ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿಗೆ ಚಾಲನೆ ನೀಡಿದ್ದ ಕಾಂಗ್ರೆಸ್ ಸಚಿವ ಎಂ.ಬಿ ಪಾಟೀಲ್ ಅವರು ಇದೀಗ, ‘ನಮ್ಮ ಮೆಟ್ರೋ’ಗೆ ‘ಬಸವಣ್ಣ’ನವರ ಹೆಸರು ಇಡಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕೆಲವರು ನಮ್ಮ ಮೆಟ್ರೋಗೆ ವಚನಕಾರ ಬಸವಣ್ಣನವರ ಹೆಸರು ಇಡಲು ಸಮ್ಮತಿಸಿದರೆ, ಇನ್ನು ಕೆಲವರು ನಮ್ಮ ಮೆಟ್ರೋ ಬೆಂಗಳೂರಿಗರ ಭಾವನೆ ಎಂದು ಹೇಳಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ.
ನಿತ್ಯ 7 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುವ ನಮ್ಮ ಮೆಟ್ರೋ 13ನೇ ವರ್ಷಕ್ಕೆ ಕಾಲಿಟ್ಟಿದೆ. ಸದ್ಯ ನಗರದಲ್ಲಿ 74 ಕಿ.ಮೀ ಮೆಟ್ರೋ ಕಾರ್ಯಾಚರಣೆ ನಡೆಸುತ್ತಿದೆ. ನಗರದಲ್ಲಿರುವ ಕೆಲವು ಮೆಟ್ರೋ ನಿಲ್ದಾಣಗಳಿಗೆ ಗಣ್ಯರ ಹೆಸರು, ಸ್ಥಳಿಯ ಕಂಪನಿಗಳ ಹೆಸರು, ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಲವೆಡೆ ಆ ರಸ್ತೆ ಅಥವಾ ಭಾಗದ ಹೆಸರನ್ನು ಮೆಟ್ರೋ ನಿಲ್ದಾಣಗಳಿಗೆ ನಾಮಕರಣ ಮಾಡಲಾಗಿದೆ.
ಸಾಮಾನ್ಯವಾಗಿ, ಹೊಸಹಳ್ಳಿಯ ಮೆಟ್ರೋ ನಿಲ್ದಾಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ, ವಿಧಾನಸೌಧ ಮೆಟ್ರೋ ನಿಲ್ದಾಣಕ್ಕೆ ಡಾ. ಬಿ.ಆರ್ ಅಂಬೇಡ್ಕರ್, ಸೆಂಟ್ರಲ್ ಕಾಲೇಜು ಮೆಟ್ರೋ ರೈಲು ನಿಲ್ದಾಣಕ್ಕೆ ವಿಶ್ವೇಶ್ವರಯ್ಯ, ಪ್ರಕಾಶನಗರದಲ್ಲಿ ಕುವೆಂಪು ಮೆಟ್ರೋ ನಿಲ್ದಾಣ ಹಾಗೂ ಮೆಜೆಸ್ಟಿಕ್‌ಗೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಇಡಲಾಗಿದೆ.
ಅದೇ ರೀತಿ ಬೆಂಗಳೂರಿನಲ್ಲಿ ಪ್ರಸಿದ್ಧ ಸ್ಥಳ ಹಾಗೂ ಜನರು ಸುಲಭವಾಗಿ ಗುರುತಿಸಲು ಸಮೀಪದ ಸ್ಥಳಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಉದಾಹರಣೆಗೆ, ಕಬ್ಬನ್‌ಪಾರ್ಕ್, ಲಾಲ್‌ಬಾಗ್, ಎಂ.ಜಿ ರೋಡ್ ಎಂದು ಮೆಟ್ರೋ ನಿಲ್ದಾಣಗಳಿಗೆ ಹೆಸರಿಸಲಾಗಿದೆ.
ಅಲ್ಲದೇ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿಲ್ದಾಣಗಳಿಗೆ ಖಾಸಗಿ ಕಂಪನಿಗಳೂ ಸಹಕಾರ ಸೂಚಿಸುತ್ತಿದ್ದು, ಕೆಲವು ಕಂಪನಿಗಳ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ನಿಲ್ದಾಣ ಹಾಗೂ ಇಸ್ಕಾನ್ ಟೆಂಪಲ್ ಬಳಿಯ ನಿಲ್ದಾಣಕ್ಕೆ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಿಲ್ದಾಣ ಎಂದು ಹೆಸರಿಡಲಾಗಿದೆ.
