ಈ ದಿನ ಸಂಪಾದಕೀಯ | ಎಲ್ಲ ಭಯೋತ್ಪಾದಕರೂ ಮುಸ್ಲಿಮರಲ್ಲ ಎನ್ನುವ ಸತ್ಯವನ್ನು ನಂಬದವರು

Date:

Advertisements

ಅಕ್ಟೋಬರ್ 29ರಂದು ಕೇರಳದ ಕಲಮಶ್ಯೆರಿಯಲ್ಲಿ ನಡೆದಿರುವ ಬಾಂಬ್ ಸ್ಫೋಟ ಹಲವು ಪ್ರಶ್ನೆಗಳನ್ನು ದೇಶದ ಜನರ ಮುಂದಿಟ್ಟಿದೆ. ಈ ಬಾಂಬ್ ಸ್ಫೋಟಕ್ಕೆ ಕಾರಣ ಯಾರು ಎನ್ನುವ ಬಗ್ಗೆ ಪೊಲೀಸರು ಇನ್ನೂ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ. ಅಷ್ಟರಲ್ಲೇ ಸ್ವಯಂಘೋಷಿತ ದೇಶಭಕ್ತರು ತಮ್ಮ ಅಜೆಂಡಾ ಜಾರಿಗೆ ಸನ್ನದ್ಧರಾಗಿ ಅಖಾಡಕ್ಕಿಳಿದಿದ್ದಾರೆ. ಆ ಘಟನೆ ಭಾರತದಲ್ಲಿ ಮತ್ತು ವಿಶ್ವದಲ್ಲಿ ಮುಸ್ಲಿಮರನ್ನು ಹೇಗೆ ನೋಡಲಾಗುತ್ತಿದೆ ಎನ್ನುವ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.

ವಾಸ್ತವವಾಗಿ, ಅ.29ರಂದು ಕಲಮಶ್ಯೆರಿಯಲ್ಲಿ ನಡೆಯುತ್ತಿದ್ದದ್ದು ‘ಯಹೋವನ ಸಾಕ್ಷಿಗಳು’ ಪಂಥದ ಕಾರ್ಯಕ್ರಮ. ಮೂರು ದಿನಗಳ ಸಮಾವೇಶದ ಕೊನೆಯ ದಿನ ಸುಮಾರು 2,000 ಜನ ಭಾಗವಹಿಸಿದ್ದ ಸಭೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ತಕ್ಷಣವೇ ಸ್ವಘೋಷಿತ ಹಿಂದೂ ರಕ್ಷಕರು ಹಾಗೂ ಗೋಧಿ ಮೀಡಿಯಾದವರು ಘಟನೆಯ ಬಗ್ಗೆ ಸುಳ್ಳುಗಳನ್ನು ಹಬ್ಬಿಸತೊಡಗಿದರು. ನಿದರ್ಶನಕ್ಕೆ, ಕನ್ನಡದ ‘ಪವರ್ ಟಿವಿ’ ಬಾಂಬ್ ಸ್ಫೋಟದ ವರದಿ ಮಾಡುವಾಗ ಘಟನೆಗೆ ಸಂಬಂಧ ಪಡದ ಟೋಪಿ ಹಾಕಿದ ಮುಸ್ಲಿಂ ವ್ಯಕ್ತಿಯೊಬ್ಬರ ಫೋಟೋ ಬಳಸಿ ‘ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು’ ಎಂದು ಶೀರ್ಷಿಕೆ ನೀಡಿತ್ತು.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಸುರೇಂದ್ರನ್ ಕೂಡ ಇಂಥದ್ದೇ ಆರೋಪ ಮಾಡಿದ್ದಾರೆ. ‘ಸ್ಫೋಟದ ಹಿಂದೆ ಮುಸ್ಲಿಂ ಸಂಘಟನೆಗಳಿವೆ’ ಎನ್ನುವುದು ಅವರ ಪರೋಕ್ಷ ಅನಿಸಿಕೆಯಾಗಿತ್ತು. ಕರ್ನಾಟಕದ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರೂ ಇಂಥದ್ದೇ ಮಾತಾಡಿದ್ದಾರೆ. ಅವರು ಎಕ್ಸ್‌ನಲ್ಲಿ ಈ ಬಗ್ಗೆ ಬರೆಯುತ್ತಾ, ‘ದೇಶದಲ್ಲಿ ಬಾಂಬ್ ಸ್ಫೋಟಗಳಿಗೆ ವಿರಾಮವಿತ್ತು. ಕಾಂಗ್ರೆಸ್ ಮತ್ತು ಸಿಪಿಎಂನಿಂದ ದಶಕಗಳ ಕಾಲದ ಓಲೈಕೆಯ ಮತ ಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ. ಪರಿಣಾಮವಾಗಿ ಭಯೋತ್ಪಾದನೆಯನ್ನು ನಾವು ನಮ್ಮ ಮನೆ ಬಾಗಿಲಿಗೆ ಆಹ್ವಾನಿಸಿದ್ದೇವೆ. ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ತನಿಖೆಯ ವಿವರಗಳು ಬರುವವರೆಗೆ ಕಾಯಬೇಕು ಎನ್ನುವ ಸಾಮಾನ್ಯ ಜ್ಞಾನವೂ ನಿವೃತ್ತ ಐಪಿಎಸ್‌ ಅಧಿಕಾರಿಗೆ ಇಲ್ಲದೇ ಹೋಗಿದ್ದು ವಿಚಿತ್ರ.

