ಮೈಕ್ರೋಸ್ಕೋಪು | ಹುಲಿ ಉಗುರು – ಕೆಲವು ರಹಸ್ಯಗಳು ಮತ್ತು ಹಲವು ಮೂಢನಂಬಿಕೆ

Date:

ಹುಲಿಯುಗುರು ಎಲ್ಲ ಉಗುರಿನಂತಲ್ಲ. ಅದರ ಒಳಭಾಗದಲ್ಲಿ ಮೂಳೆಯಂತಹ ಗಟ್ಟಿ ಭಾಗವಿರುತ್ತದೆ. ಈ ಮೂಳೆಯ ಮೇಲೆ, ಮುಂಚಾಚಿಕೊಂಡಂತೆ ಉಗುರು ಬೆಳೆಯುತ್ತದೆ. ಸವೆದುಹೋದ ಮೇಲ್ಭಾಗದಲ್ಲಿ ಕಾಲಕಾಲಕ್ಕೆ ಹೊಸ ಉಗುರಿನ ಪದರ ಬೆಳೆಯುತ್ತದೆ. ಹೀಗಾಗಿಯೇ, ಹುಲಿಯ ಹೆಜ್ಜೆಗಳಲ್ಲಿ ಉಗುರಿನ ಗುರುತು ಕಾಣುವುದಿಲ್ಲ


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

ಹುಲಿಯುಗುರು ಸುದ್ದಿಯಲ್ಲಿದೆ. ಫೇಸ್‌ಬುಕ್ಕಿನಲ್ಲಿ ಫೋಟೊ ಹಾಕಿದವರು ಈಗ ಆ ಫೋಟೊಗಳನ್ನು ಡಿಲೀಟ್‌ ಮಾಡುವುದರಲ್ಲಿ ಬಿಸಿ ಇದ್ದಾರಂತೆ. ಸೋಶಿಯಲ್‌ ಮೀಡಿಯಾದಲ್ಲಿನ ಫೋಟೊಗಳಲ್ಲಿ ಯಾರಾದರೂ ಹುಲಿಯುಗುರು ಅಥವಾ ಅಂತಹುದೇ ವನ್ಯಜೀವಿಯ ಅಂಗಗಳ ಫೋಟೊಗಳನ್ನು ಹಾಕಿದ್ದಾರೋ ಅಂತ ಜಾಲಾಡುವುದಕ್ಕೇ ಅರಣ್ಯ ಇಲಾಖೆಯವರು ಒಂದು ವಿಶೇಷ ತಂಡವನ್ನು ರಚಿಸಿದ್ದಾರಂತೆ… ಟೀವಿಯಲ್ಲಿ ಬರುತ್ತಿದ್ದ ಈ ಮಾತುಗಳನ್ನು ಕೇಳಿ ಅಮ್ಮ, “ಸದ್ಯ, ನಾನು ಆಗಲೇ ಅದನ್ನ ಕೊಟ್ಟುಬಿಟ್ಟೆ…” ಅಂದರು.

ಹೌದು… ಸುಮಾರು ಐವತ್ತು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿಯೂ ಮೂರ್ನಾಲ್ಕು ಹುಲಿಯುಗುರುಗಳು ಇದ್ದವು. ಅಪ್ಪ ಅದನ್ನು ತಂದಿಟ್ಟಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿಗೆ ಡ್ರೈವರ್‌ ಆಗಿದ್ದ ಅಪ್ಪನಿಗೆ ಮಹದೇಶ್ವರ ಬೆಟ್ಟ ಮೊದಲಾದ ಕಾಡುಮೇಡುಗಳಲ್ಲಿ ರಸ್ತೆ ಮಾಡುವಾಗ ರೋಲರ್‌ ಓಡಿಸುವ ಕಾಯಕವಿರುತ್ತಿತ್ತು. ಹತ್ತಾರು ದಿನಗಳು ಅಲ್ಲಿಯೇ ಉಳಿದುಕೊಳ್ಳಬೇಕಾಗುತ್ತಿತ್ತು. ಓಡಾಡಲು ಬಸ್ಸುಗಳೂ ಇರಲಿಲ್ಲ. ರಸ್ತೆಯೂ ಇರಲಿಲ್ಲ. ಸುತ್ತಮುತ್ತಲಿನ ಹಳ್ಳಿಗಳ ಜನರ ಜೊತೆ ಬೆರೆತು ಕೆಲಸ ಮಾಡುತ್ತಿದ್ದ ಕಾಲ. ಅಪ್ಪ ಬ್ರಾಹ್ಮಣರು ಅಂತಲೋ ಅಥವಾ ಎಲ್ಲರೊಂದಿಗೆ ಬೆರೆಯುವ ಅಪ್ಪನ ನಡವಳಿಕೆಯಿಂದಲೋ ಹಳ್ಳಿಗಳಿಂದ ಆಗಾಗ್ಗೆ ತರಕಾರಿ, ಸೌದೆ, ಬಿದಿರು ಕಳಲೆ, ಮಾಕಳಿ ಬೇರು ಮೊದಲಾದುವು ಉದರಿಯಾಗಿ ಸಿಗುತ್ತಿದ್ದವು. ಲಾರಿಯಲ್ಲಿ ಬರುವಾಗ ಜೊತೆಯಲ್ಲಿಯೇ ಹೊತ್ತು ತರುತ್ತಿದ್ದರು. ಗ್ಯಾಸ್‌, ಸೀಮೆಣ್ಣೆ ದೊರೆಯದ ಸಮಯದಲ್ಲಿ ಹೀಗೆ ಕಾಡಿನಿಂದ ತಂದ ಸೌದೆ ಹಲವು ತಿಂಗಳ ಉರುವಲಾಗಿ ಬರುತ್ತಿತ್ತು. ಇವುಗಳ ಜೊತೆಗೇ ಕೃಷ್ಣಾಜಿನ ಮತ್ತು ಹುಲಿಯುಗುರೂ ಬಂದಿತ್ತು.