ಸಚಿವ ಎಂ.ಬಿ.ಪಾಟೀಲ್ ಅವರ ಹೇಳಿಕೆ
“ಕೆಂಪೇಗೌಡರ ಹೆಸರಿನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಬೆಂಗಳೂರಿನ ಸಂಪೂರ್ಣ ಮೆಟ್ರೋ ರೈಲು ಜಾಲಕ್ಕೆ ಬಸವೇಶ್ವರ ಅವರ ಹೆಸರಿಡುವ ಬಗ್ಗೆ ಸಲಹೆಗಳು ಬಂದಿವೆ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕ ರಾಜ್ಯದಲ್ಲಿ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿವೆ.
ಬಸವಣ್ಣ ಹೆಸರಿಡಿ ಎಂದ ಕೆಲವರು
ಹಲವರು ನಮ್ಮ ಮೆಟ್ರೋ ಹೆಸರಿನ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಮ್ಮತಿಸಿದ್ದಾರೆ. ಸಮಾನತೆಯ ಹರಿಕಾರ ಬಸವಣ್ಣನವರ ಹೆಸರನ್ನು ನಮ್ಮ ಮೆಟ್ರೋಗೆ ‘ನಮ್ಮ ಬಸವ’, ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ನಗರದ ಪ್ರಮುಖ ನಿಲ್ದಾಣ ಅಥವಾ ಜಂಕ್ಷನ್‌ಗೆ ಬಸವಣ್ಣ ಅವರ ಹೆಸರು ಇಡಬಹುದು.
ಸಾಮಾಜಿಕ ಜಾಲತಾಣದಲ್ಲಿ ವಿರೋಧ
”ನಮ್ಮ ಮತ್ತು ನಮ್ಮ ಮೆಟ್ರೋ ನಡುವೆ ಒಂದು ಭಾವನಾತ್ಮಕ ಸಂಬಂಧವಿದೆ. ನಮ್ಮ ಮೆಟ್ರೋ ಎಂದು ಹೇಳುವಾಗಲೇ ಅದು ನಮ್ಮದು ಎಂಬ ಭಾವನೆ ಮೂಡುತ್ತದೆ. ರಾಜಕೀಯ ಕಾರಣಕ್ಕಾಗಿ ಹೆಸರು ಬದಲಾವಣೆ ಮಾಡುವುದು ಬೇಡ. ಇದು ಸರಿಯಲ್ಲ. ಈಗಿರುವ ಹೆಸರು ಬೆಂಗಳೂರಿನ ಜನರಿಗೆ ತುಂಬಾ ಹತ್ತಿರವಾಗಿದೆ” ಎಂದು ಹಲವರು ಹೇಳಿದ್ದಾರೆ.
ಇನ್ನು ನಮ್ಮ ಮೆಟ್ರೋಗೆ ಯಾವುದೇ ಐತಿಹಾಸಿಕ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ಧರ್ಮಗುರುಗಳು, ಜಾತಿ ಪ್ರತಿನಿಧಿಸುವ ಹೆಸರುಗಳು ಸೇರಿದಂತೆ ಯಾವುದೇ ಹೆಸರುಗಳು ಬೇಡ. ನಮ್ಮ ಮೆಟ್ರೋ ಎಂಬ ಹೆಸರು ಭಾವನಾತ್ಮಕವಾಗಿ ಜನರೊಂದಿಗೆ ಬೆಸೆದುಕೊಂಡಿದೆ. ಅನಗತ್ಯವಾಗಿ ಹೆಸರು ಬದಲಾವಣೆ ಮಾಡೋದು ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಹೆಸರುಗಳನ್ನು ಬದಲಾಯಿಸುವ ಬದಲು, ಜನರ ಅನುಕೂಲಕ್ಕಾಗಿ ಸಾಧ್ಯವಾದಷ್ಟು ನಿರ್ಮಾಣ ಹಂತದಲ್ಲಿರುವ ಮಾರ್ಗಗಳನ್ನು ಬೇಗ ತೆರೆಯಲು ರಾಜ್ಯ ಸರ್ಕಾರ ಗಮನಹರಿಸಬೇಕು. ಈಗಿನ ಹೆಸರೇ ಉತ್ತಮವಾಗಿದ್ದು, ಮೆಟ್ರೋ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಕೆಲವರು ನಾಡಪ್ರಭು ಕೆಂಪೇಗೌಡ ಮೆಟ್ರೋ ಎಂದು ಹೆಸರಿಡಬೇಕು ಎಂದು ಹೇಳಿದ್ದರೆ, ಇನ್ನು ಕೆಲವರು ನಟ ಡಾ.