Advertisements

ಇವರೆಲ್ಲರ ಅಜೆಂಡಾ ಒಂದೇ ಆಗಿತ್ತು; ಇಸ್ರೇಲ್ ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಕಲಮಶ್ಯೆರಿ ಘಟನೆ ನಡೆದಿದೆ ಮತ್ತು ಬಾಂಬ್ ಇಟ್ಟವರು ಮುಸ್ಲಿಮರು ಎಂದು ಪ್ರಚಾರ ಮಾಡುವುದು. ಕಲಮಶ್ಯೆರಿಯ ಯಹೂದಿಗಳೇ ಸ್ಫೋಟದ ಗುರಿಯಾಗಿತ್ತು ಎಂದು ತಪ್ಪು ಮಾಹಿತಿಯನ್ನೂ ಹರಡಲಾಗಿದೆ. ‘ಯಹೋವನ ಸಾಕ್ಷಿಗಳು’ ಒಂದು ಪ್ರತ್ಯೇಕವಾದ ಕ್ರಿಶ್ಚಿಯನ್ ಪಂಗಡವಾಗಿದ್ದರೂ ಮತ್ತು ಅವರಿಗೆ ಯಹೂದಿಗಳೊಂದಿಗೆ ಯಾವುದೇ ಸಂಬಂಧ, ಸಾಮ್ಯತೆ ಹೊಂದಿಲ್ಲದಿದ್ದರೂ ಹಲವಾರು ಅಂತರ್ಜಾಲ ಪ್ರಚಾರಕರು ಕಲಮಶ್ಯೆರಿ ಸಭೆಯನ್ನು ಯಹೂದಿ ಪ್ರಾರ್ಥನಾ ಕೂಟವೆಂದು ಬಿಂಬಿಸಲು ಪ್ರಯತ್ನಿಸಿದರು. ಈ ಸ್ಫೋಟವನ್ನು ಜಿಹಾದ್‌ನ ಭಾಗವಾಗಿ ಬಿಂಬಿಸಲಾಯಿತು. ವಾಸ್ತವ ಎಂದರೆ, ಕಲಮಶ್ಯೆರಿಯಲ್ಲಿ ಯಾರೂ ಯಹೂದಿಗಳಿಲ್ಲ. ಅಲ್ಲಿಗೆ 28 ಕಿಮೀ ದೂರದ ಮಟ್ಟನಶ್ಯೆರಿ ಎಂಬಲ್ಲಿ 26 ಮಂದಿ ಯಹೂದಿಗಳಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷಕ್ಕೂ ಕಲಮಶ್ಯೆರಿ ಘಟನೆಗೂ ಯಾವ ಸಂಬಂಧವೂ ಇಲ್ಲ. ಆದರೂ ಕೇರಳದ ಮುಸ್ಲಿಂ ಪ್ರಾಬಲ್ಯದ ಮಲಪ್ಪುರಂ ಜಿಲ್ಲೆಯಲ್ಲಿ ಹಿಂದಿನ ದಿನ ನಡೆದ ಪ್ಯಾಲೆಸ್ತೀನ್ ಐಕಮತ್ಯ ಕೂಟದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾಜಿ ಹಮಾಸ್ ನಾಯಕ ಖಲೀದ್ ಮಶಾಲ್ ಹಾಜರಿದ್ದದ್ದನ್ನು ಉಲ್ಲೇಖಿಸಿ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸಿದರು.