ಅಮ್ಮನಿಗೆ ಆ ಹುಲಿಯುಗುರನ್ನು ತಾಯಿತ ಮಾಡಿ ನನ್ನ ಕೊರಳಿಗೆ ಹಾಕುವ ಉಮೇದು ಇತ್ತು. ಆದರೆ, ಚಿನ್ನ ಕೊಳ್ಳಲು ಕಾಸು ಇಲ್ಲದ್ದರಿಂದ ಯಾರೋ ಸಂಬಂಧಿಗಳಿಗೆ ಮಗ ಹುಟ್ಟಿದಾಗ, ಆ ಮಗುವಿಗಾದರೂ ಆಗಲಿ ಅಂತ ಕೊಟ್ಟುಬಿಟ್ಟರಂತೆ. ನಾನಂತೂ ಯಾವತ್ತೂ ಚಿನ್ನದ ಗೊಡವೆಗೆ ಹೋದವನಲ್ಲವಾದ್ದರಿಂದ ನನಗೆ ಅದು ನಷ್ಟ ಅಂತೇನೂ ಅನ್ನಿಸಲೇ ಇಲ್ಲ. ಈಗ ಬಿಡಿ… ಹುಲಿ ಕಾಣುವುದೂ ಇಲ್ಲ, ಹುಲಿಯುಗುರು ಸಿಗುವುದೂ ಇಲ್ಲ. ಹುಲಿಯುಗುರಿಗೆ ಐದು ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಅನಂತರ ಜೈಲಿಗೆ ಹೋದವರೊಬ್ಬರ ಸುದ್ದಿ ಐದು ವರ್ಷಗಳ ಹಿಂದೆ ಪ್ರಕಟವಾಗಿತ್ತು. ಈಗ ಇನ್ನೂ ದುಬಾರಿ ಆಗಿರಬಹುದು.

ಹುಲಿಯುಗುರಿನ ದಾಳಿಗಳ ಕತೆ ಕೇಳುವಾಗ, ಮನುಷ್ಯನ ಇಂತಹ ವಿಚಿತ್ರ ಬಯಕೆಗಳ ಬಗ್ಗೆ ಮತ್ತು ಅದರಿಂದ ಆದ ಲಾಭ-ನಷ್ಟಗಳ ಬಗ್ಗೆ ಅಚ್ಚರಿ ಮೂಡುತ್ತದೆ. ಉದಾಹರಣೆಗೆ, ಹೀಗೆ ವನ್ಯಜೀವಿಗಳ ಅಂಗಗಳ ಬಗ್ಗೆ ಇರುವ ಮೌಢ್ಯ ಮತ್ತು ಅದಕ್ಕಾಗಿ ನಡೆಯುವ ವ್ಯಾಪಾರಗಳು ವಿಜ್ಞಾನಕ್ಕೂ ನೆರವಾಗಿವೆ. ಕೇವಲ ನೂರು ವರ್ಷಗಳ ಹಿಂದೆ ಯುರೋಪು, ಅಮೆರಿಕದಲ್ಲಿ ಆನೆಯ ದಂತಕ್ಕೆ ಅಪಾರ ಬೇಡಿಕೆ ಇತ್ತು. ನಮ್ಮಲ್ಲಿಯೂ ರಾಜ-ಮಹಾರಾಜರುಗಳನ್ನು ಯುರೋಪಿಯನ್ನರು ಗೆಳೆಯರನ್ನಾಗಿಸಿಕೊಂಡದ್ದು ಇಂತಹ ವನ್ಯಜೀವಿಗಳ ಬೇಟೆಯ ಆಸೆಯಿಂದಲೇ ಎನ್ನಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಎಲ್ಲ ರಾಜರ ಚರಿತ್ರೆಯಲ್ಲಿಯೂ ಈ ವನ್ಯಜೀವಿಗಳ ಬೇಟೆ, ಅದಕ್ಕಾಗಿ ಅವರು ರಾಜ-ಮಹಾರಾಜರನ್ನು ಆಶ್ರಯಿಸುತ್ತಿದ್ದ ಸಂಗತಿಗಳಿವೆ.