ರಾಜ್‌ಕುಮಾರ್ ಅವರ ಹೆಸರಿಡಬೇಕು ಎಂಬ ಸಲಹೆ ನೀಡಿದ್ದಾರೆ. ಜತೆಗೆ ರಾಜಧಾನಿ ಬೆಂಗಳೂರಿನಲ್ಲಿ ಮೊದಲು ಮೆಟ್ರೋ ಕನಸು ಕಂಡಿದ್ದು, ನಟ ಶಂಕರನಾಗ್ ಅವರು ಹಾಗಾಗಿ, ಅವರ ಹೆಸರು ಇಡುವುದು ಉತ್ತಮ, ಅವರ ಹೆಸರನ್ನೇ ಇಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕೂಟರು, ಚಾಲುಕ್ಯರು, ಒಡೆಯರ್ ಹೆಸರಿಡಿ
ಇದಲ್ಲದೇ, ನಮ್ಮ ಮೆಟ್ರೋದಲ್ಲಿರುವ ಮಾರ್ಗಗಳಿಗೆ ಈಗ ಬಣ್ಣಗಳ ಹೆಸರಿದೆ. ಆ ಬಣ್ಣಗಳ ಬದಲು ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ಗಂಗರು, ಕದಂಬರು, ಒಡೆಯರ್ ಮತ್ತಿತರ ಕನ್ನಡ ರಾಜಮನೆತನಗಳ ಹೆಸರನ್ನು ಇಡಬೇಕು ಎಂದು ಮನವಿ ಮಾಡಲಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ”ನಮ್ಮ ಮೆಟ್ರೋಗೆ ಬಸವಣ್ಣ ಅವರ ಹೆಸರಿಡಬೇಕೆಂಬುದು ಕನ್ನಡಿಗರ ಆಸೆಯಾಗಿದೆ. ಇದನ್ನು ಸರ್ಕಾರ ಕಾರ್ಯಗತಗೊಳಿಸಬೇಕು. ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಹಲವಾರು ನಿಗಮಗಳಿಗೆ ಅನೇಕ ಮಹನೀಯರ ಹೆಸರು ಇಡಲಾಗಿದೆ. ಆದರೆ, ಜನಮನ್ನಣೆಗೊಳಿಸುವಂತೆ ಬಸವಣ್ಣನವರ ಹೆಸರು ಎಲ್ಲಿಯೂ ಇಡಲಾಗಿಲ್ಲ” ಎಂದು ಹೇಳಿದರು.
”ನಿತ್ಯ ಲಕ್ಷಾಂತರ ಜನರು ಓಡಾಡುವಂತಹ ದಿನನಿತ್ಯ ಆರ್ಥಿಕ ಪಗ್ರಗತಿಗೆ ಹೆಚ್ಚಿನ ಸಹಕಾರ ನೀಡುವಂತಹ ನಮ್ಮ ಮೆಟ್ರೋಗೆ ಬಸವೇಶ್ವರ ಅವರ ಹೆಸರಿಡಬೇಕು. ಇದು ಸೂಕ್ತ ಕೂಡ, ಸರ್ಕಾರ ಈ ಬಗ್ಗೆ ಯಾರ ಬಳಿಯೂ ಹೇಳಿಸಿಕೊಳ್ಳಬಾರದು, ಅದನ್ನು ಸರ್ಕಾರವೇ ಕಾರ್ಯಗತಗೊಳಿಸಬೇಕು” ಎಂದರು.
”ಬಸವಣ್ಣನವರನ್ನು ಎಲ್ಲ ಜನಾಂಗದವರು ಪ್ರೀತಿ ಮಾಡುತ್ತಾರೆ. ಎಲ್ಲ ಜನರು ಅವರ ತತ್ವಗಳನ್ನು ಗೌರವಿಸುತ್ತಾರೆ. ನಮ್ಮ ಮೆಟ್ರೋಗೆ ಹೆಸರಿಡುವುದರಿಂದ ಅವರಿಗೆ ಗೌರವ ನೀಡಿದಂತಾಗುತ್ತದೆ. ಬಸವಾದಿ ಶರಣರ ತತ್ವಗಳನ್ನು ಜನರಿಗೆ ತಲುಪಿಸುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶೀಘ್ರದಲ್ಲೇ 100 ರೂಪಾಯಿ ಗಡಿ ದಾಟುತ್ತಾ ಈರುಳ್ಳಿ ದರ? ಮಾರಾಟಗಾರರು ಏನಂತಾರೆ?
ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ್ ಈ ದಿನ.ಕಾಮ್ ಜತೆ ಮಾತನಾಡಿ, ”ಸದ್ಯ ಪ್ರಚಲಿತದಲ್ಲಿರುವ ನಮ್ಮ ಮೆಟ್ರೋಗೆ ಬಸವಣ್ಣ ಅವರ ಹೆಸರಿಡಬೇಕು ಎಂಬುದಕ್ಕೆ ನನ್ನದು ಯಾವುದೇ ವಿರೋಧವಿಲ್ಲ. ಆದರೆ, ರಾಜಕೀಯ ಲಾಲಸೆಯಿಂದ ಒಬ್ಬರ ಹೆಸರನ್ನು ನಮ್ಮ ಮೆಟ್ರೋಗೆ ಇಡಬೇಕು ಎಂಬುದು ಸರಿಯಲ್ಲ. ಈಗಾಗಲೇ, ಮೆಟ್ರೋಗಳು ರಾಷ್ಟ್ರದೆಲ್ಲೆಡೆ ಇವೆ. ನಾನಾ ರಾಷ್ಟ್ರಗಳಲ್ಲಿಯೂ ಮಾಸ್ಕೋ ಮೆಟ್ರೋ, ನ್ಯೂಯಾರ್ಕ್ ಮೆಟ್ರೋ, ಲಂಡನ್ ಮೆಟ್ರೋ ಇವೆ. ಅಲ್ಲಿ ಎಲ್ಲಿಯೂ ಯಾವುದೇ ಮಹನೀಯರ ಹೆಸರನ್ನು ಮೆಟ್ರೋ ಜಾಲಗಳಿಗೆ ನಾಮಕರಣ ಮಾಡಿಲ್ಲ. ಅಲ್ಲದೇ, ನಮ್ಮ ಭಾರತದಲ್ಲಿರುವ ದೆಹಲಿ ಮೆಟ್ರೋ, ಚೆನ್ನೈ ಮೆಟ್ರೋಗೂ ಕೂಡ ಯಾವುದೇ ಮಹನೀಯರ ಹೆಸರನ್ನು ಇಟ್ಟಿಲ್ಲ” ಎಂದರು.
”ಹೊರ ಪ್ರದೇಶದಿಂದ ಬಂದ ಜನರಿಗೆ ದೆಹಲಿ ಮೆಟ್ರೋ, ಲಂಡನ್ ಮೆಟ್ರೋ ಎಂದರೆ ತಿಳಿಯುತ್ತದೆ. ಆದರೆ, ಈಗ ನಗರದಲ್ಲಿ ‘ಬಸವಣ್ಣ ಮೆಟ್ರೋ’ ಎಂದು ನಾಮಕರಣ ಮಾಡಿದರೆ, ಅದು ಜನರಿಗೆ ತಲುಪುವುದು ಕಷ್ಟವಾಗಬಹುದು. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ಸ್ಥಳಗಳಿಗೆ ಬಸ್ ನಿಲ್ದಾಣಗಳಿಗೆ ಮಹನೀಯರು ಹೆಸರು ಇಡುವುದು ಪ್ರಾರಂಭವಾಯಿತು. ಇದು ಸರಿಯಲ್ಲ” ಎಂದು ತಿಳಿಸಿದರು.
”ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂದರೆ, ಎಲ್ಲರಿಗೂ ತಿಳಿಯುತ್ತದೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಜನರಿಗೆ ತಲುಪುವುದು ಕಷ್ಟವಾಗಬಹುದು. ಹಾಗೆಯೇ, ಬಸವೇಶ್ವರ ಮೆಟ್ರೋ ಎಂದರೆ ಜನರಿಗೆ ತಲುಪುವುದು ಕಷ್ಟವಾಗಬಹುದು. ಹೆಸರು ಬದಲಾವಣೆ ಮಾಡುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಮೆಟ್ರೋ ಅಥವಾ ರೈಲುಗಳ ವಿಚಾರದಲ್ಲಿ ಏನೇ ಬದಲಾವಣೆ ತರಬೇಕೆಂದರೂ ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ” ಎಂದು ವಿವರಿಸಿದರು.