ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 73ನೇ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಮಗೂ ರಾಜ್ಯಪಾಲರಿಂದಲೇ ಪ್ರಮಾಣ ಪತ್ರ ಕೊಡಿಸಿ ಎಂದು ಪಿಎಚ್‌ಡಿ ಪದವೀಧರರು ಪ್ರತಿಭಟನೆ ಮಾಡಿದ್ದಾರೆ. ಪಿಎಚ್‌ಡಿ ಪದವಿ ಪ್ರದಾನ ಮಾಡದೇ ಘಟಿಕೋತ್ಸವ ಅಂತ್ಯ ಮಾಡಲಾಗಿದೆ.
ಕರ್ನಾಟಕ ವಿಶ್ವ ವಿದ್ಯಾಲಯ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವೀಧರರು, ನಮಗೂ ರಾಜ್ಯಪಾಲರಿಂದಲೇ ಪ್ರಮಾಣ ಪತ್ರ ಕೊಡಿಸಿ ಎಂದು ಪಟ್ಟು ಹಿಡಿದಿದು ಪ್ರತಿಭಟನೆ ಮಾಡಿದ್ದಾರೆ. ಹಾಗಾಗಿ ಪಿಎಚ್‌ಡಿ ಪದವಿ ಪ್ರದಾನ ಮಾಡದೇ ಘಟಿಕೋತ್ಸವ ಅಂತ್ಯ ಮಾಡಲಾಯಿತು. ಮಧ್ಯಾಹ್ನದ ಬಳಿಕ ಪಿಎಚ್‌ಡಿ ಕೊಡೋದಾಗಿ ಕುಲಪತಿ ಸಮಜಾಯಿಷಿ ನೀಡಿದ್ದರು. ರಾಜ್ಯಪಾಲರ ಭಾಷಣದ ಬಳಿಕವೂ ಕಾರ್ಯಕ್ರಮ ಮುಂದುವರೆದಿದ್ದು, 263 ಜನರಿಗೆ ಪಿಎಚ್‌ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಿದ್ದಾರೆ.
ಕರ್ನಾಟಕ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಕೋರ್ಸ್‌ನಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಸರಲ್ಲಿ ಈ ವರ್ಷದಿಂದ ಚಿನ್ನದ ಪದಕ ದತ್ತಿ ಇಟ್ಟಿದೆ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ದಾದಾಗೌಡ ಪಾಟೀಲಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಚಿನ್ನದ ಪದಕ ಪ್ರದಾನ ಮಾಡಿದರು.
254 ಸ್ವರ್ಣ ಪದಕಗಳನ್ನು 109 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ. 49 ಪಾರಿತೋಷಕ, 62 ಶಿಷ್ಯವೇತನ, 73 ರ್ಯಾಂಕ್ ಹಾಗೂ 263 ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಪುತ್ರರಾಗಿರುವ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಮಾಜ ಸೇವಾ ಕ್ಷೇತ್ರದಲ್ಲಿ ರವಿಶಂಕರ ಭೋಪಾಳಪುರ ಹಾಗೂ ಅರ್ಚನಾ ಸುರಾನಾರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.