1800ರ ಆಸುಪಾಸಿನಲ್ಲಿ ಶ್ರೀಲಂಕಾದಲ್ಲಿ ನಡೆದ ಘಟನೆ ಇದು. ಆನೆಗಳ ದಂತಕ್ಕೆ ಬಹಳ ಬೇಡಿಕ ಇತ್ತು. ಆಫ್ರಿಕಾದ ಆಚೆಗೆ ಆನೆಗಳು ಇದ್ದದ್ದು ಭಾರತ, ಶ್ರೀಲಂಕಾ, ಇಂಡೊನೇಷ್ಯಾ, ಮಯನ್ಮಾರುಗಳಲ್ಲಿ. ಶ್ರೀಲಂಕಾದ ಅಂದಿನ ಸರ್ಕಾರ ಆನೆಗಳ ದಂತವನ್ನು ರಫ್ತು ಮಾಡುತ್ತಿತ್ತು. ಅಂದು ಅಲ್ಲಿ ಬ್ರಿಟಿಷರ ಕಾಲವಿತ್ತು. ಇದ್ದಕ್ಕಿದ್ದ ಹಾಗೆ ಬೇಡಿಕೆ ಹೆಚ್ಚಿದಾಗ, ಸ್ಥಳೀಯರಿಗೆ ಆನೆಯ ತಲೆಗಳನ್ನು ತಂದರೆ ಇಂತಿಷ್ಟು ಹಣ ನೀಡುವುದಾಗಿ ಹೇಳಿತ್ತಂತೆ. ಮೂರೇ ವರ್ಷದಲ್ಲಿ ಆ ಪುಟ್ಟ ದ್ವೀಪರಾಷ್ಟ್ರದಲ್ಲಿ ಮೂರು ಸಾವಿರ ಆನೆಗಳನ್ನು ಕೊಂದು ದಂತಗಳನ್ನು ರಫ್ತು ಮಾಡಲಾಯಿತಂತೆ. ಪ್ರತಿವರ್ಷ ಒಂದು ಮಿಲಿಯನ್‌ ಟನ್ನುಗಳಷ್ಟು ದಂತ ಬಳಕೆಯಾಗುತ್ತಿತ್ತು. ಒಂದು ಟನ್ನು ದಂತಕ್ಕೆ ಏನಿಲ್ಲವೆಂದರೂ ಹತ್ತರಿಂದ ಇಪ್ಪತ್ತು ಆನೆಗಳ ಬಲಿ ಬೇಕು. ಇನ್ನು, ಮಿಲಿಯನ್‌ ಟನ್ನು ಎಂದರೆ ಲೆಕ್ಕ ಹಾಕಿಕೊಳ್ಳಿ!

