ ಹೆಚ್ಚಿನ ಅಭಿವೃದ್ಧಿಗೆ ಸಮಾಜದಲ್ಲಿನ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯಬೇಕು ಹಾಗೂ ಐಎಎಸ್, ಐಪಿಎಸ್ ಸೇರಿದಂತೆ ರಾಜಕೀಯವಾಗಿ ಬೆಳೆಯಲು ಪ್ರಾತಿನಿಧ್ಯ ದೊರೆತಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ” ಎಂದರು.
“ಸಮಾಜವು ಹೆಚ್ಚಾಗಿ ಗುರುತಿಸಿಕೊಳ್ಳುವುದು ರಾಜಕೀಯ ಪ್ರಾತಿನಿಧ್ಯ ದೊರೆತಾಗ ಮಾತ್ರ. ಶೈಕ್ಷಣಿಕವಾಗಿ ಅಭಿವೃದ್ಧಿಯ ಜೊತೆಗೆ ರಾಜಕೀಯವಾಗಿ ಬೆಳೆಯಬೇಕು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಸಾಧನೆಗೈದಿದ್ದಾರೆ. ಅವರ ಉನ್ನತ ವ್ಯಾಸಂಗಕ್ಕೆ ಪೋಷಕರು ಅನೂಕೂಲ ಒದಗಿಸಿಕೊಡಬೇಕು” ಎಂದರು.
“ಸಮಾಜದ ಸಮುದಾಯ ಭವನಕ್ಕೆ ಈ ಹಿಂದೆ ಅನುದಾನ ನೀಡಿದ್ದು, ಇದೀಗ ಸಮಾಜದ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ 15 ಲಕ್ಷ ರೂ. ನೀಡಲಾಗುವುದು. ಸಮಾಜದ ಸಹಕಾರದೊಂದಿಗೆ ಸದಾ ಬೆನ್ನೆಲುಬಾಗಿ ಇರುತ್ತೇವೆ” ಎಂದು ತಿಳಿಸಿದರು.
ಈ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು 5 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ₹5,000 ನಗದು ಬಹುಮಾನ ನೀಡಿದರು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವಾಲ್ಮೀಕಿ ಜಯಂತಿ ವೇಳೆ ಅವಮಾನ; ನಾಯಕ ಸಮಾಜದ ಮುಖಂಡರ ಆರೋಪ
ಈ ಸಂದರ್ಭದಲ್ಲಿ ಮಲದಕಲ್ ನಿಜಾನಂದ ಯೋಗಾಶ್ರಮದ ಶ್ರೀ ಗುರುಬಸವ ರಾಜಗುರುಗಳು, ಸಮಾಜದ ರಾಜ್ಯ ಕಾರ್ಯದರ್ಶಿ ಯು.ವೆಂಕೋಬಾ, ಗೌರವಾಧ್ಯಕ್ಷ ದೇವಣ್ಣ ನವಲಕಲ್, ಅಧ್ಯಕ್ಷ ಬುಗ್ಗಾರೆಡ್ಡಿ ದೇವನಪಲ್ಲಿ, ಪದ್ಮಾವತಿ ಬಿ.ವಿ.ನಾಯಕ, ಶ್ರೀಕಾಂತ್ ರಾವ್ ವಕೀಲ, ಜಕ್ಕಪ್ಪ ಯಡವೆ, ಬನ್ನಪ್ಪ ಹುಲಿಬೆಟ್ಟ, ರಮೇಶ ಮೇಟಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