ಕೊನೆಗೆ 48 ವರ್ಷ ವಯಸ್ಸಿನ, ‘ಯಹೋವನ ಸಾಕ್ಷಿಗಳು’ ಪಂಥದ ಸದಸ್ಯ ಎಂದು ಹೇಳಿಕೊಳ್ಳುವ ಡೊಮಿನಿಕ್ ಮಾರ್ಟಿನ್ ಎಂಬಾತ ಸ್ಫೋಟಕ್ಕೆ ತಾನೇ ಕಾರಣ ಎಂದು ಹೇಳಿಕೊಂಡು ಪೊಲೀಸರಿಗೆ ಶರಣಾದ. ಪ್ರಕರಣದ ಆರೋಪಿ ಮುಸ್ಲಿಂ ಅಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ, ಪ್ರಕರಣದ ತೀವ್ರತೆಯೇ ಕಡಿಮೆಯಾಗಿಬಿಟ್ಟಿತು. ಯಾವ ಮಟ್ಟಿಗೆ ಎಂದರೆ, ಗೋಧಿ ಮೀಡಿಯಾಗೆ ಅದೊಂದು ಮುಖ್ಯ ಸುದ್ದಿ ಅನ್ನಿಸಲೇ ಇಲ್ಲ. ಬಹುತೇಕ ಕನ್ನಡ ಪತ್ರಿಕೆಗಳೂ ಈ ವಿಚಾರದಲ್ಲಿ ಒಂದೇ ರೀತಿ ವರ್ತಿಸಿವೆ. ಸ್ಫೋಟದ ಸುದ್ದಿಗೆ ಪ್ರಾಶಸ್ತ್ಯ ಕೊಟ್ಟು ಅದನ್ನು ಮುಖಪುಟದಲ್ಲಿ ಪ್ರಕಟಿಸಿದ ಪತ್ರಿಕೆಗಳು, ಸ್ಫೋಟದ ಹೊಣೆ ಹೊತ್ತವನ ಬಗ್ಗೆ ಮಾತ್ರ ಒಳಪುಟಗಳಲ್ಲಿ ಸುದ್ದಿ ಪ್ರಕಟಿಸಿವೆ. ಕೆಲವು ಪತ್ರಿಕೆಗಳಂತೂ ಬಾಂಬ್ ಸ್ಫೋಟದ ಸುದ್ದಿಯ ಒಳಗೇ ಮಾರ್ಟಿನ್ ಮಾಹಿತಿಯನ್ನೂ ಅದು ಅಮುಖ್ಯ ಎನ್ನುವಂತೆ ಸೇರಿಸಿ ಕೈತೊಳೆದುಕೊಂಡಿವೆ. ಆರೋಪಿ ಒಬ್ಬ ಮುಸ್ಲಿಂ ಹೆಸರಿನ ವ್ಯಕ್ತಿಯಾಗಿದ್ದರೆ, ಎಲ್ಲ ಪತ್ರಿಕೆಗಳೂ ಅದನ್ನು ಮುಖಪುಟದ ಸುದ್ದಿಯನ್ನಾಗಿ ಪ್ರಕಟಿಸುತ್ತಿದ್ದವು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇನ್ನೂ ಕೆಲವು ಮಾಧ್ಯಮಗಳು ಮಾರ್ಟಿನ್ ಒಬ್ಬ ಮಾನಸಿಕ ಅಸ್ವಸ್ಥ ಎನ್ನುವುದನ್ನು ಹರಡಲು ಶ್ರಮಿಸುತ್ತಿವೆ. ಆರೋಪಿ ಮುಸ್ಲಿಂ ಆದರೆ, ಆತ ಭಯೋತ್ಪಾದಕ. ಆರೋಪಿ ಮುಸ್ಲಿಂ ಅಲ್ಲದಿದ್ದರೆ, ಆತ ಮಾನಸಿಕ ಅಸ್ವಸ್ಥ! ಹೀಗೆ ಬಿಂಬಿಸುವ ತಂತ್ರಗಾರಿಕೆ ಹಿಂದೆಯೂ ನಡೆದಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ ಒಬ್ಬ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿ ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಅದನ್ನು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಖಂಡಿಸಿದ್ದರು. ಅಂಥ ಪ್ರಯತ್ನ ಬಿಜೆಪಿ ಮಾಡಬಾರದು ಎಂದಿದ್ದರು.