ಈ ದಂತವನ್ನು ಶ್ರೀಮಂತರು ಸಿಂಗಾರಕ್ಕೆ ಬಳಸಿಕೊಳ್ಳುತ್ತಿದ್ದರು. ಮೈಸೂರಿನ ಅರಮನೆಯಲ್ಲಿ ಹೀಗೆ ದಂತದಿಂದ ಇನ್ಲೇ ಮಾಡಿದ ದೊಡ್ಡ-ದೊಡ್ಡ ಬಾಗಿಲುಗಳನ್ನು ಈಗಲೂ ನೋಡಬಹುದು. ಅಮೆರಿಕೆಯ ಶ್ರೀಮಂತರಿಗೆ ಇನ್ನೂ ಒಂದು ಹವ್ಯಾಸ ಇತ್ತು – ಬಿಲಿಯರ್ಡ್ಸ್‌ ಆಟ. ಭಾರವಾದ ಚೆಂಡುಗಳನ್ನು ತಯಾರಿಸಲು ಆನೆಯ ದಂತವನ್ನೇ ಬಳಸುತ್ತಿದ್ದರು. ನಯವಾದ, ಬೆಳ್ಳಗಿನ, ಭಾರೀ ವಸ್ತುವಾದ್ದರಿಂದ ಅದಕ್ಕೆ ಅಪಾರ ಬೇಡಿಕೆ ಇತ್ತು. ಶ್ರೀಲಂಕಾದಿಂದ ಆಮದಾಗುತ್ತಿದ್ದ ದಂತದ ಪ್ರಮಾಣ ಕಡಿಮೆಯಾದಾಗ, ಅಮೆರಿಕದಲ್ಲಿ ಈ ಚೆಂಡುಗಳ ಬೆಲೆ ದುಬಾರಿಯಾಯಿತು. ಬಿಲಿಯರ್ಡ್ಸ್‌ಪ್ರಿಯ ಶ್ರೀಮಂತನೊಬ್ಬ, ಬಿಲಿಯರ್ಡ್ಸ್‌ ಚೆಂಡು ತಯಾರಿಸಲು ದಂತದಂತೆಯೇ ಇರುವ ಬೇರೆ ವಸ್ತುವನ್ನು ಮಾಡಿಕೊಟ್ಟವರಿಗೆ ಹತ್ತು ಸಾವಿರ ಡಾಲರು ಬಹುಮಾನವನ್ನು ಘೋಷಿಸಿದ್ದ. ಇನ್ನೂರು ವರ್ಷಗಳ ಹಿಂದೆ ಈ ಮೊತ್ತ ಬಲು ಭಾರಿಯೇ. ಅದನ್ನು ಸಂಪಾದಿಸಬೇಕೆಂದು ಜಾನ್‌ ವೆಸ್ಲಿ ಹಯಾಟ್‌ ಎನ್ನುವ ನಿರುದ್ಯೋಗಿ ಹೊರಟನಂತೆ. ಅವನ ಪ್ರಯತ್ನಗಳ ಫಲವಾಗಿ ದಂತದಂತೆ ಬೆಳ್ಳಗಿನ, ಅದರಂತೆಯೇ ಕೆತ್ತಿ, ತಿದ್ದಬಲ್ಲ, ಉಳಿಯಾಡಿಸಿಕೊಳ್ಳಬಲ್ಲ ವಸ್ತುವೊಂದು ತಯಾರಾಯಿತು – ಅದುವೇ ಸೆಲ್ಯುಲಾಯಿಡ್‌, ಮೊದಲ ಪ್ಲಾಸ್ಟಿಕ್ಕು. ಸಿನಿಮಾಗೂ ಇದಕ್ಕೂ ನಂಟು ಇರುವುದು ಗೊತ್ತಷ್ಟೆ. ಹೀಗೆ, ಶ್ರೀಮಂತರ ಶೋಕಿಗಾಗಿ ಪತ್ತೆಯಾದ ಸೆಲ್ಯುಲಾಯಿಡ್‌ ಅನಂತರ ಅಂಥದ್ದೇ ಕೃತಕ ವಸ್ತುಗಳ ತಯಾರಿಕೆಗೆ ನಾಂದಿ ಹಾಡಿತು. ಅಂದಹಾಗೆ, ಸೆಲ್ಯುಲಾಯಿಡ್‌ ತಯಾರಿಸಿದ ವೆಸ್ಲಿ ಹಯಾಟನಿಗೆ ಬಹುಮಾನ ಸಿಗಲೇ ಇಲ್ಲ. ಏಕೆಂದರೆ, ಸೆಲ್ಯುಲಾಯಿಡ್‌ ಬೆಳ್ಳಗೆ ಇದ್ದರೂ, ದಂತದಷ್ಟು ನಯವಾಗಿರಲಿಲ್ಲ. ಸೆಲ್ಯುಲಾಯಿಡಿನ ಬಳಕೆ ಅನಂತರ ವ್ಯಾಪಕವಾದರೂ ಹಯಾಟನಿಗೆ ಲಾಭವಾಗಲಿಲ್ಲ.

ಹುಲಿಯುಗುರುಗಳನ್ನು ಎಷ್ಟು ಹಿಂದಿನಿಂದ ಬಳಸುತ್ತಿದ್ದರು? ಇದಕ್ಕೆ ಉತ್ತರವಿಲ್ಲ ಹುಲಿಯ ವಿಕಾಸ ಸುಮಾರು ಇಪ್ಪತ್ತು ಲಕ್ಷ ವರ್ಷಗಳ ಹಿಂದೆ ಆಗಿರಬೇಕೆಂಬ ಅಂದಾಜಿದೆ. ಮನುಷ್ಯರ ವಿಕಾಸವಾಗಿದ್ದು ಸುಮಾರು ಹತ್ತು ಲಕ್ಷ ವರ್ಷಗಳ ಹಿಂದೆ. ಅಂದರೆ, ಮನುಷ್ಯರು ಭೂಮಿಯ ಮೇಲೆ ಕಾಣಿಸಿಕೊಳ್ಳುವ ಹೊತ್ತಿಗಾಗಲೇ ಹುಲಿ ಇಲ್ಲಿತ್ತು. ಭಾರತದಲ್ಲಿ ಹುಲಿ ಕಾಣಿಸಿಕೊಂಡ ಬಗ್ಗೆ ಇರುವ ದಾಖಲೆ ಹತ್ತು ಸಾವಿರ ವರ್ಷಗಳಷ್ಟು ಹಳೆಯದು. ಚೀನಾ, ಬರ್ಮಾ, ಇಂಡೊನೇಷ್ಯಾಗಳಲ್ಲಿ ಇದಕ್ಕೂ ಹಿಂದೆ ಹುಲಿ ಇದ್ದ ದಾಖಲೆಗಳಿವೆ. ಆದರೆ, ಸುಲಭವಾಗಿ ಸಾಕಲು ಆಗದ ಹದ್ದು, ಗಿಡುಗಗಳ ಪಂಜಗಳನ್ನೂ ಹೀಗೆಯೇ ಕೆಲವು ಬುಡಕಟ್ಟು ಜನಾಂಗದವರು ಧರಿಸುತ್ತಿದ್ದುದು ದಾಖಲೆಯಲ್ಲಿದೆ. ಅಮೆರಿಕದಲ್ಲಿ ಸುಮಾರು 4,500 ವರ್ಷಗಳ ಹಿಂದೆ ಇದ್ದ ಮಹಿಳೆಯ ಕೊರಳಿನಲ್ಲಿ ಹುಲಿ ಜಾತಿಯ ದೊಡ್ಡ ಬೆಕ್ಕೊಂದರ ಉಗುರು ಇದ್ದುದು ಪತ್ತೆಯಾಗಿದೆ.

ಹುಲಿಯ ಉಗುರು ವಿಶೇಷ ಎನ್ನಿಸುವುದಕ್ಕೆ ಕಾರಣ ಅದರ ಮೊನಚು ತುದಿ. ಸಾಮಾನ್ಯವಾಗಿ ಮಾಂಸಾಹಾರಿ ಅಥವಾ ‘ಕಾರ್ನಿವೋರ್‌’ ಎನ್ನುವ ಎಲ್ಲ ಪ್ರಾಣಿಗಳಲ್ಲಿಯೂ ಪಂಜಗಳಿರುತ್ತವೆ. ಪಂಜ ಎಂದರೆ ಉದ್ದನೆಯ ಉಗುರುಗಳು ಇರುವ ಪಾದ ಎನ್ನಿ. ನಮ್ಮಲ್ಲಿ ಕೆಲವರು ಶೋಕಿಗೆ ಉದ್ದನೆಯ ಉಗುರು ಬೆಳೆಸಿದರೂ ಅದನ್ನು ಪಂಜ ಎನ್ನಲಾಗುವುದಿಲ್ಲ. ಏಕೆಂದರೆ, ಪಂಜದ ಉಗುರಿನಷ್ಟು ಶಕ್ತಿ ಅವಕ್ಕೆ ಇರುವುದಿಲ್ಲ, ಜೋರಾಗಿ ಹೊಡೆದರೆ ಮುರಿದೇಹೋಗುವಂತೆ ಇರುತ್ತವೆ. ಹುಲಿಯ ಅಥವಾ ಗಿಡುಗದ ಪಂಜಗಳು ಹಾಗಲ್ಲ! ಅವು ಬಲು ಗಟ್ಟಿ. ಎಷ್ಟು ಗಟ್ಟಿ ಎಂದರೆ, ತಮಗಿಂತ ದುಪ್ಪಟ್ಟು ಗಟ್ಟಿ ಇರುವ ಮೂಳೆಯನ್ನೂ ಅವು ಗೀರಬಲ್ಲುವು. ಈ ಮೊನಚು ಮತ್ತು ಪಂಜದ ಬಲವೇ ಹುಲಿಯ ಪಂಜವನ್ನು ಅದ್ಭುತ ಆಯುಧವನ್ನಾಗಿಸಿದೆ.

ಹುಲಿಯುಗುರು ಎಂದರೆ ಇನ್ನೇನಲ್ಲ – ಒಂದಾನೊಂದು ಕಾಲದಲ್ಲಿ ಉರಗಗಳು ಅಂದರೆ, ಹಲ್ಲಿಗಳಲ್ಲಿ ಇದ್ದ ಹುರುಪೆಗಳೇ ಮಾರ್ಪಾಟಾಗಿ ಆಗಿರುವಂತಹ ವಸ್ತು. ಹಲ್ಲಿ, ಹಾವುಗಳ ಪೂರ್ವಜರಲ್ಲಿ ಇದ್ದಂತಹ ಹುರುಪೆಗಳು ಹಕ್ಕಿಗಳು, ಸ್ತನಿಗಳಲ್ಲಿ ಗರಿಗಳಾಗಿ, ರೋಮಗಳಾಗಿ, ಕೊಂಬು, ಗೊರಸು ಹಾಗೂ ಉಗುರುಗಳಾಗಿ ನಾನಾ ಆಕಾರ ತಾಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಇದು ಕೇವಲ ಊಹೆಯಷ್ಟೇ ಅಲ್ಲ. ಈ ಎಲ್ಲ ವಸ್ತುಗಳ ಮೂಲವೂ ‘ಕೆರಾಟಿನ್‌’ ಎನ್ನುವ ಒಂದು ಪ್ರೊಟೀನು. ಅಪ್ಪಟ ಕೆರಾಟಿನ್‌ ಪಾರದರ್ಶಕವಾದ ವಸ್ತು. ಕೂದಲಿನಲ್ಲಿ ಅದರ ಜೊತೆಗೆ ಒಂದಿಷ್ಟು ಬಣ್ಣವೂ ಕೂಡುವುದರಿಂದ ಕಪ್ಪಗೆ, ಕೆಂಚಾಗಿ ಇಲ್ಲವೇ ಕಂದಾಗಿ ಕಾಣುತ್ತದೆ. ಬಣ್ಣವಿಲ್ಲದಿದ್ದಾಗ ಉಗುರಿನಂತೆಯೇ ಬಣ್ಣದ ನರೆಗೂದಲು ತೋರುತ್ತದೆ. ಇತ್ತೀಚೆಗೆ ಈ ಕೊಲಾಜೆನ್ನಿನಿಂದಾಗಿ ಉದುರಿದ, ಇಲ್ಲವೇ ಕತ್ತರಿಸಿದ ನಮ್ಮ ಕೂದಲಿಗೂ ಬೆಲೆ ಬಂದಿದೆ, ವ್ಯಾಪಾರವಾಗುತ್ತಿದೆ.