ಹಮಾಸ್ ಇಸ್ರೇಲ್ ಸಂಘರ್ಷದ ನಂತರ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಮೋಫೋಬಿಯಾ ಹೆಚ್ಚಾಗಿದೆ. ಇನ್ನಷ್ಟು ವ್ಯಾಪಕವಾಗಿ, ವ್ಯವಸ್ಥಿತವಾಗಿ ಅದನ್ನು ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿಯ ಐಟಿ ಸೆಲ್ ಮತ್ತು ಅವರ ಪ್ರಾಯೋಜಿತ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮೋಫೋಬಿಯಾ ಹರಡುತ್ತಿವೆ. ಪ್ಯಾಲೇಸ್ತೇನಿಗಳನ್ನು ಭಯೋತ್ಪಾದಕರು, ಜಿಹಾದಿಗಳು ಎಂದು ಬ್ರಾಂಡ್ ಮಾಡಲಾಗುತ್ತಿದೆ. ಇಸ್ರೇಲಿ ಒತ್ತೆಯಾಳುಗಳ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ, 1990ರಲ್ಲಿ ಕಾಶ್ಮೀರಿ ಹಿಂದೂಗಳು ಎದುರಿಸಿದ್ದು ಇಂಥದ್ದೇ ಸಂಕಟ ಎಂದು ಸುಳ್ಳು ಹರಡಲಾಗುತ್ತಿದೆ. ಭಾರತದೊಳಗೆ ಹಲವು ಗಾಜಾ ಪಟ್ಟಿಗಳಿವೆ ಎಂದು ಹೊಸ ಕಥನಗಳನ್ನು ನಿರೂಪಿಸಲಾಗುತ್ತಿದೆ. ಇಂಥ ಪರಿಸ್ಥಿತಿಯಿಂದ ಭಾರತವನ್ನು ರಕ್ಷಿಸಲು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಬಿಂಬಿಸಲಾಗುತ್ತಿದೆ. ಅಂದರೆ, ಇಂಥ ಸುಳ್ಳಿನ ಅಭಿಯಾನಗಳ ಗುರಿ, ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರುವುದು, ಅಷ್ಟೇ. ಅದಕ್ಕಾಗಿ ಯಾರ ಮನೆಗೆ ಬೆಂಕಿ ಬಿದ್ದರೂ, ಯಾರ ಮಕ್ಕಳು ಬಲಿಯಾದರೂ ಅವರಿಗೆ ಅದು ಮುಖ್ಯವಲ್ಲ.

ಗಾಜಾ ಬಿಕ್ಕಟ್ಟಿನ ನಂತರ ಜಗತ್ತಿನ ಹಲವು ದೇಶಗಳಲ್ಲಿ ಪ್ಯಾಲೆಸ್ತೇನಿಯರಿಗೆ ಕಿರುಕುಳ ನೀಡಲಾಗುತ್ತಿದೆ. ಮುಸ್ಲಿಮರಿಗೆ ಬೆದರಿಕೆ ಒಡ್ಡಲಾಗುತ್ತಿದೆ; ಯುರೋಪ್‌ ಕೂಡ ಇದಕ್ಕೆ ಹೊರತಲ್ಲ. ತಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮುಸ್ಲಿಮರಿಗೆ ಅಮೆರಿಕ ಪ್ರವಾಸ ನಿರ್ಬಂಧ ಮರುಜಾರಿ ಮಾಡುವುದಾಗಿ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ಪೂರ್ವಗ್ರಹಗಳು ಹೆಚ್ಚಾಗುತ್ತಲೇ ಇವೆ. ಅವರನ್ನು ಅನುಮಾನದಿಂದ ನೋಡುವ, ಅವಮಾನಿಸುವ ಪ್ರಕರಣಗಳು ತೀವ್ರಗೊಳ್ಳುತ್ತಿವೆ. ಧರ್ಮಗಳನ್ನು ಆಧರಿಸಿ ಜನರನ್ನು ಪ್ರತ್ಯೇಕಿಸಿ, ಅದರ ರಾಜಕೀಯ ಲಾಭ ಪಡೆದುಕೊಳ್ಳುವುದು ಇದರ ಹಿಂದಿನ ಹುನ್ನಾರ. ಇದು ಒಂದು ಜಾಗತಿಕ ಕಾಯಿಲೆ. ರೋಗಿಷ್ಠ ಬಲಪಂಥೀಯ ರಾಜಕಾರಣವನ್ನು ಜನ ತಿರಸ್ಕರಿಸುವವರೆಗೆ ಈ ಪ್ರವೃತ್ತಿ ಅಂತ್ಯವಾಗುವುದಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X