ಕೂದಲಿನದೇ ವಸ್ತುವಾದರೂ ಹುಲಿಯುಗುರೇಕೆ ಅಷ್ಟು ಶಕ್ತಿಶಾಲಿ? ಇದು ವಿಕಾಸದ ಮಾಯೆ ಎನ್ನಬೇಕು. ಹುಲಿ, ಬೆಕ್ಕು, ಚಿರತೆಯಂತಹ ವ್ಯಾಘ್ರಗಳ ಉಗುರುಗಳು ವಿಶೇಷ. ಇವು ಸಾಮಾನ್ಯವಾಗಿ ಹೊರಗೆ ಕಾಣುವುದೇ ಇಲ್ಲ. ಮೃದುವಾದೊಂದು ಚೀಲದೊಳಗೆ ಅಡಗಿ ಕುಳಿತಿರುತ್ತವೆ. ಪಂಜವನ್ನು ಎತ್ತಿ ಬೀಸುವಾಗಷ್ಟೇ ಇವು ಹೊರಚಾಚಿಕೊಳ್ಳುತ್ತವೆ. ನಾಯಿ, ನರಿಗಳಲ್ಲಿಯೂ ಪಂಜಗಳಿವೆ. ಆದರೆ, ಅವು ಸದಾ ತೆರೆದುಕೊಂಡೇ ಇರುವುದರಿಂದ ನೆಲಕ್ಕೆ ಒರಸಿಕೊಂಡು ಮೊಂಡಾಗಿಬಿಡುತ್ತವೆ. ಹುಲಿಯ ಉಗುರು ಹಾಗಲ್ಲ. ಅದು ಸದಾ ಮೊನಚೇ! ಅದರ ಶಕ್ತಿಗೆ ಬಾಗಿದ ಅದರ ರಚನೆಯೇ ಮೂಲವಂತೆ. ಹುಲಿಯುಗುರು ಬೆಳೆಯುವಾಗ ಮೇಲ್ಭಾಗ ತಳಭಾಗಕ್ಕಿಂತಲೂ ಸ್ವಲ್ಪ ವೇಗವಾಗಿ ಬೆಳೆಯುತ್ತದೆ. ಬುಡದಲ್ಲಿ ಹೆಚ್ಚು, ತುದಿಯಲ್ಲಿ ಕಡಿಮೆ ಬೆಳೆಯುತ್ತದೆ. ಹೀಗೆ ಅದು ಬಾಗಿದ ಉಗುರಾಗುತ್ತದೆ. ಬಾಗಿ, ವಕ್ರವಾಗಿರುವ ಆಕಾರದಿಂದಾಗಿಯೇ ಹುಲಿಯುಗುರು ತಾಯತಗಳಲ್ಲಿ ಬಳಕೆಯಾಗುತ್ತದೆಯಷ್ಟೆ.

ಶಕ್ತಿ ಬರಲೆಂದು ತಾಯತ ಧರಿಸುತ್ತಿದ್ದ ರಾಜರ ಬಳಿ ‘ವಜ್ರನಖ’ ಎನ್ನುವ ಆಯುಧವಿರುತ್ತಿತ್ತು. ಹುಲಿಯ ಪಾದದ ಅಣಕವಾಗಿತ್ತು ಇದು. ಮುಷ್ಠಿಯೊಳಗೆ ಅಡಗಿಸಿಕೊಳ್ಳಬಹುದಿತ್ತು. ಆಗ ಐದೂ ಬೆರಳುಗಳಿಗೆ ಉಂಗುರು ಧರಿಸಿದಂತೆ ತೋರುತ್ತಿದ್ದ ಅದು, ಮುಷ್ಠಿ ಬಿಡಿಸಿದ ಕೂಡಲೇ ಚೂಪಾದ ಆಯುಧವಾಗುತ್ತಿತ್ತು. ಶಿವಾಜಿ ಮಹಾರಾಜ ತನ್ನ ಶತ್ರುವನ್ನು ಇದರಿಂದಲೇ ಕೊಂದ ಎನ್ನುತ್ತಾರೆ. ಇಂತಹ ಆಯುಧಗಳನ್ನು ವಿವಿಧ ಸಂಗ್ರಹಾಲಯಗಳಲ್ಲಿ ನೋಡಬಹುದು. ಹುಲಿಯ ಪಂಜದಂತೆಯೇ ಬಾಗಿದ, ಮೊನಚಾದ ಉಕ್ಕಿನ ಕೊಂಡಿಗಳನ್ನು ಅದರಲ್ಲಿ ಅಳವಡಿಸಿರುತ್ತಾರೆ. ಹುಲಿಯುಗುರಿನ ಪ್ರೇರಣೆಯಿಂದ ಬಂದದ್ದು ಇದು. ಹಾಗಂತ ನಿಜವಾದ ಹುಲಿಯುಗುರನ್ನು ಆಯುಧವಾಗಿ ಯಾರಾದರೂ ಬಳಸಿದ್ದರೋ ಎನ್ನುವುದಕ್ಕೆ ಪುರಾವೆ ಇಲ್ಲ.

ಹುಲಿಯುಗುರು ಎಲ್ಲ ಉಗುರಿನಂತಲ್ಲ. ಅದರ ಒಳಭಾಗದಲ್ಲಿ ಮೂಳೆಯಂತಹ ಗಟ್ಟಿಯಾದ ಭಾಗವಿರುತ್ತದೆ. ಈ ಮೂಳೆಯ ಮೇಲೆ, ಮುಂಚಾಚಿಕೊಂಡಂತೆ ಉಗುರು ಬೆಳೆಯುತ್ತದೆ. ಸವೆದುಹೋದ ಮೇಲ್ಭಾಗದಲ್ಲಿ ಕಾಲಕಾಲಕ್ಕೆ ಹೊಸ ಉಗುರಿನ ಪದರ ಬೆಳೆಯುತ್ತದೆ. ಹೀಗೆ, ಹಲವಾರು ಪದರಗಳು ಹುಲಿಯುಗುರಿನಲ್ಲಿ ಇರುತ್ತವೆ. ಹೀಗಾಗಿಯೇ, ಹುಲಿಯ ಹೆಜ್ಜೆಗಳಲ್ಲಿ ಉಗುರಿನ ಗುರುತು ಕಾಣುವುದಿಲ್ಲ. ಚೀಲದೊಳಗೆ ಅಡಗಿರುವ ಉಗುರು ಸವೆಯದೆ ಇರುವುದರಿಂದ, ಮರ, ಬೊಡ್ಡೆಗಳನ್ನು ಕೆರೆದು ಬೆಕ್ಕು, ಕರಡಿಯಂತಹ ವ್ಯಾಘ್ರಗಳು ಪಂಜಗಳನ್ನು ಮೊನಚಾಗಿಸಿಕೊಳ್ಳುವುದೂ ಉಂಟು. ಮರಗಳ ಮೇಲಿರುವ ಕರಡಿಯ ಪಂಜದ ಗುರುತನ್ನು ಗಮನಿಸಿ, ಅವುಗಳ ಇರುವನ್ನು ವಿಜ್ಞಾನಿಗಳು ತಿಳಿಯುತ್ತಾರೆ. ಆದರೆ, ಹುಲಿಯ ಉಗುರು ಹಾಗಲ್ಲ. ಅದು ಸ್ವತಃ ಸವೆದು ಸದಾ ಮೊನಚಾಗಿಯೇ ಇರುತ್ತದೆ.

ಹುಲಿಗೆ ಈ ಉಗುರು ಬಹಳ ಮುಖ್ಯ. ಬೇಟೆಯ ಸಮಯದಲ್ಲಿ ಪಂಜವನ್ನು ಬಳಸಿಕೊಂಡು ಬೇಟೆಯನ್ನು ಹಿಡಿಯುತ್ತದೆ. ಬೆಕ್ಕಿನ ಜಾತಿಯದ್ದೇ ಆಗಿದ್ದರೂ ಹುಲಿ ಇಲಿಯನ್ನು ಹಿಡಿಯುವುದಿಲ್ಲ. ಅದರ ಬೇಟೆ ಏನಿದ್ದರೂ ತನಗಿಂತ ದೊಡ್ಡದಾದ ಎಮ್ಮೆ ಅಥವಾ ತನ್ನ ಅರ್ಧದಷ್ಟಾದರೂ ಇರುವ ಜಿಂಕೆಗಳಷ್ಟೆ. ದೊಡ್ಡ ಎಮ್ಮೆಯ ಮೇಲೆರಗಿ ಅದನ್ನು ಹಿಡಿಯುವಾಗ, ತಬ್ಬಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹುಲಿ ಬೇಟೆಯ ಬೆನ್ನ ಮೇಲೆ ಎರಗಿ, ಅಲ್ಲಿಂದ ಜೋತಾಡುತ್ತದೆ. ತನ್ನ ಭಾರವನ್ನು ಬೇಟೆ ಹೊರಲಾರದೆ ಕೆಳಗೆ ಬೀಳುವವರೆಗೂ ಸೆಣಸುತ್ತದೆಯಷ್ಟೆ. ಈ ಸಂದರ್ಭದಲ್ಲಿ ಅದು ಬೇಟೆಯ ಬೆನ್ನಿನೊಳಗೆ ಸಿಲುಕಿದ ಉಗುರುಗಳಿಂದಷ್ಟೆ ಜೋತಾಡಬೇಕು. ನೀವು ಕೇವಲ ನಿಮ್ಮ ಉಗುರಿನಿಂದ ದೊಡ್ಡದೊಂದು ಮೂಟೆಯನ್ನು ಎತ್ತಿದಂತೆ ಇದು. ಹುಲಿಯ ಉಗುರು ಮುರಿಯುವುದೂ ಇಲ್ಲ. ಅದರ ಬೇಟೆಗೆ ಸುಲಭವಾಗಿ ಬಿಡುಗಡೆಯೂ ಸಿಗುವುದಿಲ್ಲ. ಉಗುರಿನ ಬಲವಷ್ಟೇ ಅಲ್ಲ, ಅದರ ರಚನೆಯೂ ಬೇಟೆಯ ಮೈಯಲ್ಲಿ ಆಳವಾಗಿ ಹುದುಗಿ ಕೂರಲು ಅನುಕೂಲಿ. ಹೀಗಾಗಿ, ಈ ಪಂಜ ಹುಲಿಗೆ ಅತ್ಯವಶ್ಯ.

ಹುಲಿಯುಗುರು, ದಂತ, ಅಪರೂಪದ ಹಕ್ಕಿಗಳ ಗರಿಗಳು ಶೋಕಿಯ ವಸ್ತುಗಳಾಗಿ, ಸಂಪತ್ತಿನ ಸಂಕೇತವಾಗಿ ಹಾಗೂ ಅಧಿಕಾರದ, ಬಲದ ಗುರುತಾಗಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿವೆ. ಆಫ್ರಿಕಾ, ನ್ಯೂಜಿಲ್ಯಾಂಡಿನ ಕೆಲವು ಬುಡಕಟ್ಟು ಜನಾಂಗದ ಮಾಂತ್ರಿಕರು, ವೈದ್ಯರು ಹಾಗೂ ಮುಖಂಡರುಗಳು ಇಂತಹ ವಿಶೇಷ ವಸ್ತುಗಳನ್ನು ಧರಿಸುತ್ತಿದ್ದರು. ಬಹುಶಃ ಎಲ್ಲ ಜನಾಂಗಗಳಲ್ಲಿಯೂ ಇವುಗಳನ್ನು ಧರಿಸುವುದು ಶ್ರೇಣೀಕರಣದ ಕುರುಹಾಗಿದ್ದಿರಬೇಕು. ಇಂದಿಗೂ ಅಪ್ಪಟ ಹುಲಿಯುಗುರನ್ನು ಕಳ್ಳತನದಿಂದಲಾದರೂ ಕೊಂಡು ಧರಿಸುವವರನ್ನು ಗಮನಿಸಿದರೆ… ಇದು ಶೋಕಿಯಲ್ಲ, ಅಧಿಕಾರ ಅಥವಾ ಇತರರನ್ನು ದೂರವಿಟ್ಟು ನೋಡುವವರ ನಡವಳಿಕೆ ಎಂದು ಹೇಳಬಹುದಷ್ಟೆ. ವಿಷಾದ ಎಂದರೆ, ಈ ಹುಲಿಯುಗುರು, ಜಿಂಕೆಯ ಚರ್ಮ, ಹುಲಿಯ ಚರ್ಮ ಇವೆಲ್ಲಕ್ಕೂ ಕೊಡುವಷ್ಟು ಬೆಲೆಯನ್ನು ನಾವು ಪೂಜಿಸುವ ಗೋವಿನ ತೊಗಲಿಗೂ ಕೊಡುವುದಿಲ್ಲ ಎನ್ನುವುದು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವರ್ತಮಾನ | ಕನ್ನಡ ಬರಹಗಾರರನ್ನು ಬೆಳೆಸಬೇಕು ನಿಜ; ಆದರೆ ಪುಸ್ತಕ ಪ್ರಕಾಶಕರು ಏನಾಗಬೇಕು?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...